ತಮಿಳುನಾಡು: ಚಪ್ಪಲಿ ಧರಿಸಿ ನಡೆಯುವಂತಿಲ್ಲ; ಸ್ವಾತಂತ್ರ್ಯ ಪೂರ್ವದ ಈ ಅಲಿಖಿತ ಆಚರಣೆಗೆ ಅಂತ್ಯ ಹಾಡಿದ ದಲಿತರು
ಸ್ವಾತಂತ್ರ್ಯದ ನಂತರ ಅಸ್ಪೃಶ್ಯತೆ ನಿಷೇಧಿಸಿದಾಗ, ಪ್ರಬಲ ಜಾತಿಯ ಸದಸ್ಯರು ಆಚರಣೆಯನ್ನು ಮುಂದುವರಿಸಲು ಒಂದು ಕಥೆಯನ್ನು ಹೆಣೆದರು. ಅದೇನೆಂದರೆ ವೂಡೂ ಗೊಂಬೆಯನ್ನು ಬೀದಿಯಲ್ಲಿ ಹೂಳಲಾಗಿದೆ. ಎಸ್‌ಸಿ ಜನರು ಅಲ್ಲಿ ಚಪ್ಪಲಿ ಧರಿಸಿ ನಡೆದಾಡಿದರೆ ಅವರು ಮೂರು ತಿಂಗಳೊಳಗೆ ಸಾಯುತ್ತಾರೆ. ಜನರು ಇದನ್ನು ನಂಬಿದ್ದರಿಂದ ಆಚರಣೆ ಮುಂದುವರಿದಿತ್ತು.
ತಿರುಪ್ಪೂರ್ ಡಿಸೆಂಬರ್ 26 : ಸ್ವಾತಂತ್ರ್ಯ ಪೂರ್ವದ ಆಚರಣೆಯನ್ನು ಕೊನೆಗೊಳಿಸಿ, ತಮಿಳುನಾಡಿನ (Tamilnadu) ದಲಿತ (Dalit) ಸಮುದಾಯದ 60 ಸದಸ್ಯರು ಭಾನುವಾರ (ಡಿಸೆಂಬರ್ 24) ಆ ಪ್ರದೇಶದಲ್ಲಿ ಮೇಲ್ಜಾತಿಗಳು ತಮ್ಮ ಮೇಲೆ ಹೇರಿದ್ದ ಅಲಿಖಿತ ನಿಷೇಧವನ್ನು ಕೊನೆಗಾಣಿಸಿದ್ದಾರೆ. ಸಮುದಾಯದ ಸದಸ್ಯರು ತಿರುಪ್ಪೂರ್ (Tiruppur) ಜಿಲ್ಲೆಯ ಮಡತುಕುಲಂ ತಾಲೂಕಿನ ರಾಜವೂರ್ ಗ್ರಾಮದಲ್ಲಿ ‘ಕಂಬಳ ನಾಯ್ಕನ್ ಸ್ಟ್ರೀಟ್’ನಲ್ಲಿ ಮೊದಲ ಬಾರಿಗೆ ಪಾದರಕ್ಷೆಗಳನ್ನು ಧರಿಸಿ ನಡೆದರು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆ ಮೂಲಕ ಅವರು ದಲಿತರು ಚಪ್ಪಲಿ ತೊಟ್ಟು ಬೀದಿಯಲ್ಲಿ ನಡೆಯಬಾರದು ಎಂಬ ಮೇಲ್ಜಾತಿಗಳ ಅಘೋಷಿತ ನಿಯಮವನ್ನು ಮುರಿದರು. ವರದಿಯ ಪ್ರಕಾರ ಪರಿಶಿಷ್ಟ ಜಾತಿ (ಎಸ್‌ಸಿ) ಸದಸ್ಯರಿಗೆ ಬೀದಿಯಲ್ಲಿ ಸೈಕಲ್ ಸವಾರಿ ಮಾಡಲು ಸಹ ಅವಕಾಶವಿಲ್ಲ.
