ಎಸ್‌ಐಆರ್‌ಗೆ ಯಾವ ಸಾಫ್ಟ್‌ವೇರ್ ಬಳಕೆ? ಎಂಬ ಪ್ರಶ್ನೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ನೀಡಲು ಚುನಾವಣಾ ಆಯೋಗ ನಿರಾಕರಣೆ

ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ (SIR) ಲೋಪದೋಷ ಪತ್ತೆಗೆ ಬಳಸುವ ತಂತ್ರಾಂಶ, AI ವಿವರಗಳನ್ನು RTI ಅಡಿಯಲ್ಲಿ ಬಹಿರಂಗಪಡಿಸಲು ನಿರಾಕರಿಸಿದೆ. ಈ ಮಾಹಿತಿಯು ವಾಣಿಜ್ಯ ರಹಸ್ಯ ಮತ್ತು ಬೌದ್ಧಿಕ ಆಸ್ತಿ ವ್ಯಾಪ್ತಿಗೆ ಬರುವುದರಿಂದ RTI ವಿನಾಯಿತಿ ಇದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರ ಅರ್ಜಿಗೆ ಈ ಪ್ರತಿಕ್ರಿಯೆ ಬಂದಿದ್ದು, ಹೊಸ ತಂತ್ರಾಂಶ ಬಳಕೆಯನ್ನು ಆಯೋಗ ನಿರಾಕರಿಸಿದೆ.

ಎಸ್‌ಐಆರ್‌ಗೆ ಯಾವ ಸಾಫ್ಟ್‌ವೇರ್ ಬಳಕೆ? ಎಂಬ ಪ್ರಶ್ನೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ನೀಡಲು ಚುನಾವಣಾ ಆಯೋಗ ನಿರಾಕರಣೆ
ಚುನಾವಣಾ ಆಯೋಗ
Image Credit source: Tv9 kannada

Updated on: Oct 26, 2026 | 10:40 AM

ದೆಹಲಿ, ಅ.26: ಮತದಾರರ ಪಟ್ಟಿಯ ಪರಿಷ್ಕರಣೆ (SIR) ಸಮಯದಲ್ಲಿ ಲೋಪದೋಷಗಳು ಹಾಗೂ ತಪ್ಪುಗಳನ್ನು ಪತ್ತೆಹಚ್ಚಲು ಬಳಸಲಾದ ತಂತ್ರಾಂಶದ ಹೆಸರು ಮತ್ತು ಆವೃತ್ತಿಯ ವಿವರಗಳನ್ನು ಬಹಿರಂಗಪಡಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. ಈ ಮಾಹಿತಿಯು ವಾಣಿಜ್ಯಿಕ ರಹಸ್ಯ, ವ್ಯಾಪಾರ ರಹಸ್ಯ ಮತ್ತು ಬೌದ್ಧಿಕ ಆಸ್ತಿ ವ್ಯಾಪ್ತಿಗೆ ಬರುವುದರಿಂದ, ಇದನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನೀಡಲು ವಿನಾಯಿತಿ ಇದೆ ಎಂದು ಚುನಾವಣಾ ಆಯೋಗವು ಅಕ್ಟೋಬರ್ 16 ರಂದು ನೀಡಿರುವ ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ.

ಆರ್‌ಟಿಐ ಅರ್ಜಿದಾರರ ಪ್ರಶ್ನೆ ಮತ್ತು ಆಯೋಗದ ಉತ್ತರ:

ಸಾಮಾಜಿಕ ಕಾರ್ಯಕರ್ತನ ಅರ್ಜಿ:

