ಜ್ಞಾನವಾಪಿ ಮಸೀದಿ ಪೋಸ್ಟ್ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ವಿವಿ ಪ್ರೊಫೆಸರ್ ಲಾಲ್ ಗೆ ಜಾಮೀನು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 21, 2022 | 8:28 PM

ಧರ್ಮದ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷದ ದಳ್ಳುರಿಯನ್ನು ಉತ್ತೇಜಿಸಿ ಮತ್ತು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನದ ಅರೋಪದಲ್ಲಿ ಉತ್ತರ ದೆಹಲಿ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಲಾಲ್ ಅವರನ್ನು ಬಂಧಿಸಿದ್ದರು.

ಜ್ಞಾನವಾಪಿ ಮಸೀದಿ ಪೋಸ್ಟ್ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ವಿವಿ ಪ್ರೊಫೆಸರ್ ಲಾಲ್ ಗೆ ಜಾಮೀನು
ಪ್ರೊಫೆಸರ್ ರತನ್ ಲಾಲ್
Image Credit source: DNA India
Follow us on

ನವದೆಹಲಿ: ವಾರಣಾಸಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ (Gyanvapi Mosque Complex) ಶಿವಲಿಂಗ ಪತ್ತೆಯಾಗಿರುವುದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಹಾಕಿದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಬಂಧನಕ್ಕೊಳಗಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ (Hindu Collège) ಇತಿಹಾಸದ ಪ್ರೊಫೆಸರ್ ರತನ್ ಲಾಲ್ (Ratan Lal) ಅವರಿಗೆ ಕೋರ್ಟ್ ಜಾಮೀನು ನೀಡಿದೆ. ಅವರ ಪೋಸ್ಟ್ ಅನ್ನು ವಿಡಂಬನೆಯ ವಿಫಲ ಯತ್ನ ಎಂದು ಹೇಳಿರುವ ನ್ಯಾಯಾಲಯವು, ‘ಒಬ್ಬ ನೊಂದ ವ್ಯಕ್ತಿಯ ವೈಯಕ್ತಿಕ ಭಾವೆನಗಳು ಒಂದಿಡೀ ಸಮುದಾಯವನ್ನು ಪ್ರತಿನಿಧಿಸಲಾರವು, ಲಭ್ಯವಿರುವ ವಾಸ್ತವಿಕತೆ ಅಂಶಗಳು ಮತ್ತ ಮತ್ತು ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡು ಅಂಥ ನೊಂದ ಭಾವನೆಗಳಿಗೆ ಸಂಬಂಧಿಸಿದ ದೂರನ್ನು ನೋಡಬೇಕಾಗುತ್ತದೆ,’ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಅದರೆ, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಗೂ ಸಂದರ್ಶನಗಳನ್ನು ಹಾಕದಂತೆ ಲಾಲ್ ಅವರಿಗೆ ನ್ಯಾಯಾಲಯ ತಾಕೀತು ಮಾಡಿದೆ.

‘ಸಾರ್ವಜನಿಕರು ಮತ್ತು ತನ್ನ ಸುತ್ತಮುತ್ತಲಿನ ಜನಗಳ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಅರೋಪಿಯು ಈ ಕೃತ್ಯ ಮಾಡದಂತಿರಬಹುದಿತ್ತು. ಆದರೆ ಅವರ ಪೋಸ್ಟ್ ಕ್ಷಮಾರ್ಹ ಅಲ್ಲವಾದರೂ ಎರಡು ಸಮುದಾಯಗಳ ದ್ವೇಷ ಹುಟ್ಟುವಂತೆ ಮಾಡುವ ಪ್ರಯತ್ನ ಅದರಲ್ಲಿ ಕಾಣುವುದಿಲ್ಲ,’ ಎಂದು ನ್ಯಾಯಾಂಗ ವಶಕ್ಕೆ ಒಪ್ಪಿಸುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಲಯ ತನ್ನ ಆದೇಶದಲ್ಲಿ ಹೇಳಿದೆ.

ಧರ್ಮದ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷದ ದಳ್ಳುರಿಯನ್ನು ಉತ್ತೇಜಿಸಿ ಮತ್ತು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನದ ಅರೋಪದಲ್ಲಿ ಉತ್ತರ ದೆಹಲಿ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಲಾಲ್ ಅವರನ್ನು ಬಂಧಿಸಿದ್ದರು. ಲಾಲ್ ಅವರನ್ನು ಶನಿವಾರ ಕೋರ್ಟ್ ಮುಂದೆ ಹಾಜರುಪಡಿಸಿದ ಬಳಿಕ ಅವರ ವಕೀಲ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು.

