ಕೊರೊನಾ ಹೆಚ್ಚಳಕ್ಕೆ ಕಾರಣವಾಗಲಿದೆಯೇ ರೈತರ ದೆಹಲಿ ಚಲೋ ಚಳವಳಿ

ಪಂಜಾಬ್ ರೈತರ ದೆಹಲಿ ಚಲೊ ಕೊರೊನಾ ಸೋಂಕು ಹೆಚ್ಚಲು ಕಾರಣವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸಾವಿರಾರು ರೈತರು ಒಂದೆಡೆ ಸೇರುವುದನ್ನು ತಡೆಯಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೊರೊನಾ ಹೆಚ್ಚಳಕ್ಕೆ ಕಾರಣವಾಗಲಿದೆಯೇ ರೈತರ ದೆಹಲಿ ಚಲೋ ಚಳವಳಿ
ಸಾಂದರ್ಭಿಕ ಚಿತ್ರ
Edited By:

Updated on: Nov 30, 2020 | 6:25 PM

ದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಐದನೇ ದಿನವೂ ಮುಂದುವರೆದಿರುವ ಪಂಜಾಬ್ ರೈತರ ಪ್ರತಿಭಟನೆಯಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ICMRನ ಸೋಂಕುರೋಗ ವಿಭಾಗದ ಮುಖ್ಯಸ್ಥ ಸಮೀರನ್ ಪಂಡಾ, ಸೋಂಕು ಪ್ರಸರಣೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿತ್ತು. ಆದರೆ, ರೈತರ ಪ್ರತಿಭಟನೆಯಲ್ಲಿ ಕೊರೊನಾ ಮಾರ್ಗಸೂಚಿಯನ್ನು ಪಾಲಿಸಲಾಗಿಲ್ಲ. ಒಂದೇ ಕಡೆ ಸಾವಿರಾರು ಜನ ಸೇರಿರುವುದು ಕೊರೊನಾ ಸೋಂಕು ಹರಡಲು ಕಾರಣವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಐಪಿಸಿ 270ರ ಪ್ರಕಾರ ತಡೆಯಬಹುದಿತ್ತು..
ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿರುವ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಅಗರ್​ವಾಲ್, ಸಾಂಕ್ರಾಮಿಕ ರೋಗ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರದ ಬಳಿಯಿದೆ. ಐಪಿಸಿ 270ರ ಪ್ರಕಾರ ಸ್ಥಳೀಯ ಪೊಲೀಸರು ಸಾಂಕ್ರಾಮಿಕ ರೋಗ ಹೆಚ್ಚಿಸುವ ಪ್ರತಿಭಟನೆಯನ್ನು ತಡೆಯಬಹುದಿತ್ತು. ಎಲ್ಲಾ ಸಮಸ್ಯೆಗಳಿಗೂ ಸರ್ವೋಚ್ಛ ನ್ಯಾಯಾಲಯವೇ ಪರಿಹಾರ ಸೂಚಿಸಲಿ ಎಂದು ಬಯಸುವುದು ತಪ್ಪು’ ಎಂದು ವಿವರಿಸಿದರು.

ಕೊರೊನಾ ನಿಯಂತ್ರಿಸಲು ಇದುವರೆಗೆ ದೆಹಲಿ ಸರ್ಕಾರ ಕೈಗೊಂಡ ಕ್ರಮಗಳು ವ್ಯರ್ಥವಾಗಲಿವೆ. ಮಾರ್ಗಸೂಚಿ ಅನುಸರಿಸಿ ಪ್ರತಿಭಟನೆ ಮಾಡಬಹುದಿತ್ತು. ದೆಹಲಿಯನ್ನೂ ಮೀರಿ, ಇಡೀ ದೇಶಕ್ಕೇ ಕೊರೊನಾ ಹರಡಲು ದೆಹಲಿ ಚಲೋ ಕಾರಣವಾಗಲಿದೆ ಎಂದು AIIMS ನ ಪ್ರಾಧ್ಯಾಪಕ ಸಂಜಯ್ ರೈ ಆತಂಕ ವ್ಯಕ್ತಪಡಿಸಿದರು.

ವಾಯುಮಾಲಿನ್ಯದ ಹೆಚ್ಚಳದಿಂದ ಇತ್ತೀಚಿಗೆ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ದೆಹಲಿಗೆ ತೆರಳುವ ಮಾರ್ಗಗಳನ್ನೇ ಬಂದ್ ಮಾಡುತ್ತೇವೆ: ಎಚ್ಚರಿಕೆ ನೀಡಿದ ಪಂಜಾಬ್ ರೈತರು

Published On - 6:24 pm, Mon, 30 November 20