Siddaramaiah Kolar Visit: ಮಹಿಳಾ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣು; ಇಂದು ಕೋಲಾರ ಪ್ರವಾಸ, ವೇಮಗಲ್ ನಲ್ಲಿ ಮಹಿಳಾ ಸಮಾವೇಶ
ಸೋಮವಾರ ಕೋಲಾರ ತಾಲ್ಲೂಕು ವೇಮಗಲ್ನಲ್ಲಿ ಸುಮಾರು 15-20 ಸಾವಿರ ಮಹಿಳೆಯರನ್ನು ಸೇರಿಸಿ ಸಮಾವೇಶ ಮಾಡುವ ಮೂಲಕ ಮಹಿಳೆಯರ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.
ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ದೂರದ ಬಾದಾಮಿ ಕ್ಷೇತ್ರವನ್ನು ಬಿಟ್ಟು, ಬೆಂಗಳೂರಿಗೆ ಹತ್ತಿರವಿರುವ ಕೋಲಾರ(Kolar) ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ. ಅಳೆದು ತೂಗಿ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿದ್ದಾರೆ ಆದರೂ ಕ್ಷೇತ್ರದಲ್ಲಿ ಸ್ಪರ್ಧೆ ಘೋಷಣೆ ಮಾಡಿದ ಮೇಲೆ ಹಲವು ಸಂಕಷ್ಟ ಎದುರಾಗಿ ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಹಲವು ಸ್ಟಾರ್ಟಜಿ ಮಾಡ್ತಿದ್ದಾರೆ. ಕೋಲಾರದಲ್ಲಿಂದು ಸಿದ್ದರಾಮಯ್ಯ ಪ್ರವಾಸ ಕೈಗೊಳ್ಳುತ್ತಿದ್ದು ವೇಮಗಲ್ ನಲ್ಲಿ ಮಹಿಳಾ ಸಮಾವೇಶದ ಮೂಲಕ ಮಹಿಳೆಯರ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ನಾನು ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ ಎಂದು ಜನವರಿ-9 ರಂದು ಘೋಷಣೆ ಮಾಡಿದ್ರು ಇದಾದ ಮೇಲೆ ಕೋಲಾರ ಕ್ಷೇತ್ರದಲ್ಲಿ ಹಲವು ಸಮುದಾಯಗಳ ಮುಖಂಡರಿಂದ ಸಿದ್ದರಾಮಯ್ಯ ಪರ ವಿರೋಧ ವ್ಯಕ್ತವಾಗಿದೆ. ದಲಿತ ಸಮುದಾಯ, ಕುರುಬ ಸಮುದಾಯ, ಅಲ್ಪಸಂಖ್ಯಾತರು ಹೀಗೆ ತಮ್ಮದೇ ಆದ ರೀತಿಯಲ್ಲಿ ಅಸಮಾಧಾನ ಹೊರಹಾಕಿದ್ದರು. ಇದೆಲ್ಲವನ್ನು ಸಿದ್ದರಾಮಯ್ಯ ಅವರೇ ಮುಂದೆ ನಿಂತು ಒಂದು ಹಂತಕ್ಕೆ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಇದಾದ ನಂತರ ಈಗ ಸಿದ್ದರಾಮಯ್ಯ ಕೋಲಾರದಲ್ಲಿ ಮಹಿಳಾ ಓಡ್ ಬ್ಯಾಂಕ್ಗೆ ಕೈ ಹಾಕಿದ್ದಾರೆ. ಅದಕ್ಕಾಗಿ ಸೋಮವಾರ ಕೋಲಾರ ತಾಲ್ಲೂಕು ವೇಮಗಲ್ನಲ್ಲಿ ಸುಮಾರು 15-20 ಸಾವಿರ ಮಹಿಳೆಯರನ್ನು ಸೇರಿಸಿ ಸಮಾವೇಶ ಮಾಡುವ ಮೂಲಕ ಮಹಿಳೆಯರ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.
ಮಹಿಳಾ ಸಮಾವೇಶದ ಹಿಂದಿನ ಪ್ಲಾನ್ ಏನು?
