ಅಂದು ಸಂಸದನಾಗಿ, ಇಂದು ಶಾಸಕನಾಗಿ: ಪಕ್ಷಾಂತರ ನಿಷೇಧ ಕಾಯ್ದೆಯಡಿ ಲಾಲ್ಡುಹೋಮಾಗೆ ಗೇಟ್ಪಾಸ್
ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಂಡ ಪ್ರಪ್ರಥಮ ಲೋಕಸಭಾ ಸದಸ್ಯ ಎಂಬ ಅಪಖ್ಯಾತಿಗೂ ಇವರು ಪಾತ್ರರಾಗಬೇಕಾಯಿತು. ಇದೀಗ, ಇದೇ ಕಾಯ್ದೆಯಡಿಯಲ್ಲಿ ಶಾಸಕನಾಗಿ ಅನರ್ಹಗೊಂಡಿದ್ದಾರೆ.
ಐಜ್ವಾಲ್: ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಶಾಸಕ ಲಾಲ್ಡುಹೋಮಾರನ್ನು ಕಳೆದ ಶುಕ್ರವಾರ ಮಿಜೋರಾಂ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದಿದ್ದ ಲಾಲ್ಡುಹೋಮಾ ತದ ನಂತರ ಜೊರಾಂ ಪೀಪಲ್ಸ್ ಮೂವ್ಮೆಂಟ್(ZPM) ಪಕ್ಷ ಸೇರಿದ್ದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಲಾಗಿದೆ.
ಲಾಲ್ಡುಹೋಮಾ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಈ ಹಿಂದೆ ತಾವಿದ್ದ ಕಾಂಗ್ರೆಸ್ ಪಕ್ಷವನ್ನು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು.
ಆದರೆ ಇದೀಗ, ಜೊರಾಂ ಪೀಪಲ್ಸ್ ಮೂವ್ಮೆಂಟ್(ZPM) ಪಕ್ಷ ಸೇರಿದ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಲಾಲ್ಡುಹೋಮಾರ ಸದಸ್ಯತ್ವ ರದ್ದಾಗಿದೆ ಎಂದು ಸ್ಪೀಕರ್ ಲಾಲ್ರೆನ್ಲಿಯಾನಾ ಸೈಲೊ ಹೇಳಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಲಾಲ್ಡುಹೋಮಾ 1988ರಲ್ಲಿ ಲೋಕಸಭಾ ಸದಸ್ಯರಾಗಿದ್ದಾಗ ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ನೀಡಿದ್ದಕ್ಕೆ ಇದೇ ಕಾಯ್ದೆ ಅಡಿಯಲ್ಲಿ ಇವರನ್ನು ಸಂಸದನಾಗಿ ಅನರ್ಹಗೊಳಿಸಲಾಗಿತ್ತು. ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಂಡ ಪ್ರಪ್ರಥಮ ಲೋಕಸಭಾ ಸದಸ್ಯ ಎಂಬ ಅಪಖ್ಯಾತಿಗೂ ಇವರು ಪಾತ್ರರಾಗಬೇಕಾಯಿತು. ಇದೀಗ, ಇದೇ ಕಾಯ್ದೆಯಡಿಯಲ್ಲಿ ಶಾಸಕನಾಗಿ ಅನರ್ಹಗೊಂಡಿದ್ದಾರೆ.
ಸಂವಿಧಾನದ 10ನೇ ಶೆಡ್ಯೂಲ್ನ ಪ್ಯಾರಾ2(2) ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಲಾಲ್ಡುಹೋಮಾರನ್ನು ಅನರ್ಹಗೊಳಿಸುವಂತೆ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ನ 12 ಶಾಸಕರು ಸ್ಪೀಕರ್ಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲನೆಯ ಆಧಾರದ ಮೇಲೆ ಲಾಲ್ಡುಹೋಮಾ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ ಎಂದು ಸ್ಪೀಕರ್ ಸೈಲೋ ಹೇಳಿದ್ದಾರೆ.