ವಯಸ್ಸಾದ ಮೇಲೆ ತಂದೆ-ತಾಯಿಯನ್ನು ತಮ್ಮ ಮಕ್ಕಳಂತೆ ಕಾಣಬೇಕಿರುವ ಮಕ್ಕಳೇ ಕಿರುಕುಳ ನೀಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮಕ್ಕಳ ಕಿರುಕುಳದಿಂದ ಬೇಸತ್ತು ತಂದೆ-ತಾಯಿ ನೀರಿನ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
70 ವರ್ಷದ ವ್ಯಕ್ತಿ ಮತ್ತು ಅವರ ಪತ್ನಿ ನೀರಿನ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನದ ನಾಗೌರ್‌ನಲ್ಲಿ ಗುರುವಾರ ಈ ಘಟನೆ ನಡೆದಿದೆ. ದಂಪತಿಯನ್ನು ಹಜಾರಿರಾಮ್ ಬಿಷ್ಣೋಯ್ ಮತ್ತು ಅವರ ಪತ್ನಿ ಚವಾಲಿ ದೇವಿ ಎಂದು ಗುರುತಿಸಲಾಗಿದ್ದು, ಕರ್ನಿ ಕಾಲೋನಿಯಲ್ಲಿರುವ ತಮ್ಮ ಮನೆಯೊಳಗಿನ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಎರಡು ದಿನಗಳಿಂದ ದಂಪತಿ ಕಾಣದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ದಂಪತಿಯ ಮಗನಿಗೆ ಮಾಹಿತಿ ನೀಡಿದ್ದಾರೆ. ನಂತರ ಮಗ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ಯಾಂಕ್‌ನ ಮುಚ್ಚಳ ತೆರೆದಿದ್ದು, ದಂಪತಿಯ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರರು ಮತ್ತು ಸೊಸೆಯರಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿ ಆತ್ಮಹತ್ಯೆ ಪತ್ರವನ್ನು ಮನೆಯ ಗೋಡೆಗಳ ಮೇಲೆ ಅಂಟಿಸಿದ್ದರು. ಮಕ್ಕಳು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ, ಪೊಲೀಸರ ಬಳಿ ಹೋದರೆ ರಾತ್ರಿ ಮಲಗಿದ್ದಾಗ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಬರೆದಿದ್ದಾರೆ.
ಮಕ್ಕಳು, ಸೊಸೆಯಂದಿರು ಮತ್ತು ಸಂಬಂಧಿಕರು ಅವರ ಆಸ್ತಿ ಮತ್ತು ಕಾರನ್ನು ಸಹ ಸ್ವಾಧೀನಪಡಿಸಿಕೊಂಡಿದ್ದರು. ತಮ್ಮ ಪೋಷಕರಿಂದ ಎಲ್ಲವನ್ನೂ ತೆಗೆದುಕೊಂಡ ನಂತರ, ಮಕ್ಕಳು ಅವರಿಗೆ ಆಹಾರವನ್ನು ನಿರಾಕರಿಸಿದರು ಮತ್ತು ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ವರದಿಯಾಗಿದೆ.
ಶವಗಳನ್ನು ತೊಟ್ಟಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನೀಶ್ ದೇವ್ ತಿಳಿಸಿದ್ದಾರೆ. ಪುರುಷನ ಶವದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಶುಕ್ರವಾರ ಬೆಳಗ್ಗೆ ಪತ್ನಿಯ ಶವ ಪರೀಕ್ಷೆ ನಡೆಯಲಿದೆ ಎಂದು ಮನೀಶ್ ದೇವ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