ನಷ್ಟದ ಸುಳಿಗೆ ಸಿಲುಕಿ ದಿವಾಳಿಯಾಗಿದ್ದ ಕೋಲಾರ ಡಿಸಿಸಿ ಬ್ಯಾಂಕ್ನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ವಿಶೇಷ ಅನುಧಾನ ನೀಡುವ ಮೂಲಕ ಡಿಸಿಸಿ ಬ್ಯಾಂಕ್ನ್ನು ಪುನಶ್ಚೇತನ ಗೊಳಿಸಿದರು, ಅದಾದ ನಂತರ ಜಿಲ್ಲೆಯಾದ್ಯಂತ ರೈತರು ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ದೊಡ್ಡ ಕ್ರಾಂತಿಯನ್ನೇ ಮಾಡಿತ್ತು. ಇದೇ ಕಳೆದ ಚುನಾವಣೆಯಲ್ಲೂ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಕೆಜಿಎಫ್ ಶಾಸಕಿ ರೂಪಾಶಶಿಧರ್ ಸೇರಿ ಹಲವು ಶಾಸಕರುಗಳಿಗೆ ವರದಾನವಾಗಿ ಪರಿಣಮಿಸಿತ್ತು. ಈಗಲೂ ಸಿದ್ದರಾಮಯ್ಯ ಅದೇ ಸ್ಟಾರ್ಟಜಿಯನ್ನು ಮುಂದಿಟ್ಟುಕೊಂಡು ಡಿಸಿಸಿ ಬ್ಯಾಂಕ್ ಪುನಶ್ಚೇತನ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ನೀಡಿದ ಸಾಲದಲ್ಲಿ ತಮ್ಮ ಕೊಡುಗೆ ಏನು ಅನ್ನೋದನ್ನು ಹೇಳಿಕೊಳ್ಳುವ ಮೂಲಕ ಮಹಿಳಾ ಮತಗಳನ್ನು ಸೆಳೆಯಲು ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: ಧಾರವಾಡ : ಕೈ ಮುಖಂಡನ ಟೂರ್ ಪಾಲಿಟಿಕ್ಸ್, ಟಿಕೆಟ್ ಆಕಾಂಕ್ಷಿಯಿಂದ ಮಹಿಳೆಯರಿಗೆ ಪ್ರವಾಸ ಭಾಗ್ಯ
ಅದಕ್ಕಾಗಿ ವೇಮಗಲ್ನ ಮಿನಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದ್ದು ಸಿದ್ದರಾಮಯ್ಯ ಇಂದು ಮಹಿಳಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಹೆಗಲಿಗೆ ವಹಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಮಹಿಳಾ ಸಮಾವೇಶ ಆಯೋಜನೆ ಮಾಡುವ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ರಂಗವನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಂತೂ ಸಿದ್ದರಾಮಯ್ಯ ಅವರು ಮಹಿಳಾ ಸಮಾವೇಶ ಮಾಡುತ್ತಿರುವ ವಿಚಾರವಾಗಿ ಕೆಂಡಾ ಮಂಡಲರಾಗಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕಳೆದ ಎಂಟು ವರ್ಷಗಳಿಂದ ನೂರಾರು ಕೋಟಿ ಹಗರಣ ಮಾಡಿದ್ದು ಹಗರಣವನ್ನು ಮುಚ್ಚಿ ಹಾಕೋದಕ್ಕೆ ಸಿದ್ದರಾಮಯ್ಯರ ಅಭಯ ಹಸ್ತ ನೀಡಿದ್ದರು ಅದರ ಋಣ ತೀರಿಸಿಕೊಳ್ಳಲು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸಿದ್ದರಾಮಯ್ಯ ಅವರಿಗೆ ಮಹಿಳಾ ಸಮಾವೇಶದ ಮೂಲಕ ಕೊಡುಗೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಮಹಿಳಾ ಸಮಾವೇಶಕ್ಕೆ ಬರುವ ಮಹಿಳೆಯರಿಗೆ ರೇಷ್ಮೆ ಸೀರೆ, ಚಿನ್ನದ ಮೂಗುತಿ, ಹಾಗೂ 500 ರೂ ಹಣ ಕೊಟ್ಟು ಮಹಿಳೆಯರನ್ನು ಕಾರ್ಯಕ್ರಮಕ್ಕೆ ಕರೆತರುತ್ತಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ವರ್ಚಸ್ಸು ಇಷ್ಟೇನಾ, ಇದೇ ನಾ ಅನ್ನರಾಮಯ್ಯನ ವರ್ಚಸ್ಸು ಎಂದು ಲೇವಡಿ ಮಾಡಿದ್ದಾರೆ.
ಒಟ್ಟಾರೆ ಕೋಲಾರದಲ್ಲಿ ನಾಮಪತ್ರ ಸಲ್ಲಿಸಿ ಹೋದರೆ ಸಾಕು ಗೆಲ್ತೀನಿ ಎಂದುಕೊಂಡಿದ್ದ ಸಿದ್ದುಗೆ ಸದ್ಯ ಕೋಲಾರದ ವಾಸ್ತವ ಸ್ಥಿತಿ ಅರಿವಾಗಿದ್ದು ಇಲ್ಲಿ ಯಾರನ್ನು ಬಂಬಲಿಸಿದ್ರು ಪ್ರಯೋಜನವಿಲ್ಲ ಎಂದು ತಾನೇ ಪದೇ ಪದೇ ಕೋಲಾರಕ್ಕೆ ಬಂದು ಹೋಗುವ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಲವು ತಂತ್ರಗಾರಿಕೆಯನ್ನು ಮಾಡುತ್ತಿರುವುದಂತೋ ಸುಳ್ಳಲ್ಲ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:01 am, Mon, 13 February 23