ಚೆನ್ನೈ: ತಮಿಳುನಾಡಿನಲ್ಲಿ ವಿಧಾನ ಸಭೆ ಸಮೀಪಿಸುತ್ತಿರುವ ಬೆನ್ನಲ್ಲೇ, ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಮಗಳು ಸೆಂಥಮರೈ, ಅಳಿಯ ಶಬರೀಶನ್ ಅವರ ಚೆನ್ನೈನ ಮನೆ ಸೇರಿ, ದಂಪತಿಗೆ ಸೇರಿದ ಒಟ್ಟು4 ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು. ಈ ಐಟಿ ದಾಳಿಯಿಂದ ಕೋಪಗೊಂಡಿರುವ ಡಿಎಂಕೆ ಪಕ್ಷವೀಗ ಚುನಾವಣಾ ಆಯೋಗದ ಕದ ತಟ್ಟಿದೆ. ಹೀಗೆ ಚುನಾವನಾ ಕೆಲವೇ ದಿನ ಇರುವಾಗ ದಾಳಿ ನಡೆಸುವುದು, ಚುನಾವಣಾ ಕಾನೂನುಗಳ ಉಲ್ಲಂಘನೆ ಎಂದು ಆರೋಪಿಸಿ, ಆದಾಯ ತೆರಿಗೆ ಇಲಾಖೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿ ಕೆಲವೆಡೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದ ಮಾಹಿತಿ ಸಿಕ್ಕಿದ್ದ ಹಿನ್ನೆಲೆಯಲ್ಲಿ ತಮಿಳುನಾಡಿನ ವಿವಿಧೆಡೆ ದಾಳಿ ನಡೆಸಿದ್ದಾಗಿ ನೇರ ತೆರಿಗೆಗಳ ಕೇಂದ್ರ ಮಂಡಳಿ ಹೇಳಿದೆ. ಇನ್ನು ದಾಳಿಯ ವೇಳೆ, ತೆರಿಗೆ ವಂಚನೆಗೆ ಸಂಬಂಧಪಟ್ಟ ಹಲವು ವಿಚಾರಗಳು ಗೊತ್ತಾಗಿವೆ. ಡಿಸ್ಟಲರಿ, ಸಾರಾಯಿ ಮಳಿಗೆಗಳು, ರಿಯಲ್ ಎಸ್ಟೇಟ್ ಉದ್ಯಮಗಳನ್ನು ನಡೆಸುತ್ತಿರುವರ ಮೇಲೆ ದಾಳಿ ನಡೆಸಲಾಗಿದೆ ಎಂದೂ ಹೇಳಿದೆ.
ಶುಕ್ರವಾರ ಬೆಳಗ್ಗೆಯಿಂದ ಐಟಿ ಅಧಿಕಾರಿಗಳು ತಮಿಳುನಾಡಿನಲ್ಲಿ ಶೋಧ ಕಾರ್ಯ ಪ್ರಾರಂಭ ಮಾಡಿದರು. ಸ್ಟಾಲಿನ್ ಪುತ್ರಿ-ಅಳಿಯ, ಡಿಎಂಕೆಯ ಕರೂರ್ ಅಭ್ಯರ್ಥಿ ಮತ್ತು ಮಾಜಿ ಸಚಿವ ಸೆಂಥಿಲ್ ಬಾಲಾಜಿಯವರಿಗೆ ಸಂಬಂಧಪಟ್ಟ ಸ್ಥಳಗಳು, ಎಸ್ಎನ್ಜೆ ಡಿಸ್ಟಿಲರಿ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿತ್ತು. ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಡಿಎಂಕೆ ನಾಯಕ ಸ್ಟಾಲಿನ್, ಬಿಜೆಪಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣೆಯಲ್ಲಿ ಹೇಗೂ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪ್ರತಿಪಕ್ಷಗಳ ಮೇಲೆ ಹೀಗೆ ಐಟಿ ದಾಳಿ ಮಾಡಿಸುತ್ತಿದೆ. ನಾವು ಇಲ್ಲಿ AIADMK ಪಕ್ಷದ ಗುಲಾಮರಲ್ಲ. ಇಂಥ ಬೆದರಿಕೆಗಳಿಗೆಲ್ಲ ಅವರ ಕಾಲಬುಡಕ್ಕೆ ಹೋಗಿ ಬೀಳುವುದಿಲ್ಲ. ನಮಗೆ ಯಾರ ಭಯವೂ ಇಲ್ಲ. ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಷ್ಟು ದಿನ ನಿಮಗೆ ಹಣಕಾಸಿನ ನೆರವು ಕೊಟ್ಟಿದ್ಯಾರು? ಸಿಡಿ ಸಂತ್ರಸ್ತೆಗೆ ಎಸ್ಐಟಿ ಅಧಿಕಾರಿಗಳ ನೇರ ಪ್ರಶ್ನೆ
ದೇಶದಲ್ಲಿ ಇಂದು 89 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲು; 714 ಮಂದಿ ಸಾವು
Published On - 12:59 pm, Sat, 3 April 21