100 ವರ್ಷಗಳ ಹಿಂದೆ ಕಳುವಾಗಿದ್ದ ಅನ್ನಪೂರ್ಣಾ ವಿಗ್ರಹ ಮರಳಿ ಭಾರತಕ್ಕೆ: ಮನ್​ ಕಿ ಬಾತ್​ನಲ್ಲಿ ಮೋದಿ ಖುಷಿ

|

Updated on: Nov 29, 2020 | 1:37 PM

ಕರೊನಾ ಸಾಂಕ್ರಾಮಿಕ ಮಧ್ಯೆಯೂ ಜನರು ವಿನೂತನ ರೂಪದಲ್ಲಿ ಪಾರಂಪರಿಕ ದಿನವನ್ನು ಆಚರಿಸಿದ್ದಾರೆ. ಇವತ್ತು ಎಷ್ಟೋ ಮ್ಯೂಸಿಯಂಗಳು, ಲೈಬ್ರರಿಗಳು ಡಿಜಿಟಲೀಕರಣ ಅಳವಡಿಸಿಕೊಳ್ಳುತ್ತಿವೆ. ಅದರಲ್ಲೂ ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಈ ಕ್ಷೇತ್ರದಲ್ಲಿ ಶ್ಲಾಘನೀಯ ಕಾರ್ಯನಿರ್ವಹಿಸಿದೆ ಎಂದು ಮೋದಿ ಹೇಳಿದರು.

100 ವರ್ಷಗಳ ಹಿಂದೆ ಕಳುವಾಗಿದ್ದ ಅನ್ನಪೂರ್ಣಾ ವಿಗ್ರಹ ಮರಳಿ ಭಾರತಕ್ಕೆ: ಮನ್​ ಕಿ ಬಾತ್​ನಲ್ಲಿ ಮೋದಿ ಖುಷಿ
ಪ್ರಧಾನಿ ನರೇಂದ್ರ ಮೋದಿ (ಎಎನ್​ಐ ಚಿತ್ರ)
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ 70ನೇ ಮನ್​ ಕೀ ಬಾತ್​ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಪ್ರಾರಂಭದಲ್ಲೇ ಒಂದು ಒಳ್ಳೇ ಸುದ್ದಿಯನ್ನೂ ತಿಳಿಸಿದರು.

ನಿಮಗೆಲ್ಲ ನಮಸ್ಕಾರ.. ವಾರಾಣಸಿಯಿಂದ 1913ರಲ್ಲಿ ಕದ್ದು, ವಿದೇಶಕ್ಕೆ ಸಾಗಿಸಲಾಗಿದ್ದ ದೇವಿ ಅನ್ನಪೂರ್ಣೇಶ್ವರಿಯ ವಿಗ್ರಹವನ್ನು ಕೆನಡಾದಿಂದ ಭಾರತಕ್ಕೆ ವಾಪಸ್​ ತರಲಾಗಿದೆ. ವಿಗ್ರಹ ಕಳುವಾಗಿ 100 ವರ್ಷವೇ ಕಳೆದುಹೋಗಿತ್ತು. ಈಗ ಮತ್ತೆ ವಾಪಸ್ ಬರುತ್ತಿರುವುದು ಇಡೀ ದೇಶವೇ ಹೆಮ್ಮೆ ಪಡುವ ವಿಚಾರ. ಈ ಬಗ್ಗೆ ಕೆನಡಾ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇಂಥ ಹಲವು ವಿಗ್ರಹಗಳು ಕಳವಾಗಿ ವಿದೇಶ ಸೇರಿದ್ದು, ಅವನ್ನೆಲ್ಲ ತರಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಮ್ಯೂಸಿಯಂ ಡಿಜಟಲೀಕರಣ
ಕೊರೊನಾ ನೆರಳಿನಲ್ಲಿಯೂ ಜನರು ವಿನೂತನ ರೂಪದಲ್ಲಿ ಪಾರಂಪರಿಕ ದಿನವನ್ನು ಆಚರಿಸಿದ್ದಾರೆ. ಇವತ್ತು ಎಷ್ಟೋ ಮ್ಯೂಸಿಯಂಗಳು, ಲೈಬ್ರರಿಗಳು ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿವೆ. ಅದರಲ್ಲೂ ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಈ ಕ್ಷೇತ್ರದಲ್ಲಿ ಶ್ಲಾಘನೀಯ ಕಾರ್ಯನಿರ್ವಹಿಸಿದೆ. 10 ವರ್ಚ್ಯುವಲ್​ ಗ್ಯಾಲರಿಗಳನ್ನು ಪರಿಚಯಿಸುತ್ತಿದ್ದು, ನೀವು ಮನೆಯಲ್ಲೇ ಕುಳಿತು, ಮ್ಯೂಸಿಯಂ ವೀಕ್ಷಿಸಬಹುದಾಗಿದೆ ಎಂದು ಪ್ರಧಾನಿ ತಿಳಿಸಿದರು.

