Sudha Bharadwaj 3 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾದ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್

Elgar Parishad case ಡಿಸೆಂಬರ್ 1 ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಡೀಫಾಲ್ಟ್ ಜಾಮೀನಿಗೆ ತಡೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮನವಿಯನ್ನು ಸುಪ್ರೀಂಕೋರ್ಟ್ ಎರಡು ದಿನಗಳ ಹಿಂದೆ ತಿರಸ್ಕರಿಸಿತ್ತು.

Sudha Bharadwaj 3 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾದ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್
ಸುಧಾ ಭಾರದ್ವಾಜ್
Edited By:

Updated on: Dec 09, 2021 | 2:13 PM

ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ (Elgar Parishad case) ಬಂಧಿತರಾದ 16 ಜನರಲ್ಲಿ ಒಬ್ಬರಾದ ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ (Sudha Bharadwaj) ಅವರು ಮೂರು ವರ್ಷಗಳ ಬಳಿಕ  ಇಂದು ಬೆಳಿಗ್ಗೆ (ಡಿಸೆಂಬರ್ 09, 2021) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಡಿಸೆಂಬರ್ 1 ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಡೀಫಾಲ್ಟ್ ಜಾಮೀನಿಗೆ ತಡೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮನವಿಯನ್ನು ಸುಪ್ರೀಂಕೋರ್ಟ್ ಎರಡು ದಿನಗಳ ಹಿಂದೆ ತಿರಸ್ಕರಿಸಿತ್ತು. “ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣವಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಯುಯು ಲಲಿತ್, ಎಸ್‌ಆರ್ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರು ಸುಧಾ ಅವರನ್ನು ಬಿಡುಗಡೆಗೊಳಿಸುವ ಆದೇಶ ನೀಡಿದ್ದಾರೆ.

ಈ ಪ್ರಕರಣವನ್ನು ಮೊದಲು ಪುಣೆ ಪೊಲೀಸರು ನಿರ್ವಹಿಸಿದ್ದರು ಮತ್ತು ನಂತರ ಎನ್‌ಐಎ ಕೈಗೆತ್ತಿಕೊಂಡಿತ್ತು. ರಾಜ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಆಕೆಯನ್ನು ಆರಂಭದಲ್ಲಿ ಪುಣೆಯ ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ತನಿಖೆಯನ್ನು ಎನ್ಐಎಎ ವಹಿಸಿಕೊಂಡ ನಂತರ ಬೈಕುಲ್ಲಾ ಮಹಿಳಾ ಜೈಲಿಗೆ ಸ್ಥಳಾಂತರಿಸಲಾಯಿತು. ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ.

ಜಾಮೀನು ಷರತ್ತುಗಳ ಭಾಗವಾಗಿ ವಿಶೇಷ ಎನ್‌ಐಎ ನ್ಯಾಯಾಲಯವು 60 ವರ್ಷದ ಕಾರ್ಯಕರ್ತೆ ಸುಧಾ ಅವರಲ್ಲಿ ತಮ್ಮ ಪಾಸ್‌ಪೋರ್ಟ್ ಸಲ್ಲಿಸಬೇಕು ಮತ್ತು ಮುಂಬೈನಲ್ಲಿ ಉಳಿಯಬೇಕು ಎಂದು ಹೇಳಿದೆ. ನಗರ ಮಿತಿಯನ್ನು ತೊರೆಯಲು ಆಕೆ ನ್ಯಾಯಾಲಯದ ಅನುಮತಿ ಪಡೆಯಬೇಕು. ಭಾರದ್ವಾಜ್ ಅವರು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಸಂವಹನ ನಡೆಸುವಂತಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಆಕೆಯ ಪರ ವಾದ ಮಂಡಿಸಿದ ವಕೀಲ ಯುಗ್ ಮೋಹಿತ್ ಚೌಧರಿ, ಇದು ಆಕೆಯ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹೇಳಿ ಷರತ್ತುಗಳನ್ನು ವಿರೋಧಿಸಿದರು. ₹ 50,000 ರ ತಾತ್ಕಾಲಿಕ ನಗದು ಜಾಮೀನಿನ ಮೇಲೆ ಆಕೆಯನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಹತ್ತಿರದ ಪೊಲೀಸ್ ಠಾಣೆಗೆ – ದೈಹಿಕವಾಗಿ ಅಥವಾ ವೀಡಿಯೊ ಕರೆ ಮೂಲಕ ಭೇಟಿ ನೀಡುವಂತೆ ನಿರ್ದೇಶಿಸಲಾಗಿದೆ.

ಪ್ರಕರಣದಲ್ಲಿ ತನ್ನ ಸಹ-ಆರೋಪಿಗಳೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಸಾಧಿಸಬಾರದು ಮತ್ತು ಯಾವುದೇ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಾರದು ಎಂದು ಆಕೆಗೆ ನಿರ್ದೇಶಿಸಲಾಗಿದೆ.

ಸುಧಾ ಭಾರದ್ವಾಜ್ ಅವರನ್ನು ಆಗಸ್ಟ್ 28, 2018 ರಂದು ಬಂಧಿಸಲಾಯಿತು ಮತ್ತು ನಂತರ ಗೃಹಬಂಧನದಲ್ಲಿ ಇರಿಸಲಾಯಿತು. ನಂತರ ಆಕೆಯನ್ನು ಅಕ್ಟೋಬರ್ 27, 2018 ರಂದು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಡಿಸೆಂಬರ್ 31, 2017 ರಂದು ಎಲ್ಗಾರ್ ಪರಿಷತ್ತಿನ ಸಮಾವೇಶದಲ್ಲಿ ಭಾಷಣ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ:  Elgar Parishad case ಎಲ್ಗಾರ್ ಪರಿಷತ್ ಪ್ರಕರಣ: ಸುಧಾ ಭಾರದ್ವಾಜ್​​ಗೆ ಜಾಮೀನು; ಎಂಟು ಸಹ ಆರೋಪಿಗಳಿಗೆ ಜಾಮೀನು ನಿರಾಕರಣೆ

Published On - 2:08 pm, Thu, 9 December 21