ಅವರ ವಿರುದ್ಧ 6 ದೂರುಗಳು ದಾಖಲಾಗಿವೆ ಮತ್ತು ಅವುಗಳ ತನಿಖೆ ನಡೆಸಬೇಕಿದೆ ಎಂದು ಹೇಳಿದ ದೆಹಲಿ ಪೊಲೀಸ್ ಲಾಲ್ ಅವರನ್ನು 14-ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸುವಂತೆ ಮನವಿ ಮಾಡಿತ್ತು.

‘ಒಬ್ಬ ವಿದ್ಯಾವಂತ ವ್ಯಕ್ತಿಯಿಂದ ಇಂಥ ಕೃತ್ಯವನ್ನು ನಿರೀಕ್ಷಿಸಲಾಗದು,’ ಎಂದು ಹೇಳಿದ ದೆಹಲಿ ಪೊಲೀಸ್ ವಕೀಲರು, ಈ ಪ್ರೊಫೆಸರ್ ಯೂಟ್ಯೂಬ್ ವಿಡಿಯೋಗಳಲ್ಲಿ ತಮ್ಮ ಪೋಸ್ಟ್ ಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರು.

ನ್ಯಾಯಾಲಯ್ದಲ್ಲಿ ವಾದಿಸಿದ ಲಾಲ್ ಅವರ ವಕೀಲ, ‘ತಮ್ಮ ಕಕ್ಷಿದಾರನ ಬಂಧನ ಕಾನೂನಿನ ದುರುಪಯೋಗವಲ್ಲದೆ ಬೇರೇನೂ ಅಲ್ಲ,’ ಎಂದರು. ಇದು ಹೀಗೆಯೇ ಮುಂದುವರಿದರೆ, ಬುದ್ಧಿಜೀವಿಗಳೆಲ್ಲ ಜೈಲು ಪಾಲಾಗಬೇಕಾಗುತ್ತದೆ. ಇದೊಂದು ಪ್ರಕರಣವೇ ಅಲ್ಲ, ಎಫ್ ಐ ಆರ್ ಕೂಡ ದೆಹಲಿ ಪೊಲೀಸ್ ದಾಖಲಿಸಿಲ್ಲ, ನೋಟೀಸ್ ನೀಡದೆ ನೇರವಾಗಿ ಲಾಲ್ ಅವರನ್ನು ಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಬೇಕು ಎಂದು ಅವರು ಹೇಳಿದರು.

‘ಅದು ಎಲೆಕ್ಟ್ರಾನಿಕ್ ಸಾಕ್ಷ್ಯವಾಗಿದ್ದರಿಂದ ನೋಟೀಸ್ ನೀಡಿದ್ದರೆ ಅದನ್ನು ಒಂದದು ಕ್ಲಿಕ್ ಮೂಲಕ ಅಳಿಸಿಬಿಡಲಾಗುತಿತ್ತು,’ ಎಂದು ಪೊಲೀಸ ಪರ ವಕೀಲರು ಹೇಳಿದರು.
ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿರುವ ಪೊಲೀಸರು, ಆರೋಪಿಯು ಇನ್ನಷ್ಟು ಅಪರಾಧಗಳನ್ನು ಎಸೆಗದಂತೆ ತಡೆಯಲು ಬಂಧಿಸುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.

ಲಾಲ್ ಅವರಿಗೆ ಜಾಮೀನು ನೀಡಿದರೆ ಸಮಾಜಕ್ಕೆ ಒಂದು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಜಾಮೀನು ಮೇಲೆ ಬಿಡುಗಡೆ ಮಾಡಿದರೆ, ಇಂಥ ಮನಸ್ಥಿತಿಯ ವ್ಯಕ್ತಿಗೆ ಈ ಬಗೆಯ ಪೋಸ್ಟ್ ಹಾಕುವುದನ್ನು ಮುಂದಿವರೆಸಲು ಉತ್ತೇಜಿಸದಂತಾಗುತ್ತದೆ, ಎಂದು ಪೊಲೀಸ ಪರ ವಕೀಲ ಹೇಳಿದರು.

