ಕಾಶ್ಮೀರ ಭಾರತದ ಮುಕುಟಮಣಿ. ಭೂ ಲೋಕದ ಮೇಲಿನ ಸ್ವರ್ಗ. ಕಾಶ್ಮೀರವನ್ನು ಭಾರತದ ಸ್ವಿಟ್ಜರ್ಲೆಂಡ್ ಎಂದು ಕೂಡ ಕರೆಯಲಾಗುತ್ತೆ. ಪ್ರಶಾಂತ ಜೀಲಂ ನದಿಯ ದಡದಲ್ಲಿ (Kashmiri Pandits) ಈಗ ರಕ್ತದೋಕುಳಿಯಾಟ ನಡೆಯುತ್ತಿದೆ (Targeted Killings). ಉಗ್ರಗಾಮಿಗಳ ಅಟ್ಟಹಾಸಕ್ಕೆ ಕೊನೆ ಮೊದಲಿಲ್ಲ ಎಂಬಂತಾಗಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಮೇಲೆ ಕೇಂದ್ರ ಸರ್ಕಾರವೇ ಜಮ್ಮು ಕಾಶ್ಮೀರದ ಪೊಲೀಸ್ ಇಲಾಖೆ, ಸೇನೆ, ಪ್ಯಾರಾ ಮಿಲಿಟರಿ ಪಡೆ ಎಲ್ಲವನ್ನೂ ನಿಯಂತ್ರಿಸುತ್ತಿದೆ. ಮೋದಿ (Narendra Modi) ಸರ್ಕಾರದ ಕ್ರಮಗಳಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮೋದಿ ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಕಾಶ್ಮೀರಿ ಪಂಡಿತರಿಗೆ ಸೂಕ್ತ ರಕ್ಷಣೆ ನೀಡಲು ಮೋದಿ ಸರ್ಕಾರ ಕೂಡ ವಿಫಲವಾಗಿದೆ ಎಂಬುದು ವಾಸ್ತವ.
1990ರ ಸಮಯದಲ್ಲಿ ಕಾಶ್ಮೀರ ತೊರೆದಿದ್ದ ಕಾಶ್ಮೀರಿ ಪಂಡಿತರು, ಹಿಂದೂಗಳು ಈಗಲೂ ಕಾಶ್ಮೀರದಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಉಗ್ರಗಾಮಿಗಳು ಕಾಶ್ಮೀರದಲ್ಲಿ 90ರ ದಶಕದಂತೆ ಈಗಲೂ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿ ನಡೆಸುತ್ತಲೇ ಇದ್ದಾರೆ. ಕಾಶ್ಮೀರಿ ಪಂಡಿತರ ಹತ್ಯೆಗೆ ಬ್ರೇಕ್ ಹಾಕಲು ಮೋದಿ ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಕಾಶ್ಮೀರಿ ಪಂಡಿತರಿಗೆ ಹಾಗೂ ಕಾಶ್ಮೀರಿ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಲು ಮೋದಿ ಸರ್ಕಾರ, ಜಮ್ಮು ಕಾಶ್ಮೀರ ಪೊಲೀಸರು ವಿಫಲವಾಗಿದ್ದಾರೆ. ಇದಕ್ಕೆ ಈ ವರ್ಷದಲ್ಲಿ ನಡೆದಿರುವ ಟಾರ್ಗೆಟ್ ಹತ್ಯೆಗಳೇ ಸಾಕ್ಷಿ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೂ 17 ಮಂದಿಯನ್ನ ಟಾರ್ಗೆಟ್ ಹತ್ಯೆ ಮಾಡಲಾಗಿದೆ.
ಈ 17 ಮಂದಿಯ ಪೈಕಿ 11 ಮಂದಿ ಹಿಂದೂಗಳು ಎಂಬುದು ವಿಶೇಷ. ಕಳೆದ 26 ದಿನಗಳಲ್ಲಿ ಎಂಟು ಮಂದಿಯನ್ನು ಉಗ್ರಗಾಮಿಗಳು ಟಾರ್ಗೆಟ್ ಹತ್ಯೆ ಮಾಡಿದ್ದಾರೆ. ಈಗಲೂ ಕಾಶ್ಮೀರಿ ಪಂಡಿತರನ್ನೇ ಗುರಿಯಾಗಿಸಿ ಉಗ್ರಗಾಮಿಗಳು ಹತ್ಯೆ ಮಾಡುತ್ತಿದ್ದಾರೆ. ಮೇ 12ರಂದು ಬುಡ್ಗಾಮ್ ಜಿಲ್ಲೆಯ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತ ಯಾರು ಎಂದು ಹೆಸರು ಕೇಳಿ, ಹುಡುಕಿಕೊಂಡು ಹೋಗಿ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಇದು ಕಾಶ್ಮೀರಿ ಪಂಡಿತರು ಈಗಲೂ ಉಗ್ರಗಾಮಿಗಳಿಗೆ ಹೇಗೆ ಟಾರ್ಗೆಟ್ ಆಗಿದ್ದಾರೆ ಎಂಬುದಕ್ಕೆ ಉದಾಹರಣೆ.
