Long Covid: ಕೊರೊನಾ ನೆಗೆಟಿವ್​ ವರದಿಯಾದರೂ ನಿರ್ಲಕ್ಷಿಸದಿರಿ; ದೀರ್ಘಕಾಲದವರೆಗೆ ಲಕ್ಷಣಗಳಿರಬಹುದು

|

Updated on: Apr 23, 2021 | 2:30 PM

ಕೊವಿಡ್​ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಬಂದರೂ ಕೂಡಾ ಸುಮಾರು 6 ತಿಂಗಳವರೆಗೆ ಕೊರೊನಾ ಸಂಬಂಧಿತ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ.

Long Covid: ಕೊರೊನಾ ನೆಗೆಟಿವ್​ ವರದಿಯಾದರೂ ನಿರ್ಲಕ್ಷಿಸದಿರಿ; ದೀರ್ಘಕಾಲದವರೆಗೆ ಲಕ್ಷಣಗಳಿರಬಹುದು
ಪ್ರಾತಿನಿಧಿಕ ಚಿತ್ರ
Follow us on

ಪ್ರತಿ ನಿತ್ಯ ಕೊರೊನಾ ಸೋಂಕು ಹರಡುವ ಮಟ್ಟ ಏರುತ್ತಲೇ ಇದೆ. ಪ್ರತಿನಿತ್ಯವೂ ಹೊಸ ಪ್ರಕರಣಗಳ ಸಂಖ್ಯೆ ವೇಗವಾಗಿ ಹರಡುತ್ತಿದೆ. ಅನೇಕ ಅಧ್ಯಯನಗಳ ಪ್ರಕಾರ, ಕೊವಿಡ್​ ಲಕ್ಷಣಗಳು ಸುಮಾರು ಶೇ.50ರಷ್ಟು ಸಾಮ್ಯ ಗುಣಲಕ್ಷಣಗಳನ್ನು ಹೊಂದಿದೆ. ಸೋಂಕು ಗುಣಪಡಿಸಿದ ನಂತರವೂ ಆರೋಗ್ಯವು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿಲ್ಲ. ಅಂದರೆ ಕೊವಿಡ್​ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಬಂದರೂ ಕೂಡಾ ಸುಮಾರು 6 ತಿಂಗಳವರೆಗೆ ಕೊರೊನಾ ಸಂಬಂಧಿತ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಅದನ್ನು ಲಾಂಗ್​ ಕೊವಿಡ್ (Long Covid) ಅಥವಾ ಪೋಸ್ಟ್ ಕೊವಿಡ್ ಸಿಂಡ್ರೋಮ್ (Post Covid Syndrome)​ ಎಂದು ಕರೆಯಲಾಗುತ್ತದೆ.

ಲಾಂಗ್​ ಕೊವಿಡ್​ ಎಂದರೇನು?
ಕೊವಿಡ್ ಸೋಂಕಿಗೆ ಒಳಗಾದ ರೋಗಿಗಳು ಸಾಮಾನ್ಯವಾಗಿ 1 ರಿಂದ 2 ವಾರಗಳವರೆಗೆ ಚೇತರಿಸಿಕೊಳ್ಳುತ್ತಾರೆ ಎಂದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ. ಆದರೆ ತೀವ್ರವಾಗಿ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಚೇತರಿಸಿಕೊಳ್ಳಲು 6 ರಿಂದ 7 ವಾರಗಳು ಬೇಕಾಗುತ್ತದೆ. ಟೈಮ್ಸ್​ ಆಫ್​ ಇಂಡಿಯಾ ವರದಿಯ ಪ್ರಕಾರ, ರೋಗಿಯು ಕೊವಿಡ್​-19 ನಿಂದ ಚೇತರಿಸಿಕೊಂಡ ನಂತರವೂ ಅಂದರೆ ಕೊರೊನಾ ನೆಗೆಟಿವ್​ ವರದಿ ಬಂದರೂ ಕೂಡಾ ಕೊವಿಡ್​ ಲಕ್ಷಣಗಳಾದ ಕೆಮ್ಮು, ತಲೆನೋವು, ಮೈ-ಕೈ ನೋವು, ಆಯಾಸ, ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಲಾಂಗ್​ ಕೊವಿಡ್​ ಎಂದು ಕರೆಯಲಾಗುತ್ತದೆ.