ನನ್ನ ಕಕ್ಷಿದಾರನ ಸೋಶಿಯಲ್ ಮೀಡಿಯಾ ಪೋಸ್ಟಗಳಿಂದ ಹಿಂಸೆ ತಲೆದೋರಿದ ಒಂದೇ ಒಂದು ಉದಾಹರಣೆ ಇಲ್ಲ. ಪರಿಸ್ಥಿತಿ ಹಾಗಿರುವಾಗ ಅವರ ವಿರುದ್ಧ ಪೊಲೀಸರು ಅದ್ಹೇಗೆ ಸೆಕ್ಷನ್ 153 ಎ (ಎರಡು ಗುಂಪುಗಳ ನಡುವೆ ವೈರತ್ವ ಉತ್ತೇಜಿಸುವುದು) ವಿಧಿಸಿತ್ತಾರೆ,’ ಎಂದು ಲಾಲ್ ಅವರ ವಕೀಲ ವಾದಿಸಿದರು.

‘ಒಬ್ಬ ವ್ಯಕ್ತಿಯಲ್ಲಿ ಸಹಿಷ್ಣುತೆ ಕಡಿಮೆಯಿದ್ದರೆ ನಾನ್ಹೇಗೆ ಅದಕ್ಕೆ ಜವಾಬ್ದಾರನಾಗುತ್ತೇನೆ? ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ಇಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಈ ಎಫ್ಐ ಆರ್ ಅನ್ನು ರದ್ದುಗೊಳಿಸಬೇಕು’ ಎಂದು ಲಾಲ್ ಅವರ ವಕೀಲ ಜಾಮೀನು ಕೋರುತ್ತಾ ವಾದಿಸಿದರು.

ದೆಹಲಿಯ ವಕೀಲೊಬ್ಬರು ದಾಖಲಿಸಿದ ದೂರಿನ ಆಧಾರದಲ್ಲಿ ಲಾಲ್ ವಿರುದ್ಧ ಮಂಗಳವಾರ ರಾತ್ರಿ ಎಫ್ ಐ ಅರ್ ದಾಖಲಿಸಲಾಗಿತ್ತು. ಇತ್ತಿಚಿಗೆ ಲಾಲ್ ಅವರು ಶಿವಲಿಂಗ ಕುರಿತು ಅವಹೇಳನಕಾರಿ, ಜನರ ಭಾವನೆ ಕೆರಳಿಸುವ ಟ್ವೀಟ್ ಶೇರ್ ಮಾಡಿದ್ದರು ಮತ್ತು ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂದು ದೂರಿನಲ್ಲಿ ವಿನೀತ್ ಜಿಂದಾಲ್ ಹೆಸರಿನ ವಕೀಲ ಹೇಳಿದ್ದರು.

ತಮ್ಮ ಪೋಸ್ಟ್ ಸಮರ್ಥಿಸಿಕೊಂಡಿರುವ ಲಾಲ್ ಅವರು, ‘ಭಾರತದಲ್ಲಿ ನೀವು ಯಾವುದೇ ವಿಷಯದ ಬಗ್ಗೆ ಮಾತಾಡಿದರೂ ಬೇರೆಯವರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹಾಗಾಗಿ ಇದು ಹೊಸದೇನೂ ಅಲ್ಲ. ನಾನೊಬ್ಬ ಇತಿಹಾಸಕಾರನಾಗಿರುವುದರಿಂದ ಹಲವಾರು ಅಂಶಗಳನ್ನು ಗಮನಿಸಿದ್ದೇನೆ. ಅವುಗಳನ್ನು ದಾಖಲಿಸುವಾಗ ಬಹಳ ಎಚ್ಚರಿಕೆ ಮತ್ತು ಜಾಗರೂಕತೆಯಿಂದ ಪದಪ್ರಯೋಗ ಮಾಡಿದ್ದೇನೆ. ನನ್ನ ಪೋಸ್ಟ್ ಅನ್ನು ಸಮರ್ಥಿಸುತ್ತೇನೆ, ಎಂದಿದ್ದಾರೆ.

ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ಟ್ವೀಟ್ ನಂತರ ತಮ್ಮ 20-ವರ್ಷದ ಮಗನಿಗೆ ಪೇಸ್ಬುಕ್ ಮೆಸೆಂಜರ್ ನಲ್ಲಿ ಬೆದರಿಕೆಗಳು ಬರುತ್ತಿವೆ ಎಂದು ಲಾಲ್ ಕಳೆದ ವಾರ ಟ್ವೀಟ್ ಮಾಡಿದ್ದರು.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