300 ಮೀಟರ್ ಉದ್ದದ ಬೀದಿಯ ಎಲ್ಲಾ 60 ನಿವಾಸಿಗಳು ಹಿಂದುಳಿದ ಜಾತಿ ಸಮುದಾಯದವರು. ಗ್ರಾಮದ ಸುಮಾರು 900 ಕುಟುಂಬಗಳಲ್ಲಿ 800 ಗೌಂಡರ್‌ಗಳು ಮತ್ತು ನಾಯ್ಕರ್‌ಗಳಂತಹ ಪ್ರಬಲ ಜಾತಿಗಳಿಗೆ ಸೇರಿವೆ ಎಂದು ಪತ್ರಿಕೆ ವರದಿ ಮಾಡಿದೆ. “ಅರುಂತಥಿಯಾರ್ ಸಮುದಾಯದ ಸದಸ್ಯರು ಬೀದಿಯಲ್ಲಿ ಚಪ್ಪಲಿ ಧರಿಸಿ ನಡೆಯುವುದನ್ನು ನಿರ್ಬಂಧಿಸಲಾಗಿದೆ. ಎಸ್‌ಸಿ ಸದಸ್ಯರಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ಹಲ್ಲೆ ಕೂಡ ಮಾಡಲಾಗಿದೆ. ಮೇಲ್ಜಾತಿ ಮಹಿಳೆಯರೂ ಸಹ ಎಸ್‌ಸಿ ಸದಸ್ಯರು ಬೀದಿಯಲ್ಲಿ ಚಪ್ಪಲಿ ತೊಟ್ಟು ನಡೆದರೆ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದರು. ನಾವು ಬೀದಿ ತಪ್ಪಿಸಿ ದಶಕಗಳಿಂದ ದಬ್ಬಾಳಿಕೆಯಲ್ಲಿ ಬದುಕುತ್ತಿದ್ದೇವೆ. ಕೆಲವು ವಾರಗಳ ಹಿಂದೆ ನಾವು ಈ ಸಮಸ್ಯೆಯನ್ನು ದಲಿತ ಸಂಘಟನೆಗಳ ಗಮನಕ್ಕೆ ತಂದಿದ್ದೇವೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಈ ಬೀದಿಯ ನಿವಾಸಿ ಎ ಮುರುಗಾನಂದಂ (51)ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ಅಸ್ಪೃಶ್ಯತೆ ನಿಷೇಧಿಸಿದಾಗ, ಪ್ರಬಲ ಜಾತಿಯ ಸದಸ್ಯರು ಆಚರಣೆಯನ್ನು ಮುಂದುವರಿಸಲು ಒಂದು ಕಥೆಯನ್ನು ಹೆಣೆದರು. ಅದೇನೆಂದರೆ ವೂಡೂ ಗೊಂಬೆಯನ್ನು ಬೀದಿಯಲ್ಲಿ ಹೂಳಲಾಗಿದೆ. ಎಸ್‌ಸಿ ಜನರು ಅಲ್ಲಿ ಚಪ್ಪಲಿ ಧರಿಸಿ ನಡೆದಾಡಿದರೆ ಅವರು ಮೂರು ತಿಂಗಳೊಳಗೆ ಸಾಯುತ್ತಾರೆ. ಕೆಲವು SC ಸದಸ್ಯರು ಆ ಕಥೆಗಳನ್ನು ನಂಬುತ್ತಾರೆ. ಹಾಗಾಗಿ ಅವರು ಚಪ್ಪಲಿಯಿಲ್ಲದೆ ನಡೆಯಲು ಪ್ರಾರಂಭಿಸಿದರು ಮತ್ತು ಅಭ್ಯಾಸವು ಇಂದಿಗೂ ಮುಂದುವರೆದಿದೆ ಎಂದು ಮತ್ತೊಬ್ಬ ಸದಸ್ಯ ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿ ಭಾಷಿಗರು ತಮಿಳುನಾಡಿನಲ್ಲಿ ಶೌಚಾಲಯ ತೊಳೆಯುತ್ತಾರೆ: ದಯಾನಿಧಿ ಮಾರನ್
ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ರಂಗದ (ತಿರುಪ್ಪೂರ್) ಕಾರ್ಯದರ್ಶಿ ಸಿ.ಕೆ.ಕನಗರಾಜ್ ಅವರು ಕಳೆದ ವಾರ ಗ್ರಾಮಕ್ಕೆ ಭೇಟಿ ನೀಡಿದ್ದು ಹಲವಾರು ದಲಿತ ಮಹಿಳೆಯರಿಗೆ ನಿರ್ದಿಷ್ಟ ರಸ್ತೆಗೆ ಪ್ರವೇಶಿಸಲು ಸಹ ಅನುಮತಿಸದಿರುವುದು ಅವರ ಗಮನಕ್ಕೆ ಬಂದಿತ್ತು.
ಸಂಘಟನೆಯು ಪ್ರತಿಭಟನೆಯನ್ನು ಪ್ರಾರಂಭಿಸಲು ಬಯಸಿತು ಆದರೆ ಪೊಲೀಸರು ಅನುಮತಿ ನಿರಾಕರಿಸಿದರು. ಇದಾದ ನಂತರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ವಿದುತಲೈ ಚಿರುತೈಗಲ್ ಕಚ್ಚಿ, ಮತ್ತು ದಲಿತ ಹಕ್ಕುಗಳ ಸಂಘಟನೆಯಾದ ಆದಿ ತಮಿಳರ್ ಪೆರವೈ ಮುಂತಾದ ರಾಜಕೀಯ ಪಕ್ಷಗಳ ಪದಾಧಿಕಾರಿಗಳೊಂದಿಗೆ ಎಸ್ ಸಿ ಸದಸ್ಯರು ಬೀದಿಗಿಳಿಯಲು ನಿರ್ಧರಿಸಿದರು. 60 ಸದಸ್ಯರ ಗುಂಪು ನಂತರ ದಲಿತರ ಗಡಿಯಿಂದ ಹೊರಗಿರುವ ಗ್ರಾಮದ ರಾಜಕಾಳಿಯಮ್ಮನ ದೇವಸ್ಥಾನವನ್ನು ಪ್ರವೇಶಿಸಿತು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