ಬಿಹಾರದ ಲೋಕ ಜನಶಕ್ತಿ ಪಕ್ಷದ ಗುರುತನ್ನು (Lok Janshakti Party Symbol) ಚುನಾವಣಾ ಆಯೋಗ ಇಂದು ನಿಷ್ಕ್ರಿಯ (freezed)ಗೊಳಿಸಿದೆ. ಲೋಕ ಜನಶಕ್ತಿ ಪಕ್ಷದಲ್ಲೀಗ ಎರಡು ಬಣಗಳಾಗಿದ್ದು ಗೊತ್ತಾ ಇದೆ. ಒಂದು ಬಣ ಚಿರಾಗ್ ಪಾಸ್ವಾನ್ರದ್ದಾದರೆ ಇನ್ನೊಂದು ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರದ್ದು. ಈ ಎರಡೂ ಬಣಗಳ ನಡುವೆ ಕಿತ್ತಾಟ ನಡೆಯುತ್ತಿರುವ ಬೆನ್ನಲ್ಲೇ ಚುನಾವಣಾ ಆಯೋಗ ಇಂಥದ್ದೊಂದು ಮಹತ್ವದ ಆದೇಶ ಹೊರಡಿಸಿದೆ. ಇಷ್ಟು ದಿನ ಲೋಕ ಜನಶಕ್ತಿ ಪಕ್ಷದ ಗುರುತಾಗಿದ್ದ ಬಂಗಲೆಯ ಚಿತ್ರವನ್ನು ಇನ್ನು ಮುಂದೆ ಚಿರಾಗ್ ಪಾಸ್ವಾನ್ ಬಣವೂ ಬಳಸಿಕೊಳ್ಳುವಂತಿಲ್ಲ, ಪಶುಪತಿಯವರ ಬಣವೂ ಬಳಸುವಂತಿಲ್ಲ ಎಂದು ಸೂಚನೆ ನೀಡಿದೆ.
ಲೋಕ ಜನಶಕ್ತಿ ಪಕ್ಷವನ್ನು 2000ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಸ್ಥಾಪನೆ ಮಾಡಿದ್ದಾರೆ. ಇದು ಎನ್ಡಿಎ ಮತ್ರಿಕೂಟದ ಪಕ್ಷಗಳಲ್ಲಿ ಒಂದು. ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ಗೆ ಪಶುಪತಿ ಕುಮಾರ್ ಪಾರಸ್ ಚಿಕ್ಕಪ್ಪನೇ ಆಗಬೇಕು. ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಎಲ್ಜೆಪಿಯಲ್ಲಿ ಆಂತರಿಕ ಕಲಹ ಶುರುವಾಯಿತು. ವೈಷಮ್ಯ ತಾರಕಕ್ಕೆ ಏರಿದ ನಂತರ ಪಕ್ಷದ ಹೊಣೆ ಹೊತ್ತಿದ್ದ ಪಶುಪತಿ ಕುಮಾರ್, ಚಿರಾಗ್ ಪಾಸ್ವಾನ್ರನ್ನು ಉಚ್ಚಾಟಿಸಿದರು. ಅಲ್ಲಿಂದ ಪಕ್ಷವು ಎರಡು ಬಣಗಳಾಗಿ ಬದಲಾಯಿತು. ಈ ಎರಡೂ ಗುಂಪುಗಳು ಎಲ್ಜೆಪಿ ಪಕ್ಷ, ಅದರ ಗುರುತು ತಮ್ಮದು ಎಂದು ಕಿತ್ತಾಟದಲ್ಲಿ ತೊಡಗಿಕೊಂಡಿದ್ದವು. ಹಾಗೇ, ಕೆಲವು ದಿನಗಳ ಹಿಂದೆ ಚಿರಾಗ್ ಪಾಸ್ವಾನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು ದೂರು ನೀಡಿದ್ದರು. ಪಕ್ಷದ ಗುರುತನ್ನು ನಾವು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಹೇಳಿದ್ದರು.
ಉಪಚುನಾವಣೆ ಹೊತ್ತಲ್ಲಿ ಮಹತ್ವದ ನಿರ್ಧಾರ
ಬಿಹಾರದಲ್ಲಿ ಮುಂಗೇರದ ತಾರಾಪುರ ಮತ್ತು ದರ್ಭಾಂಗದ ಕುಶೇಶ್ವರಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ. ಈ ಹೊತ್ತಲ್ಲೇ ಚುನಾವಣಾ ಆಯೋಗ ಲೋಕ ಜನಶಕ್ತಿ ಪಾರ್ಟಿಗೆ ಶಾಕ್ ನೀಡಿದೆ. ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೂ ಶುರುವಾಗಿದ್ದು, ಎಲ್ಜೆಪಿ ಆದಷ್ಟು ಬೇಗ ತನ್ನ ಆಂತರಿಕ ಕಲಹವನ್ನು ಕೊನೆಗೊಳ್ಳಿಸಬೇಕಿದೆ.
ಚುನಾವಣಾ ಆಯೋಗ ಹೇಳಿದ್ದೇನು?
ಇಂದು ಚುನಾವಣಾ ಆಯೋಗ ಎಲ್ಜೆಪಿಯ ಗುರುತನ್ನು ನಿಷ್ಕ್ರಿಯಗೊಳಿಸಿದೆ. ಲೋಕ ಜನಶಕ್ತಿ ಪಕ್ಷದ ಗುರುತನ್ನು ರದ್ದುಗೊಳಿಸಿದ್ದೇವೆ. ಅದರ ಎರಡೂ ಬಣಗಳು ಪಕ್ಷದ ಹೆಸರನ್ನು ಬೇಷರತ್ತಾಗಿ ಬಳಸಲು ಅನುಮತಿ ಕೊಡುವುದಿಲ್ಲ. ಹಾಗೇ, ಪಕ್ಷದ ಸಂಕೇತವಾಗಿದ್ದ ಬಂಗಲೆಯ ಚಿತ್ರವನ್ನೂ ಯಾರೊಬ್ಬರೂ ಬಳಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಎಲ್ಜೆಪಿ ತನ್ನ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೆ ಇಬ್ಭಾಗವಾಗಿಯೇ ಮುಂದಿನ ಚುನಾವಣೆಗಳಲ್ಲಿ ಭಾಗವಹಿಸುತ್ತದೆ ಎಂದರೆ, ಎರಡೂ ಬಣಗಳು ಪಕ್ಷದ ಹೆಸರು ಮತ್ತು ಗುರುತನ್ನು ಬೇರೆಬೇರೆಯೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ಮದುವೆಯಲ್ಲಿ ಒಂದು ಪೀಸ್ ಜಾಸ್ತಿ ಕೇಕ್ ತಿಂದ ವ್ಯಕ್ತಿಯ ಬಳಿ ಹಣ ಕೇಳಿದ ಜೋಡಿ; ಏನಿದು ಪ್ರಕರಣ?
ನಾಲ್ಕು ವ್ಯಕ್ತಿಗಳು, 20 ಜಾನುವಾರುಗಳನ್ನು ಕೊಂದ ನರಭಕ್ಷಕ ಹುಲಿಯ ಬೇಟೆಗೆ ಅರಣ್ಯ ಇಲಾಖೆ ಆದೇಶ