AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ದಾಳಿ: ಬೆಂಗಳೂರಿನಲ್ಲಿ ಇಡಿ ಮಹತ್ವದ ಸಭೆ

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ. 3 ಕೋಟಿ ರೂಪಾಯಿಗೂ ಹೆಚ್ಚು ನಗದು, ವಿದೇಶಿ ಕರೆನ್ಸಿ, ವಿದೇಶಿ ಹೂಡಿಕೆ ಹಾಗೂ ಲೋಕೋಪಯೋಗಿ ಟೆಂಡರ್‌ಗಳಲ್ಲಿನ ಕಿಕ್‌ಬ್ಯಾಕ್ ಆರೋಪಗಳ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.

ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ದಾಳಿ: ಬೆಂಗಳೂರಿನಲ್ಲಿ ಇಡಿ ಮಹತ್ವದ ಸಭೆ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ದಾಳಿ: ಬೆಂಗಳೂರಿನಲ್ಲಿ ಇಡಿ ಮಹತ್ವದ ಸಭೆImage Credit source: tv9
ರಾಚಪ್ಪಾಜಿ ನಾಯ್ಕ್
| Edited By: |

Updated on: Sep 14, 2026 | 12:43 PM

Share

ಮುಖ್ಯಾಂಶಗಳು

  • ಜಾಲಹಳ್ಳಿ ಇಡಿ ಕಚೇರಿಯಲ್ಲಿ ಮಹತ್ವದ ಸಭೆ
  • ₹3 ಕೋಟಿಗೂ ಹೆಚ್ಚು ನಗದು ಜಪ್ತಿ ಬಗ್ಗೆ ಸಮಾಲೋಚನೆ
  • ಟೆಂಡರ್ ಕಿಕ್‌ಬ್ಯಾಕ್ ಆರೋಪದ ತನಿಖೆ ಚುರುಕು

ಬೆಂಗಳೂರು, ಸೆಪ್ಟೆಂಬರ್ 14: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ನಡೆದ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ. ಜಾಲಹಳ್ಳಿಯಲ್ಲಿರುವ ಇಡಿ ಕಚೇರಿಯಲ್ಲಿ ನಿರ್ದೇಶಕ ರಾಹುಲ್ ನವೀನ್ ನೇತೃತ್ವದಲ್ಲಿ ಸಭೆ ನಡೆದಿದ್ದು, ದಾಳಿ ವೇಳೆ ಜಪ್ತಿಯಾದ ಹಣ, ವಿದೇಶಿ ಕರೆನ್ಸಿ ಹಾಗೂ ದಾಖಲೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದೆಹಲಿಯಿಂದ ಆಗಮಿಸಿರುವ ಇಡಿ ಹಿರಿಯ ಅಧಿಕಾರಿಗಳು, ಸ್ಪೆಷಲ್ ಡೈರೆಕ್ಟರ್ ಹಾಗೂ ತಾಂತ್ರಿಕ ಸಮಿತಿ ತಂಡ ಸಭೆಯಲ್ಲಿ ಭಾಗವಹಿಸಿದೆ. ತನಿಖೆಯ ಮುಂದಿನ ಹಂತಗಳು, ವಿಚಾರಣೆ ಹಾಗೂ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದಿದೆ. ದೆಹಲಿ ತಂಡ ಇನ್ನೂ ಎರಡು ದಿನ ಬೆಂಗಳೂರಿನಲ್ಲೇ ಉಳಿದು ದಾಖಲೆಗಳ ಪರಿಶೀಲನೆ ಮುಂದುವರಿಸಲಿದೆ.

ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ದಾಳಿಯ ಸಂದರ್ಭದಲ್ಲಿ, ಇಡಿ ಅಧಿಕಾರಿಗಳು 3 ಕೋಟಿ ರೂಪಾಯಿಗೂ ಅಧಿಕ ನಗದು ಮತ್ತು ಗಣನೀಯ ಪ್ರಮಾಣದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಹಲವಾರು ಮಹತ್ವದ ದಾಖಲೆಗಳನ್ನು ಸಹ ಜಪ್ತಿ ಮಾಡಲಾಗಿತ್ತು. ಈ ಜಪ್ತಿ ಮಾಡಿದ ಹಣ ಮತ್ತು ದಾಖಲೆಗಳ ಕುರಿತು ಸಭೆಯಲ್ಲಿ ಮರುಪರಿಶೀಲನೆ ನಡೆಸಲಾಯಿತು. ತನಿಖೆಯ ಮುಂದಿನ ಹಂತಗಳು, ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಿತು. ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಡಿ ಅಧಿಕಾರಿಗಳ ತಂಡವು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಉಳಿದು ಕಾರ್ಯನಿರ್ವಹಿಸಲಿದೆ.