ಪುರುಷರಿಗಿಂತ ಮಹಿಳೆಯರಲ್ಲಿ ಲಾಂಗ್​ ಕೊವಿಡ್ ಸಮಸ್ಯೆ ಹೆಚ್ಚು
ಬ್ರಿಟನ್ ರಾಷ್ಟ್ರೀಯ ಕಚೇರಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ 20 ಸಾವಿರ ಜನರು ಭಾಗವಹಿಸಿದ್ದು ಇದರ ಅಂಕಿಅಂಶಗಳ ಪ್ರಕಾರ, ಬಹುಬೇಗ ಚೇತರಿಸಿಕೊಂಡ ನಂತರವೂ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವುದು ತಿಳಿದು ಬಂದಿದೆ. ರೋಗದ ಲಕ್ಷಣವು 5 ವಾರದಿಂದ ಸುಮಾರು 12 ವಾರಗಳವರೆಗೆ ಕಾಣಿಸಿಕೊಂಡವು. ಈ ದೀರ್ಘಕಾಲದವರೆಗಿನ ಕೊವಿಡ್ (ಲಾಂಗ್ ಕೊವಿಡ್) ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿಯೇ ಕಾಣಿಸಿಕೊಂಡಿದೆ.

ಲಾಂಗ್​ ಕೊವಿಡ್ ಲಕ್ಷಣಗಳು
ನಿರಂತರ ಕೆಮ್ಮು: ಕೊವಿಡ್​ ಸೋಂಕಿನಿಂದಾಗಿ ರೋಗಿಯು ಹೆಚ್ಚು ಕೆಮ್ಮುತ್ತಿದ್ದರೆ ಉಸಿರಾಟ ಕ್ರಿಯೆಗೆ ತೊಂದರೆಯಾಗುತ್ತದೆ. ಗಂಟಲಿನಲ್ಲಿ ಉರಿ, ಎದೆಯಲ್ಲಿ ಉರಿಯೂತ ಉಂಟಾಗುತ್ತದೆ. ಕೊವಿಡ್​ ಸೋಂಕಿನಿಂದ ಹೊರಬಂದರೂ ಕೂಡಾ ಕೆಮ್ಮು ಹಲವು ವಾರಗಳವರೆಗೆ ಕಾಣಿಸಿಕೊಳ್ಳುತ್ತದೆ.

ಅತಿಸಾರ: ಅಧ್ಯಯನದ ಪ್ರಕಾರ ಕೊರೊನಾ ಸೋಂಕು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ಅತಿಸಾರದ ಸಮಸ್ಯೆ ದೀರ್ಘಕಾಲದವರೆಗೆ ಕಂಡು ಬರುತ್ತದೆ.

ಹಸಿವಿನ ಕೊರತೆ: ಅನಾರೋಗ್ಯದಿಂದ ಚೇತರಿಸಿಕೊಂಡ ನಂತರವೂ ಅನೇಕ ರೋಗಿಗಳಿಗೆ ಹಸಿವಿನ ಕೊರತೆ ಕಂಡು ಬರುತ್ತದೆ. ಆಹಾರವನ್ನು ಸೇವಿಸಬೇಕು ಅನಿಸುವುದಿಲ್ಲ. ಈ ಸಮಸ್ಯೆ ಹಲವಾರು ವಾರಗಳವರೆಗೆ ಕಂಡು ಬರುತ್ತದೆ.

ಆಯಾಸ ಮತ್ತು ದೌರ್ಬಲ್ಯ: ಕೊವಿಡ್​ ಸೋಂಕಿನಿಂದ ಬಳಲುತ್ತಿರುವವರಲ್ಲಿ ಸುಮಾರು ಶೇ.80ರಷ್ಟು ರೋಗಿಗಳು ಆಯಾಸದಿಂದ ಬಳಲುತ್ತಿರುತ್ತಾರೆ. ದುರ್ಬಲತೆಯನ್ನೂ ಅನುಭವಿಸುತ್ತಾರೆ.

ಉಸಿರಾಟದ ತೊಂದರೆ: ಕೊರೊನಾ ಸಾಂಕ್ರಾಮಿಕ ರೋಗ ಉಸಿರಾಟಕ್ಕೆ ಸಂಬಂಧಿಸಿದ ರೋಗವಾಗಿದೆ. ಸೋಂಕಿನಿಂದ ಮುಕ್ತರಾದರೂ ಕೂಡಾ ಹಲವು ದಿನಗಳವರೆಗೆ ಉಸಿರಾಟದ ತೊಂದರೆ ಕಂಡುಬರುತ್ತದೆ. ಜೊತೆಗೆ ಗಂಟಲು ನೋವು, ಒರಟಾದ ಧ್ವನಿ ಸಮಸ್ಯೆ ಕಂಡು ಬರುತ್ತದೆ.

ಇದನ್ನೂ ಓದಿ: ದೇಶದಲ್ಲಿನ ಕೊವಿಡ್ ಪರಿಸ್ಥಿತಿ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಮಾಲೋಚನೆ

(Do not ignore the Symptoms of Long Covid and What it mease here are the details in kannada )