ದೆಹಲಿ: ಕೊರೊನಾ ಭೀತಿಯಿಂದ ತತ್ತರಿಸಿ ಕಳೆದ 2 ತಿಂಗಳಿನಿಂದ ಮನೆಗಳಲ್ಲೇ ಬಂಧಿಯಾಗಿದ್ದ ಜನರು ಮನೆಯಿಂದ ಹೊರಗೆ ಓಡಾಡೋ ಲೆಕ್ಕಾಚಾರದಲ್ಲಿದ್ರು. ಆದ್ರೆ ದೆಹಲಿ ಸೇರಿ ಉತ್ತರದ ಹಲವು ರಾಜ್ಯಗಳಲ್ಲಿ ಬೀಸುತ್ತಿರೋ ಬಿಸಿಗಾಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಬೆಂಕಿಯನ್ನೇ ಉಗುಳುತ್ತಿರೋ ಬಿಸಿ ತಾಪಮಾನಕ್ಕೆ ಉತ್ತರ ಭಾರತ ಕಂಪ್ಲೀಟ್ ತತ್ತರಿಸಿಹೋಗಿದೆ. ಬರೀ ಉತ್ತರ ಮಾತ್ರವಲ್ಲ ದಕ್ಷಿಣಕ್ಕೂ ಅಪಾಯ ತಂದೊಡ್ಡೋ ಸಾಧ್ಯತೆಯಿದೆ.
ಕೊರೊನಾ ಬೆಂಕಿ ಭಯಕ್ಕೆ ತುಪ್ಪ ಸುರಿಯುತ್ತಿದೆ ಬಿಸಿಗಾಳಿ..!
ಇಡೀ ದೇಶ ಮುಂಗಾರಿಗೆ ಸಿದ್ಧವಾಗ್ತಿದ್ರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿರು ಬೇಸಿಗೆ ಶುರುವಾಗಿದೆ. ಕಳೆದ ಗುರುವಾಗದಿಂದ ಸತತ 3 ದಿನಗಳ ಕಾಲ 42ರಿಂದ 44 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಟ ತಾಪಮಾನ ದಾಖಲಾಗಿದೆ. ನಿನ್ನೆ ಭಾನುವಾರ ಒಂದೇ ದಿನ 46 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಕೆಂಡದಂಥಾ ಬಿಸಿಲಿನ ಜೊತೆಗೆ ಬಿಸಿ ಗಾಳಿ ಬೀಸುತ್ತಿರೋದು ದಿಲ್ಲಿ ಜನರನ್ನ ಹೈರಾಣಿಗಿಸಿದೆ.
ಲಾಕ್‌ಡೌನ್ 4.O ರೂಲ್ಸ್ ಸಡಿಲಿಕೆ ಮಾಡಿದ್ದರಿಂದ ಜನ ಫುಲ್ ಖುಸಿಯಾಗಿದ್ರು. ಮನೆಯಿಂದ ಹೊರಹೋಗಿ ಮತ್ತೆ ಕೆಲ್ಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಂಡಿದ್ರು. ಆದ್ರೆ ಕಾದಕಾವಲಿಯಂಥಾದ ರಣ ಬಿಸಿಲು ಕಂಡ ಮತ್ತಷ್ಟು ದಿನ ಮನೆಯಲ್ಲಿರೋದೇ ಲೇಸು ಅಂದುಕೊಳ್ತಿದ್ದಾರೆ.
ಉತ್ತರದಲ್ಲಿ ಸೂರ್ಯದೇವನ ರುದ್ರ ನರ್ತನ..!
ದೆಹಲಿಯಷ್ಟೇ ಅಲ್ಲ.. ಹರಿಯಾಣ, ಪಂಚಾಬ್, ರಾಜಸ್ಥಾನ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಸುತ್ತಮುತ್ತಲಿನ ಅನೇಕ ರಾಜ್ಯಗಳಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಲೇ ಸಾಗಿದೆ. ಮುಂದಿನ ವಾರಾಂತ್ಯದವರೆಗೂ ಇದೇ ತಾಪಮಾನ ಮುಂದುವರಿಯೋ ಸಾಧ್ಯತೆ ಇದೆ. ಜನ ಬೆಳಗ್ಗೆ 10 ರಿಂದ ಮಧ್ಯಾಹ್ನ 4ರವರೆಗೂ ಮನೆಯಿಂದ ಹೊರಬರಬಾರದಂತೆ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಸದ್ಯ ಉತ್ತರಭಾರತದಲ್ಲಿ ಹೆಚ್ಚಾಗಿರೋ ಗರಿಷ್ಟ ತಾಪಮಾನ ಹಾಗೂ ಬಿಸಿ ಗಾಳಿ ಮುಂದೆ ದಕ್ಷಿಣದ ರಾಜ್ಯಗಳಿಗೂ ವಿಸ್ತರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಧ್ಯಪ್ರದೇಶ, ಗುಜರಾತ್, ಚತ್ತೀಸ್‌ಗಢ ಹಾಗೂ ದಕ್ಷಿಣದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲೂ ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬರಲಿದ್ದು, ಬಿಸಿಗಾಳಿ ಬೀಸಲಿದೆ. ಅದೇನೆ ಇರ್ಲಿ ಕೊರೊನಾ ಹೊಡೆತಕ್ಕೆ ಕಂಗಾಲಾಗಿರೋ ದೇಶದ ನಾಗರಿಕರು ಮತ್ತೆ ಬಿರುಬಿಸಿಲಿನಿಂದ ಬಳಲಿ ಬೆಂಡಾಗ್ತಿರೋದಂತೂ ಸತ್ಯ.