ವಿದೇಶಿ ಹೂಡಿಕೆ ಆಯಾಮದಲ್ಲಿ ತನಿಖೆ: ಇಡಿ

ಇಡಿ ನೀಡಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ವಿದೇಶಗಳಲ್ಲಿ ಅಕ್ರಮ ಹೂಡಿಕೆಗಳು ನಡೆದಿರುವ ಬಗ್ಗೆ ಆರೋಪಗಳಿವೆ. ನಿರ್ದಿಷ್ಟವಾಗಿ, ಆಫ್ರಿಕಾದ ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ಕಂಪನಿಯೊಂದರಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಶೇಕಡಾ 40ರಷ್ಟು ಪಾಲುದಾರಿಕೆ ಇರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ ಮೂಲಸೌಕರ್ಯ ಯೋಜನೆಗಳ ಟೆಂಡರ್‌ಗಳಿಗೆ ಸಂಬಂಧಿಸಿದಂತೆ ಕಿಕ್‌ಬ್ಯಾಕ್ ಹಣವನ್ನು ನೇರವಾಗಿ ಸ್ವೀಕರಿಸದೆ, ಬದಲಿಗೆ ಆಫ್ರಿಕಾದ ಕಂಪನಿಗಳಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ ಹೂಡಿಕೆ ಮಾಡಿರುವ ಬಗ್ಗೆಯೂ ಆರೋಪಗಳಿವೆ. ಈ ಆಯಾಮಗಳಲ್ಲಿ ಇಡಿ ತನಿಖೆಯನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಕ್​ಬ್ಯಾಕ್ ಆರೋಪಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಇಡಿ

ಇದರ ಜೊತೆಗೆ ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳಲ್ಲಿ ಲಂಚ ಅಥವಾ ಕಿಕ್‌ಬ್ಯಾಕ್ ಪಡೆದಿರುವ ಆರೋಪಗಳ ಬಗ್ಗೆಯೂ ಇಡಿ ಮಾಹಿತಿ ಕಲೆಹಾಕುತ್ತಿದೆ. ಸತೀಶ್ ಜಾರಕಿಹೊಳಿ ಸಚಿವರಾದ ಬಳಿಕ ಕರೆಯಲಾದ ಟೆಂಡರ್‌ಗಳು, ಗುತ್ತಿಗೆ ಪಡೆದ ಕಂಪನಿಗಳು, ಟೆಂಡರ್ ಮೊತ್ತ ಹಾಗೂ ನಿರ್ದಿಷ್ಟ ಕಂಪನಿಗೆ ಗುತ್ತಿಗೆ ನೀಡಲು ಹಣ ಪಡೆದಿರುವ ಆರೋಪಗಳ ಕುರಿತು ಪರಿಶೀಲನೆ ನಡೆಯುತ್ತಿದೆ.

ಸೆಪ್ಟೆಂಬರ್ 13 ರಂದು ಸಹ ಕಡತಗಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಇಂದು ಕೂಡ ಜಾಲಹಳ್ಳಿ ಕಚೇರಿಯಲ್ಲಿ ತನಿಖೆ ಮುಂದುವರಿಸಿದ್ದಾರೆ.

ವಿಚಾರಣೆಗೆ ಸಹಕರಿಸುವೆ: ಸತೀಶ್ ಜಾರಕಿಹೊಳಿ

ಏತನ್ಮಧ್ಯೆ, ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿದ್ದು, ಇಡಿ ಅಧಿಕಾರಿಗಳು ಯಾವುದೇ ವಿಚಾರಣೆಗೆ ಕರೆದರೂ ಸಹಕರಿಸಲು ಮತ್ತು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಸದ್ಯ, ಇಡಿ ಅಧಿಕಾರಿಗಳು ತಮ್ಮ ತನಿಖೆಯನ್ನು ಕೇವಲ ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಮತ್ತು ವಿದೇಶಿ ಹೂಡಿಕೆಗಳಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರ ಸಿಬಿಐ ಅಥವಾ ಸ್ಥಳೀಯ ಲೋಕಾಯುಕ್ತಕ್ಕೆ ಇರುತ್ತದೆ. ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ನೀಡುವುದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಆರೋಪಗಳಿದ್ದು, ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆಯುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us