ಈ ಹತ್ಯೆಯ ಸರಣಿ ಇಲ್ಲಿಗೆ ನಿಂತಿಲ್ಲ. ಮೊನ್ನೆ ಸೋಮವಾರ ಕಾಶ್ಮೀರದ ಕುಲ್ಗಾಮ್ ನಲ್ಲಿ ಪ್ರಧಾನಿ ಪ್ಯಾಕೇಜ್ ನಡಿ ನೇಮಕಗೊಂಡು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ರಜನಿ ಬಾಲಾರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದರು. ಇಂದು ಕುಲ್ಗಾಮ್ ನ ಬ್ಯಾಂಕ್ ಮ್ಯಾನೇಜರ್ ವಿಜಯ ಕುಮಾರ್ ರನ್ನು ಉಗ್ರಗಾಮಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಕಳೆದ ಮೂರು ದಿನಗಳಲ್ಲಿ ಇಬ್ಬರ ಟಾರ್ಗೆಟ್ ಹತ್ಯೆ ನಡೆದಿದೆ. ಕಳೆದ ವಾರ ಬುಡ್ಗಾಮ್ ಜಿಲ್ಲೆಯಲ್ಲಿ ಟಿವಿ ಕಲಾವಿದೆ ಅಮ್ರೀನ್ ಭಟ್ ರನ್ನು ಲಷ್ಕರ್ ಇ ತೋಯ್ಬಾದ ಉಗ್ರಗಾಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಹೀಗೆ ಕಾಶ್ಮೀರದಲ್ಲಿ ಟಾರ್ಗೆಟ್ ಹತ್ಯೆಯ ಸರಣಿ ಮುಂದುವರಿದಿದೆ. ಇದರಿಂದ ಕಾಶ್ಮೀರದ ಸಹವಾಸವೇ ಬೇಡ ಅಂತ ಕಾಶ್ಮೀರಿ ಹಿಂದೂಗಳು ಕುಟುಂಬ ಸಮೇತ ಕಾಶ್ಮೀರ ತೊರೆದು ಜಮ್ಮುವಿವತ್ತ ವಲಸೆ ಹೋಗುತ್ತಿದ್ದಾರೆ. 90 ರ ದಶಕದಂತೆ ನೂರಾರು ಹಿಂದೂ ಕುಟುಂಬಗಳು ಜಮ್ಮುವಿನತ್ತ ವಲಸೆ ಹೋಗುತ್ತಿವೆ. ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಕಾಶ್ಮೀರಿ ಪಂಡಿತರ ಕಾಲೋನಿ ಇದೆ. ಈ ಕಾಲೋನಿಯಲ್ಲಿ ವಾಸಿಸುತ್ತಿದ್ದ 300 ಕಾಶ್ಮೀರಿ ಪಂಡಿತ, ಹಿಂದೂ ಕುಟುಂಬಗಳ ಪೈಕಿ ಅರ್ಧದಷ್ಟು ಜನರು ಕಾಲೋನಿ ತೊರೆದು ಜಮ್ಮು, ದೆಹಲಿಯತ್ತ ವಲಸೆ ಹೋಗಿದ್ದಾರೆ.
ಟಾರ್ಗೆಟ್ ಹತ್ಯೆಗಳಿಂದಾಗಿ ಕಾಶ್ಮೀರದ ಹಿಂದೂಗಳಲ್ಲಿ ಮತ್ತೊಮ್ಮೆ ಜೀವ ಭಯ, ಆತಂಕ ಮನೆ ಮಾಡಿದೆ. ಕಾಶ್ಮೀರಿ ಹಿಂದೂಗಳಿಗೆ ನೆಮ್ಮದಿ ಇಲ್ಲವಾಗಿದೆ. ಶಾಂತಿ, ನೆಮ್ಮದಿಯಿಂದ ಮತ್ತೆ ತಾಯ್ನೆಲ ಕಾಶ್ಮೀರದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಹೋಗಿದ್ದವರು ಈಗ ಮತ್ತೆ ಜೀವ ಭಯದಿಂದ ಕಾಶ್ಮೀರ ಬಿಟ್ಟು ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ. 90 ರ ದಶಕದಲ್ಲಿ ಕೇಂದ್ರದಲ್ಲಿ ವಿ.ಪಿ.ಸಿಂಗ್ ಸರ್ಕಾರ ಇತ್ತು. ಇಂದು ಮೋದಿ ಸರ್ಕಾರ ಕೇಂದ್ರದಲ್ಲಿದೆ. ಆದರೇ, ಕಾಶ್ಮೀರದ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಕಾಶ್ಮೀರದ ಜೀಲಂ ನದಿಯಲ್ಲಿ ರಕ್ತದ ಹೊಳೆಯೇ ಹರಿಯುತ್ತಿದೆ.