ಜೀವನಶೈಲಿ ಬದಲಿಸಿದ ಕೊರೊನಾ
ಕರೊನಾ ವೈರಸ್ ಕಾಲಿಟ್ಟ ಮೇಲೆ ನಮ್ಮ ಜೀವನಶೈಲಿ ತುಂಬ ಬದಲಾಗಿದೆ. ಹಾಗೇ ಪ್ರಕೃತಿಯನ್ನು, ನಿಸರ್ಗದ ಮಹತ್ವ ಅರಿಯಲು, ಅದರ ಸೌಂದರ್ಯ ಆಸ್ವಾದಿಸಲು ಒಂದು ಅವಕಾಶವನ್ನೂ ಕೊಟ್ಟಿದೆ. ಪ್ರಕೃತಿಯೆಡೆಗಿನ ನಮ್ಮ ಮನೋಭಾವ ಬದಲಾಗಿದೆ. ಈಗಂತೂ ಚಳಿಗಾಲ ಎದುರಾಗುತ್ತಿದೆ..ಹಾಗೇ ನಿಸರ್ಗವೂ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದೆ.

ಕೆಲವು ದಿನಗಳಿಂದ ಮನಮೋಹಕ ಚೆರಿ ಹೂವುಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ವೈರಲ್​ಆಗುತ್ತಿವೆ. ಇವು ಜಪಾನ್​ದಲ್ಲಿ. ಮೇಘಾಲಯದ ಶಿಲ್ಲಾಂಗ್​ನಲ್ಲಿ ಅರಳಿದವು ಎಂದು ಪ್ರಕೃತಿ ಸೌಂದರ್ಯದ ಬಗ್ಗೆ ಮಾತನಾಡಿದರು.

