ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಎರಡು ಬಾರಿ ಕೇರಳ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ (Oommen Chandy) ಅವರನ್ನು ತಿರುವನಂತಪುರಂನಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮ್ಮನ್ ಚಾಂಡಿ ಅವರಿಗೆ ನ್ಯುಮೋನಿಯಾ (Pneumonia) ಸೋಂಕು ತಗುಲಿ ಕೆಲ ದಿನಗಳಿಂದ ತಿರುವನಂತಪುರಂನ ನೇಯ್ಯಟ್ಟಿನಕರ ಎಂಬಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಉಮ್ಮನ್ ಚಾಂಡಿ ಅವರಿಗೆ ಆರೋಗ್ಯ ಪರಿಸ್ಥಿತಿ ಗಂಭೀರವಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬಂತಹ ಸುದ್ದಿ ಇತ್ತು. ಆದರೆ, ಸ್ವತಃ ಉಮ್ಮನ್ ಚಾಂಡಿಯವರೇ ಈ ಸುದ್ದಿಗಳನ್ನು ಅಲ್ಲಗಳೆದಿದ್ದು, ತಮ್ಮ ಆರೋಗ್ಯ ಗಂಭೀರ ಸ್ಥಿತಿ ತಲುಪಿಲ್ಲ ಎಂದಿದ್ದಾರೆ.
ಉಮ್ಮನ್ ಚಾಂಡಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ನಿರ್ಧಾರ ಕೈಗೊಂಡಿದ್ದು ಕಾಂಗ್ರೆಸ್ ಪಕ್ಷ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಉಮ್ಮನ್ ಚಾಂಡಿ ಅವರಿಗೆ 2019ರಿಂದಲೂ ಆರೋಗ್ಯ ಚೆನ್ನಾಗಿಲ್ಲ. ಕೆಲ ತಿಂಗಳ ಹಿಂದೆ ಅವರಿಗೆ ಗಂಟಲು ಸಂಬಂಧಿ ತೊಂದರೆ ಹೆಚ್ಚಾಗಿ ಜರ್ಮನಿಗೆ ಕರೆದೊಯ್ದು ಚಿಕಿತ್ಸೆ ಕೊಡಲಾಗಿತ್ತು. ಇತ್ತೀಚೆಗೆ ಅವರ ಕುಟುಂಬ ಸದಸ್ಯರಿಂದ ಅವರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ ಎನ್ನುವಂತಹ ಧ್ವನಿಗಳು ಕೇಳಿಬಂದವು. ಅವರ 42 ನಂಟರಿಷ್ಟರು ಸಿಎಂ ಪಿಣಾರಯಿ ವಿಜಯನ್ ಅವರಿಗೆ ಮನವಿ ಮಾಡಿ, ಊಮ್ಮನ್ ಚಾಂಡಿ ಅವರಿಗೆ ಸೂಕ್ತ ಚಿಕಿತ್ಸೆ ಏರ್ಪಡಿಸಬೇಕೆಂದು ಕೋರಿದ್ದರು. ಇವರ ಪೈಕಿ ಚಾಂಡಿ ಅವರ ಕಿರಿಯ ಸಹೋದರನೂ ಇದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ರಾಹುಲ್ ಗಾಂಧಿಗೆ ನೋಟಿಸ್: ಬುಧವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ
ಸದ್ಯ ಉಮ್ಮನ್ ಚಾಂಡಿ ತಮ್ಮ ಮಗನ ಮನೆಯಲ್ಲಿದ್ದಾರೆ. ನಿನ್ನೆ ಭಾನುವಾರ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿರುವ ಚಾಂಡಿ ಅವರ ಜೊತೆ ಅವರ ಪತ್ನಿ, ಇಬ್ಬರು ಹೆಣ್ಮಕ್ಕಳು ಮತ್ತು ಮಗ ಬಂದಿದ್ದಾರೆ.
ಕೇರಳದ ಕೊಟ್ಟಾಯಂ ಜಿಲ್ಲೆಯ 80 ವರ್ಷದ ಉಮ್ಮನ್ ಚಾಂಡಿ ಎರಡು ಬಾರಿ ಕೇರಳದ ಮುಖ್ಯಮಂತ್ರಿಯಾಗಿದ್ದವರು. 2004-2006 ಮತ್ತು 2011ರಿಂದ 2016ರವರೆಗೆ ಅವರು ಸಿಎಂ ಆಗಿದ್ದರು. 1970ರಿಂದಲೂ ಅವರು ಪುತ್ತುಪಲ್ಲಿ ಕ್ಷೇತ್ರದಿಂದ ಸತತವಾಗಿ ಶಾಸಕರಾಗಿದ್ದಾರೆ. ಅತೀ ದೀರ್ಘಕಾಲ ಶಾಸಕರಾದ ಏಕೈಕ ವ್ಯಕ್ತಿ ಅವರು. ಸಾರ್ವಜನಿಕ ಸೇವೆಗಾಗಿ ವಿಶ್ವಸಂಸ್ಥೆಯಿಂದ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಮುಖ್ಯಮಂತ್ರಿ ಅವರು.