ಜಮ್ಮು ಪ್ರಾಂತ್ಯದಲ್ಲಿ ಹಿಂದೂಗಳು ಬಹುಸಂಖ್ಯಾತರು. ಕಾಶ್ಮೀರ ಪ್ರಾಂತ್ಯದಲ್ಲಿ ಮುಸ್ಲಿಂರು ಬಹುಸಂಖ್ಯಾತರು. ಕಾಶ್ಮೀರ ಪ್ರಾಂತ್ಯದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಹೀಗಾಗಿ ಕಾಶ್ಮೀರ ಪ್ರಾಂತ್ಯದ ಹಿಂದೂಗಳನ್ನು ಪಾಕಿಸ್ತಾನದಿಂದ ಗಡಿ ನುಸುಳಿ ದೇಶದೊಳಕ್ಕೆ ಬರುವ ಉಗ್ರಗಾಮಿಗಳು ಹಾಗೂ ಸ್ಥಳೀಯವಾಗಿ ಉಗ್ರಗಾಮಿ ಸಂಘಟನೆಗೆ ಸೇರಿರುವ ದುಷ್ಟರು ಸೇರಿ ಹತ್ಯೆ ಮಾಡುತ್ತಿದ್ದಾರೆ. ಹಿಂದೂಗಳು ವಾಸಿಸುವ, ಕೆಲಸ ಮಾಡುವ ಸ್ಥಳಗಳ ಮಾಹಿತಿ, ಸುಲಭವಾಗಿ ಉಗ್ರಗಾಮಿಗಳಿಗೆ ಸಿಗುತ್ತಿದೆ. ಪ್ರಧಾನಿ ಪ್ಯಾಕೇಜ್ ನಡಿ ಕೆಲವರು ಜಮ್ಮು ಕಾಶ್ಮೀರದಲ್ಲಿ ಸರ್ಕಾರಿ ನೌಕರಿಗೆ ಸೇರಿದ್ದಾರೆ. ಇಂಥವರು ಈಗ ಉಗ್ರರ ಟಾರ್ಗೆಟ್ ಆಗಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು, ಹಿಂದೂ -ಮುಸ್ಲಿಂ ಭಾಯಿ ಭಾಯಿ ಎಂಬ ಸೌಹಾರ್ದತೆಯ ಮಂತ್ರ ಬಾಯಿ ಮಾತಿಗಷ್ಟೇ ಸೀಮಿತವಾಗಿದೆ.
ಶುಕ್ರವಾರ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ
ಕಾಶ್ಮೀರದಲ್ಲಿ ಹಿಂದೂ ಸರ್ಕಾರಿ ನೌಕರರನ್ನು ಉಗ್ರಗಾಮಿಗಳು ಹತ್ಯೆ ಮಾಡುವುದನ್ನು ತಡೆಯಲು ಎಲ್ಲ ಹಿಂದೂಗಳಿಗೆ ಜಿಲ್ಲಾ ಕೇಂದ್ರಗಳಿಗೆ ವರ್ಗಾವಣೆ ಮಾಡಿ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ಆದೇಶ ಹೊರಡಿಸಿದ್ದಾರೆ. ಈಗ ಕಾಶ್ಮೀರದ ಟಾರ್ಗೆಟ್ ಹತ್ಯೆ ತಡೆಯುವ ಬಗ್ಗೆ ಚರ್ಚಿಸಲು ನಾಳೆ ಉನ್ನತ ಮಟ್ಟದ ಸಭೆಯನ್ನು ಕೇಂದ್ರ ಸರ್ಕಾರ ಕರೆದಿದೆ. ನಾಳೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರದ ಡಿಜಿಪಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಉನ್ನತ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಸಭೆಯಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕಲು ಯಾವ ಮಹತ್ವದ ತೀರ್ಮಾನ ಕೈಗೊಳ್ಳಲಾಗುತ್ತೆ ಎಂಬುದನ್ನು ಕಾಶ್ಮೀರಿ ಪಂಡಿತರು ಎದುರು ನೋಡುತ್ತಿದ್ದಾರೆ. ಕೇಂದ್ರ ಸರ್ಕಾರವು ಈಗಾಗಲೇ ಕಾಶ್ಮೀರದ ಹೈಬ್ರೀಡ್ ಉಗ್ರರನ್ನು ಬಂಧಿಸಿದೆ. ಹೈಬ್ರೀಡ್ ಉಗ್ರರೆಂದರೇ, ಸಾಮಾನ್ಯ ನಾಗರಿಕರಂತೆಯೇ ಇದ್ದು, ಉಗ್ರಗಾಮಿ ಸಂಘಟನೆಗಳ ಜೊತೆಗೆ ಸಂಪರ್ಕದಲ್ಲಿದ್ದು, ಉಗ್ರಗಾಮಿ ಸಂಘಟನೆಗಳಿಗೆ ಮಾಹಿತಿ ನೀಡುವವರು. ಕಾಶ್ಮೀರದಲ್ಲಿ ಇಂಥ ಸಾವಿರಾರು ಹೈಬ್ರೀಡ್ ಉಗ್ರರಿದ್ದಾರೆ. ಹಿಂದೂ ನಾಗರಿಕರನ್ನು ಹತ್ಯೆ ಮಾಡಲು ಹೈಬ್ರೀಡ್ ಉಗ್ರರು ಮಾಹಿತಿ ನೀಡುತ್ತಿದ್ದಾರೆ.
Published On - 5:17 pm, Thu, 2 June 22