200 ಕೋಟಿ ರೂ. ಸಿಎಸ್​ಆರ್​ ಹಗರಣ ಬಯಲು: 40ಕ್ಕೂ ಹೆಚ್ಚು ಪಿಎಸ್​ಯು, ಬ್ಯಾಂಕ್‌ಗಳಿಗೆ ಇಡಿ ಶಾಕ್

ಜಾರಿ ನಿರ್ದೇಶನಾಲಯ (ED) 200 ಕೋಟಿ ರೂ. ಸಿಎಸ್​ಆರ್ (CSR) ಹಗರಣವನ್ನು ಭೇದಿಸಿದೆ. 12ನೇ ತರಗತಿ ಮಾತ್ರ ಓದಿದ ನಕಲಿ ವೈದ್ಯನ ನೇತೃತ್ವದಲ್ಲಿ ಪಿಎಸ್‌ಯುಗಳು, ಬ್ಯಾಂಕ್‌ಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಂದ ಹಣ ಲೂಟಿ ಮಾಡಲಾಗಿದೆ. ಆರೋಗ್ಯ ಸೇವೆ ಹೆಸರಿನಲ್ಲಿ ನಕಲಿ ಟ್ರಸ್ಟ್‌ಗಳ ಮೂಲಕ ಹಣ ವರ್ಗಾವಣೆ, ಲಂಚ ಹಾಗೂ ಶೆಲ್ ಕಂಪನಿಗಳ ಬಳಕೆಯಿಂದ ಈ ಅಕ್ರಮ ನಡೆದಿದೆ. 40ಕ್ಕೂ ಹೆಚ್ಚು ಸಂಸ್ಥೆಗಳು ತನಿಖೆಯ ವ್ಯಾಪ್ತಿಯಲ್ಲಿವೆ.

200 ಕೋಟಿ ರೂ. ಸಿಎಸ್​ಆರ್​ ಹಗರಣ ಬಯಲು: 40ಕ್ಕೂ ಹೆಚ್ಚು ಪಿಎಸ್​ಯು, ಬ್ಯಾಂಕ್‌ಗಳಿಗೆ ಇಡಿ ಶಾಕ್
ಇಡಿ
Image Credit source: India TV

Updated on: Oct 08, 2026 | 10:31 AM

ನವದೆಹಲಿ, ಅಕ್ಟೋಬರ್ 08: ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್​ಆರ್) ನಿಧಿಯ ಹೆಸರಿನಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್​ಯು), ಸರ್ಕಾರಿ ಬ್ಯಾಂಕುಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಂದ ಸುಮಾರು 200 ಕೋಟಿ ರೂ. ಹಣವನ್ನು ಅಕ್ರಮವಾಗಿ ಲೂಟಿ ಮಾಡಿ ಹಣ ವರ್ಗಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಜಾರಿ ನಿರ್ದೇಶನಾಲಯ  ಭೇದಿಸಿದೆ. ಈ ಇಡೀ ದಂಧೆಯ ಕೇಂದ್ರಬಿಂದು ಯಾವುದೇ ವೈದ್ಯಕೀಯ ಪದವಿ ಇಲ್ಲದ, ಕೇವಲ 12ನೇ ತರಗತಿ ಮಾತ್ರ ಓದಿರುವ ಒಬ್ಬ ನಕಲಿ ವೈದ್ಯ ಎಂಬುದು ತನಿಖೆಯಲ್ಲಿ ಬಯಲಾಗಿ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

ಆರೋಗ್ಯ ಸೇವೆ ಮತ್ತು ಬಡವರ ಚಿಕಿತ್ಸೆಯ ಹೆಸರಿನಲ್ಲಿ ಸ್ಥಾಪಿಸಲಾಗಿದ್ದ ದತ್ತಿ ಟ್ರಸ್ಟ್‌ಗಳ ಮೂಲಕ ಈ ಹಣದ ವಹಿವಾಟು ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಧರ್ಮೇಂದ್ರ ಕುಮಾರ್ ಚಂದ್ರದೇವ್ ಸಿಂಗ್ ಎಂಬಾತನ ಹೆಸರು ಕೇಳಿಬಂದಿದೆ.

ಯಾವುದೇ ವೈದ್ಯಕೀಯ ಪದವಿ ಇಲ್ಲದಿದ್ದರೂ ಸುಮಾರು 30 ವರ್ಷಗಳಿಂದ ತನ್ನನ್ನು ವೈದ್ಯ ಎಂದು ಪರಿಚಯಿಸಿಕೊಂಡಿದ್ದ ಎಂದು ಇಡಿ ಆರೋಪಿಸಿದೆ. ಈತ ಟ್ರಸ್ಟ್‌ಗಳ ಮೂಲಕ ಪಿಎಸ್​ಯುಗಳು, ಸರ್ಕಾರಿ ಬ್ಯಾಂಕ್‌ಗಳು ಮತ್ತು ಖಾಸಗಿ ಕಂಪನಿಗಳಿಂದ ಸಿಎಸ್​ಆರ್ ನಿಧಿ ಪಡೆಯುತ್ತಿದ್ದ ಎನ್ನಲಾಗಿದೆ.