ನಮ್ಮ ಸಂಸ್ಕೃತಿ ಜಗತ್ತಿನ ಆಕರ್ಷಣೆ
ಭಾರತದ ಸಂಸ್ಕೃತಿ ಹಾಗೂ ಅಧ್ಯಾತ್ಮ ಇಡೀ ಜಗತ್ತಿನ ಆಕರ್ಷಣೆ. ಇವುಗಳನ್ನು ಅರಸಿ ಅದೆಷ್ಟೋ ಜನ ವಿದೇಶಿಗರು ಬಂದು ಇಲ್ಲಿ ನೆಲೆಸಿದ್ದಾರೆ. ಕೆಲವರಂತೂ ಇಲ್ಲೇ ನೆಲೆಸಿದ್ದಾರೆ. ಮತ್ತೊಂದಷ್ಟು ಜನರು ಭಾರತದ ಸಂಸ್ಕೃತಿಯ ರಾಯಭಾರಿಯಾಗಿ ತಮ್ಮ ದೇಶಕ್ಕೆ ಹೋಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಜೋನಸ್​ ಮಸೆಟ್ಟಿ ಎಂಬುವರನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಅವರು ವಿಶ್ವನಾಥ ಎಂಬ ಹೆಸರಿನಲ್ಲಿ, ಬ್ರೆಜಿಲ್​ನಲ್ಲಿ ವೇದಾಂತ, ಭಗವದ್ಗೀತೆಗಳನ್ನು ಉಪದೇಶ ಮಾಡುತ್ತಿದ್ದಾರೆ ಎಂದು ಕೇಳಲ್ಪಟ್ಟೆ. ಪೆಟ್ರೋಪೊಲಿಸ್ ಎಂಬಲ್ಲಿ ವಿಶ್ವವಿದ್ಯಾ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರಂತೆ. ಮೆಕ್ಯಾನಿಕಲ್ ಇಂಜಿನಿಯರಿಂಗ್​ ಮುಗಿಸಿದ್ದ ಜೋನಾಸ್ ಮೊದಲು ಸ್ಟಾಕ್ ಮಾರ್ಕೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಭಾರತದ ಸಂಸ್ಕೃತಿ, ಅಧ್ಯಾತ್ಮದತ್ತ ಆಕರ್ಷಿತರಾಗಿ ಇಲ್ಲಿ ಬಂದು ಕೊಯಮತ್ತೂರಿನ ಗುರುಕುಲದಲ್ಲಿ 4 ವರ್ಷ ಅಭ್ಯಾಸ ಮಾಡಿದರು. ಅವರು ಆನ್​ಲೈನ್ ಮೂಲಕವೂ ಉಪದೇಶ ಮಾಡುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸುತ್ತಿದ್ದಾರೆ ಎಂದು ಮೋದಿಯವರು ತಿಳಿಸಿದರು.

ಈ ಬಾರಿ ಮನ್​ ಕೀ ಬಾತ್​ನಲ್ಲಿ ಮತ್ತೊಮ್ಮೆ ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡಿ, ಹಬ್ಬದ ಸಂದರ್ಭಗಳಲ್ಲಿ ಸ್ಥಳೀಯವಾಗಿ ತಯಾರಾದ ವಸ್ತುಗಳನ್ನೇ ಕೊಳ್ಳಿ ಎಂದು ಹೇಳಿದ ಮೋದಿ, ಯೋಗಿ ಅರಬಿಂದೋ, ಡಾ. ಸಲೀ ಅಲಿ, ಗುರುನಾನಕ್​ ದೇವ್​ ಜಿ ಅವರನ್ನೂ ನೆನಪಿಸಿಕೊಂಡರು. ಭಾರತದ ಪರಂಪರೆ, ಅಧ್ಯಾತ್ಮ, ಭಾಷೆಯ ಬಗ್ಗೆ ಹೆಚ್ಚು ಒತ್ತುಕೊಟ್ಟ ಪ್ರಧಾನಿ, ಈ ಬಾರಿ ನ್ಯೂಜಿಲ್ಯಾಂಡ್​ನ ನೂತನ ಎಂಪಿ ಡಾ. ಗೌರವ್ ಶರ್ಮಾ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೆನಪಿಸಿಕೊಂಡು, ಶ್ಲಾಘಿಸಿದರು.

ಕೊರೊನಾ ಅಪಾಯ ಮುಗಿದಿಲ್ಲ

ಕೊರೊನಾಕ್ಕೆ ಸಂಬಂಧಪಟ್ಟ ಲಾಕ್​ ಡೌನ್​ ತೆರವುಗೊಳಿಸಿದ ಮೇಲೆ ಪ್ರತಿಯೊಬ್ಬರೂ ಲಸಿಕೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಆದರೆ ಕರೊನಾ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ. ಸ್ವಲ್ಪ ಸಡಿಲವಾದರೂ ಸೋಂಕಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

Published On - 1:20 pm, Sun, 29 November 20