Supreme Court: ಕನ್ನಡಿಗ ನ್ಯಾ| ಅರವಿಂದ್ ಕುಮಾರ್ ಸೇರಿ ಇಬ್ಬರು ನೂತನ ಸುಪ್ರೀಂ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ
Two New Judges Take Oath: ಸುಪ್ರೀಂಕೋರ್ಟ್ಗೆ ನೂತನ ಜಡ್ಜ್ಗಳಾಗಿ ನೇಮಕವಾಗಿದ್ದ ನ್ಯಾ| ಅರವಿಂದ್ ಕುಮಾರ್ ಮತ್ತು ನ್ಯಾ| ರಾಜೇಶ್ ಬಿಂದಾಲ್ ಅವರಿಗೆ ಸಿಜೆಐ ಇಂದು ಪ್ರಮಾಣವಚನ ಬೋಧಿಸಿದ್ದಾರೆ. ನ್ಯಾ. ಅರವಿಂದ್ ಕುಮಾರ್ ಕರ್ನಾಟಕ ಮೂಲದವರಾಗಿದ್ದಾರೆ.
ನವದೆಹಲಿ: ಸುಪ್ರೀಂಕೋರ್ಟ್ಗೆ ನೂತನ ನ್ಯಾಯಮೂರ್ತಿಗಳಾಗಿ (New Supreme Court Judges) ನೇಮಕವಾಗಿದ್ದ ಕರ್ನಾಟಕ ಮೂಲದ ಅರವಿಂದ್ ಕುಮಾರ್ ಮತ್ತು ನ್ಯಾ| ರಾಜೇಶ್ ಬಿಂದಲ್ ಅವರಿಗೆ ಸಿಜೆಐ ಡಿ.ವೈ. ಚಂದ್ರಚೂಡ್ ಸೋಮವಾರ ಪ್ರಮಾಣವಚನ ಬೋಧಿಸಿದರು. ಈ ಇಬ್ಬರ ನೇಮಕದೊಂದಿಗೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 34 ಆಗಿದೆ. ಅಲ್ಲಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪೂರ್ಣಪ್ರಮಾಣದಲ್ಲಿ ಜಡ್ಜ್ಗಳ ನೇಮಕವಾದಂತಾಗಿದೆ. ಕಳೆದ ವಾರ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್, ಸಂಜಯ್ ಕರೋಲ್, ಪಿವಿ ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಮನೋಜ್ ಮಿಶ್ರಾ, ಈ ಐವರನ್ನು ಸುಪ್ರೀಂಕೋರ್ಟ್ನ ನೂತನ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿತ್ತು.
ಸುಪ್ರೀಂಕೋರ್ಟ್ನ ಕೊಲೆಜಿಯಂ ಜನವರಿ 31ರಂದು ನ್ಯಾ| ರಾಜೇಶ್ ಬಿಂದಲ್ ಮತ್ತು ನ್ಯಾ| ಅರವಿಂದ್ ಕುಮಾರ್ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಬಡ್ತಿ ನೀಡಲು ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವ ಮೊದಲು ನ್ಯಾ| ರಾಜೇಶ್ ಬಿಂದಲ್ ಅವರು ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದರು. ಇನ್ನು, ನ್ಯಾ| ಅರವಿಂದ್ ಕುಮಾರ್ ಅವರು ಕರ್ನಾಟಕದವರಾಗಿದ್ದು, ಗುಜರಾತ್ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: Oommen Chandy: ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಅನಾರೋಗ್ಯ; ಬೆಂಗಳೂರಿನ ಆಸ್ಪತ್ರೆಗೆ ರವಾನೆ
ದೇಶಾದ್ಯಂತ ಉನ್ನತ ನ್ಯಾಯಾಲಯಗಳಲ್ಲಿ ಜಡ್ಜ್ಗಳನ್ನು ನೇಮಿಸಲು ಇರುವ ಕೊಲೆಜಿಯಂ ವ್ಯವಸ್ಥೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಭಿನ್ನಾಭಿಪ್ರಾಯ ಇದೆ. ಕೊಲೆಜಿಯಂ ವ್ಯವಸ್ಥೆಯನ್ನು ರದ್ದು ಮಾಡಲು ಹೊರಟಿರುವ ಸರ್ಕಾರ, ಜಡ್ಜ್ಗಳ ನೇಮಕಾತಿಗೆ ಹೊಸದಾದ ಎನ್ಜೆಎಸಿ ಕಾನೂನು ರೂಪಿಸಲು ಹೊರಟಿದೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ಜಡ್ಜ್ ಆಗಿ ನಿವೃತ್ತರಾಗಿದ್ದ ನ್ಯಾ| ನಜೀರ್ ಅವರನ್ನು ಕೇಂದ್ರ ಸರ್ಕಾರ ಆಂಧ್ರ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು.
Published On - 12:29 pm, Mon, 13 February 23