Aero India Show- ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ- ಪ್ರಧಾನಿಯಿಂದ ಇಂದು ಚಾಲನೆ
PM Narendra Modi Inaugurating Aero India 2023: ಫೆ. 13ರಿಂದ 17ರವರೆಗೆ 5 ದಿನಗಳ ಕಾಲ ನಡೆಯುವ ಏರೋ ಇಂಡಿಯಾ ಶೋನ 14ನೇ ಆವೃತ್ತಿಗೆ ಇಂದು ಚಾಲನೆ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಬೆಳಗ್ಗೆ 9:45ಕ್ಕೆ ಏರೋ ಇಂಡಿಯಾ ಶೋ ಉದ್ಘಾಟನೆ ಮಾಡುವ ನಿರೀಕ್ಷೆ ಇದೆ.
ಬೆಂಗಳೂರು: ಏಷ್ಯಾದ ಅತಿದೊಡ್ಡ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನವೆನಿಸಿರುವ ಏರೋ ಇಂಡಿಯಾ ಶೋನ 14ನೇ ಆವೃತ್ತಿಗೆ (Aero India Show) ಇಂದು ಚಾಲನೆ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಬೆಳಗ್ಗೆ 9:45ಕ್ಕೆ ಏರೋ ಇಂಡಿಯಾ ಶೋ ಉದ್ಘಾಟನೆ ಮಾಡುವ ನಿರೀಕ್ಷೆ ಇದೆ. ಇಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ತಾವರ್ ಸಿಂಗ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಪಾಲ್ಗೊಳ್ಳುತ್ತಿದ್ದಾರೆ.
ಇನ್ನು, ಪ್ರಧಾನಿಗಳು ಈಗಾಗಲೇ ನಿನ್ನೆಯೇ ಬೆಂಗಳೂರಿಗೆ ಆಗಮಿಸಿದ್ದು, ರಾಜಭವನದಲ್ಲಿ ರಾತ್ರಿ ತಂಗಿದ್ದಾರೆ. ನಿಗದಿಯಾಗಿರುವ ವೇಳಾಪಟ್ಟಿ ಪ್ರಕಾರ ಬೆಳಗ್ಗೆ 8:50ಕ್ಕೆ ನರೇಂದ್ರ ಮೋದಿ ರಾಜಭವನದಿಂದ ತೆರಳಿ ಹೆಚ್ಕ್ಯೂಟಿಸಿ ಹೆಲಿಪ್ಯಾಡ್ ತಲುಪಿ 9 ಗಂಟೆಗೆ ಯಲಹಂಕದತ್ತ ಹೊರಟು, 9:20ಕ್ಕೆ ವಾಯುನೆಲೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಏರೋ ಇಂಡಿಯಾ ಶೋ ಉದ್ಘಾಟನಾ ಕಾರ್ಯಕ್ರಮದ ಸ್ಥಳ ತಲುಪಲಿದ್ದಾರೆ. 9:30 ಅಥವಾ 9:45ಕ್ಕೆ ಕಾರ್ಯಕ್ರಮ ಉದ್ಘಾಟನೆ ಮಾಡುವ ಪ್ರಧಾನಿಗಳು ಸುಮಾರು ಎರಡು ಗಂಟೆ ಕಾಲ ವೈಮಾನಿಕ ಪ್ರದರ್ಶನ ವೀಕ್ಷಿಸಿ ನಂತರ ನಿರ್ಗಮಿಸಲಿದ್ದಾರೆ. ಯಲಹಂಕ ವಾಯುನೆಲೆಯಿಂದ ಮಿಲಿಟರಿ ವಿಶೇಷ ವಿಮಾನದಲ್ಲಿ ಪ್ರಧಾನಿಗಳು ತ್ರಿಪುರಾಗೆ ಹೋಗಲಿದ್ದಾರೆ.
ಇನ್ನು, ಏರೋ ಇಂಡಿಯಾ ಶೋ ಇಂದು ಆರಂಭಗೊಂಡು 5 ದಿನಗಳವರೆಗೆ ನಡೆದು ಫೆಬ್ರುವರಿ 17ರಂದು ಮುಕ್ತಾಯಗೊಳ್ಳಲಿದೆ. ಪ್ರದರ್ಶನ ಕಾರ್ಯಕ್ರಮ ನಡೆಯುವ ಯಲಹಂಕ ಸುತ್ತಮುತ್ತಲ ರಸ್ತೆಯಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ. ಈ ಮಾರ್ಗದ ರಸ್ತೆಗಳಲ್ಲಿ ಸಂಚಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿ ಇರುವ ಎಲಿವೇಟೆಡ್ ಫ್ಲೈ ಓವರ್ನಲ್ಲಿ ಸಾರ್ವಜನಿಕರ ವಾಹನ ಸಂಚಾರ ನಿಷೇಧಿಸಲಾಗಿದೆ. ಏರೋ ಶೋನ ಪಾಸ್ ಹೊಂದಿದವರಿಗೆ ಮಾತ್ರ ಈ ಫ್ಲೈಓವರ್ನಲ್ಲಿ ಹೋಗಲು ಅವಕಾಶ ಇರುತ್ತವೆ. ಇತರ ಸಾರ್ವಜನಿಕರು ಕೆಳಗಿನ ಸರ್ವಿಸ್ ರಸ್ತೆ ಮೂಲಕ ಹೋಗಬಹುದು. ಏರ್ಪೋರ್ಟ್ಗೆ ಹೋಗಬಯಸುವವರು ಹೆಣ್ಣೂರು ಜಂಕ್ಷನ್ ಮೂಲಕ ತೆರಳುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ: Narendra Modi: ಬೆಂಗಳೂರಿನಲ್ಲಿ ಸ್ಯಾಂಡಲ್ವುಡ್ ಸ್ಟಾರ್ಸ್, ಕರ್ನಾಟಕದ ಉದ್ಯಮಿಗಳು, ಕ್ರಿಕೆಟರ್ಸ್ ಜೊತೆ ಮೋದಿ ಡಿನ್ನರ್
ಐದು ದಿನಗಳ ಕಾಲ ನಡೆಯುವ ಮಹಾ ವೈಮಾನಿಕ ಪ್ರದರ್ಶನದಲ್ಲಿ ಭಾರತದ ಅತ್ಯುತ್ತಮ ಯುದ್ಧವಿಮಾನಗಳು ಆಗಸದಲ್ಲಿ ಮಿಂಚು ಹರಿಸಲಿವೆ. ಅಮೆರಿಕ ಸೇರಿದಂತೆ ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನಗಳೂ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಗೆಯೇ, ರಕ್ಷಣಾ ಕ್ಷೇತ್ರದಲ್ಲಿ ಹಲವು ಮಹತ್ವದ ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ.
ಏರೋ ಇಂಡಿಯಾ ಶೋ ಯಲಹಂಕದಲ್ಲಿ ಮೊದಲು ನಡೆದದ್ದು 1996ರಲ್ಲಿ. ಪ್ರತೀ ಎರಡು ವರ್ಷಗಳಿಗೊಮ್ಮೆ ಇದನ್ನು ನಡೆಸಲಾಗುತ್ತದೆ. ಇಲ್ಲಿಯವರೆಗೆ 13 ಬಾರಿ ನಡೆದಿದೆ. ಈಗಿನದ್ದು 14ನೇ ಆವೃತ್ತಿ. ಯಲಹಂಕ ಸುತ್ತಮುತ್ತಲ ಜನರಿಗೆ ಈ ಐದು ದಿನ ಕಣ್ಣಿಗೆ ಹಬ್ಬ.
Published On - 7:05 am, Mon, 13 February 23