ತೆಲಂಗಾಣದ ಕರಿಂಪುರ ಮೂಲದ ಸಾಮಾಜಿಕ ಕಾರ್ಯಕರ್ತ ಎಂ.ಎ. ಮುಜೀಬ್ ಅಯ್ಯೂಬ್ ಜುಲೈ 27 ರಂದು ಆರ್‌ಟಿಐ ಅರ್ಜಿ ಸಲ್ಲಿಸಿ, ಎಸ್‌ಐಆರ್ ವೇಳೆ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪತ್ತೆಹಚ್ಚಲು ಆಯೋಗವು ಯಾವ ತಂತ್ರಾಂಶ, ಆಲ್ಗರಿದಮ್ ಅಥವಾ ಎಐ ಪ್ಲಾಟ್‌ಫಾರ್ಮ್ ಬಳಸಿದೆ ಹಾಗೂ ಅಂತಹ ಪಟ್ಟಿಗಳನ್ನು ಸರಿಪಡಿಸಲು ಅನುಸರಿಸಿದ ಕಾರ್ಯವಿಧಾನವೇನು ಎಂದು ಮಾಹಿತಿ ಕೋರಿದ್ದರು.

ಆಯೋಗ ನೀಡಿದ ಪ್ರತ್ಯುತ್ತರ:

ಎಸ್‌ಐಆರ್ ಪ್ರಕ್ರಿಯೆಗಾಗಿ ಯಾವುದೇ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿಲ್ಲ ಅಥವಾ ಖರೀದಿಸಿಲ್ಲ. ಮತದಾರರ ಸೇರ್ಪಡೆ ಅಥವಾ ತೆಗೆದುಹಾಕುವಿಕೆ ಕುರಿತು ಮತದಾರರ ನೋಂದಣಿ ಅಧಿಕಾರಿಗಳು ದಾಖಲೆಗಳು ಮತ್ತು ವಾಸ್ತವಾಂಶಗಳ ಆಧಾರದ ಮೇಲೆಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಆಯೋಗ ಸ್ಪಷ್ಟಪಡಿಸಿದೆ. ತಂತ್ರಾಂಶ ಹಾಗೂ ಆಲ್ಗರಿದಮ್ ವಿವರಗಳನ್ನು ಆರ್‌ಟಿಐ ಅಡಿಯಲ್ಲಿ ಹಂಚಿಕೊಳ್ಳದಿರುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ಇವಿಎಂ ತಯಾರಿಕಾ ಸಂಸ್ಥೆಗಳಾದ ಬಿಇಎಲ್ ಮತ್ತು ಇಸಿಐಎಲ್ ಕೂಡ ಇವಿಎಂನ ಸೋರ್ಸ್ ಕೋಡ್‌ಗಳನ್ನು ಆರ್‌ಟಿಐ ಅಡಿಯಲ್ಲಿ ನೀಡಲು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ನ್ಯಾಯಾಧೀಶರ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಡಿಕ್ಕಿ, ವ್ಯಕ್ತಿ ಸಾವು: ವಶಕ್ಕೆ ಪಡೆದು ಕೆಲವೇ ಗಂಟೆಯಲ್ಲಿ ಜಾಮೀನು

ಎಐ ಳಕೆ ಕುರಿತ ಸ್ಪಷ್ಟನೆಗೆ ಆಯೋಗದ ಪ್ರತಿಕ್ರಿಯೆ:

ಅರ್ಜಿದಾರರು ಎಸ್‌ಐಆರ್ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಕೃತಕ ಬುದ್ಧಿಮತ್ತೆ , ಮೆಷಿನ್ ಲರ್ನಿಂಗ್ ಅಥವಾ ಸ್ವಯಂಚಾಲಿತ ವ್ಯವಸ್ಥೆಯನ್ನು ಬಳಸಲಾಗಿದೆಯೇ ಎಂದು ಸ್ಪಷ್ಟನೆ ಕೇಳಿದ್ದರು. ಆದರೆ, ಈ ರೀತಿಯ ಪ್ರಶ್ನೆಗಳು ಮತ್ತು ಸ್ಪಷ್ಟನೆಗಳು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2(f) ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿ ಆಯೋಗವು ವಿವರ ನೀಡಲು ನಿರಾಕರಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us