ಮುಖ್ಯ ಆರೋಪಿ ಧರ್ಮೇಂದ್ರ ಕುಮಾರ್ ಚಂದ್ರದೇವ್ ಸಿಂಗ್, ಕಳೆದ ಮೂರು ದಶಕಗಳಿಂದ ತನ್ನನ್ನು ತಾನು ಪ್ರಸಿದ್ಧ ವೈದ್ಯ ಎಂದು ಬಿಂಬಿಸಿಕೊಂಡು ಸಮಾಜದಲ್ಲಿ ನಂಬಿಕೆ ಗಳಿಸಿದ್ದ. ಆರೋಗ್ಯ ರಕ್ಷಣೆ ಮತ್ತು ಬಡವರ ಚಿಕಿತ್ಸೆಯ ಹೆಸರಿನಲ್ಲಿ ತೆರಿಗೆ ರಹಿತ ದತ್ತಿ ಟ್ರಸ್ಟ್‌ಗಳನ್ನು ಸ್ಥಾಪಿಸಿ, ಕಾರ್ಪೊರೇಟ್ ಆಸ್ಪತ್ರೆಗಳು ಮತ್ತು ಪಿಎಸ್‌ಯುಗಳಿಗೆ ಆಕರ್ಷಕ ಸಿಎಸ್​ಆರ್​ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತಿದ್ದ. ಕಂಪನಿಗಳು ನೀಡಿದ ಸಿಎಸ್​ಆರ್ ಹಣದಲ್ಲಿ ಸ್ವಲ್ಪ ಕಮಿಷನ್ ಕಡಿತಗೊಳಿಸಿ, ಉಳಿದ ಬಹುಪಾಲು ಹಣವನ್ನು ನಕಲಿ, ಶೆಲ್ ಕಂಪನಿಗಳ ಮೂಲಕ ನಗದಾಗಿ (Cash) ಪರಿವರ್ತಿಸಿ ಮೂಲ ಕೊಡುಗೆದಾರರಿಗೇ ಹಿಂದಿರುಗಿಸಲಾಗುತ್ತಿತ್ತು.

ಮತ್ತಷ್ಟು ಓದಿ: ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ದಾಳಿ: ಬೆಂಗಳೂರಿನಲ್ಲಿ ಇಡಿ ಮಹತ್ವದ ಸಭೆ

ಕಾಗದದಲ್ಲಷ್ಟೇ ಯೋಜನೆಗಳು:

ಸಿಎಸ್​ಆರ್ ನಿಧಿ ಪಡೆದ ಯೋಜನೆಗಳನ್ನು ಅರ್ಧಕ್ಕೆ ಕೈಬಿಡಲಾಗುತ್ತಿತ್ತು ಅಥವಾ ಕೇವಲ ಕಾಗದದ ಮೇಲೆ ಮಾತ್ರ ಪೂರ್ಣಗೊಂಡಿದೆ ಎಂದು ತೋರಿಸಿ, ಬಿಲ್‌ಗಳ ಮೂಲಕ ಹಣ ಲಪಟಾಯಿಸಲಾಗುತ್ತಿತ್ತು.

40ಕ್ಕೂ ಹೆಚ್ಚು ಪಿಎಸ್‌ಯುಗಳು, ಬ್ಯಾಂಕ್‌ಗಳು ಭಾಗಿ, ಲಂಚದ ಹೊಳೆ
ದೇಶಾದ್ಯಂತ ಕನಿಷ್ಠ 40 ಸಾರ್ವಜನಿಕ ವಲಯದ ಉದ್ದಿಮೆಗಳು (PSUs) ಮತ್ತು ಸರ್ಕಾರಿ ಬ್ಯಾಂಕುಗಳು ಈ ನಕಲಿ ಟ್ರಸ್ಟ್‌ಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿವೆ ಎಂದು ಇಡಿ ತಿಳಿಸಿದೆ. ಈ ನಿಧಿಗಳನ್ನು ಮಂಜೂರು ಮಾಡಲು ಪಿಎಸ್‌ಯು ಹಾಗೂ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ಭಾರೀ ಪ್ರಮಾಣದ ಕಿಕ್‌ಬ್ಯಾಕ್ ಹಾಗೂ ಲಂಚ ನೀಡಲಾಗಿತ್ತು.

4 ರಾಜ್ಯಗಳಲ್ಲಿ ಇಡಿ ಮಿಂಚಿನ ದಾಳಿ:
ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ತನಿಖೆ ಆರಂಭಿಸಿದ ಇಡಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿ-ಎನ್‌ಸಿಆರ್‌ನ 8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. 21 ಲಕ್ಷ ರೂ. ಲೆಕ್ಕವಿಲ್ಲದ ನಗದು ಜಪ್ತಿ ಮಾಡಲಾಗಿದೆ.

ಪಿಎಸ್‌ಯು ಅಧಿಕಾರಿಗಳು, ಆಸ್ಪತ್ರೆಗಳು ಮತ್ತು ಜಿಎಸ್‌ಟಿ ವಂಚನೆಯಲ್ಲಿ ಭಾಗಿಯಾಗಿರುವ ಶೆಲ್ ಕಂಪನಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಗರಣದಲ್ಲಿ ಇನ್ನೂ ಹಲವು ಪ್ರಭಾವಿ ಕಾರ್ಪೊರೇಟ್ ಮುಖಂಡರು ಮತ್ತು ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದ್ದು, ಇಡಿ ತನಿಖೆ ಚುರುಕುಗೊಳಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us