ನವದೆಹಲಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪತ್ರವನ್ನು ಬರೆದಿದ್ದಾರೆ. ಆ ಪತ್ರವನ್ನು ತೆಗೆದುಕೊಂಡು ಹೋಗಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಇಂದು ನಡೆಯಲಿರುವ ಅಧ್ಯಕ್ಷ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾರತದ ಪ್ರಧಾನಿ ಮೋದಿ ಅವರನ್ನು ಪ್ರತಿನಿಧಿಸುತ್ತಿರುವ ವಿದೇಶಾಂಗ ಸಚಿವ ಜೈಶಂಕರ್, ಭಾರತದ ಪ್ರಧಾನಿ ಬರೆದ ಪತ್ರವನ್ನು ಅಮೆರಿಕದ ನೂತನ ಅಧ್ಯಕ್ಷರಿಗೆ ಕೊಂಡೊಯ್ದಿದ್ದಾರೆ.
ಇಂದು ನಡೆಯಲಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ವಿಶೇಷ ರಾಯಭಾರಿಯಾಗಿ ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ವಿದೇಶಾಂಗ ಸಚಿವರ ಉಪಸ್ಥಿತಿಯು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ವಿಶೇಷ ರಾಯಭಾರಿಗಳನ್ನು ಕಳುಹಿಸುವ ಭಾರತದ ಸಾಮಾನ್ಯ ಪದ್ಧತಿಯ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪದಗ್ರಹಣ; ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿ ಜಾಗತಿಕ ನಾಯಕರು ಸಮಾರಂಭದಲ್ಲಿ ಭಾಗಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೇ 2023ರಲ್ಲಿ ನೈಜೀರಿಯಾ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಗಿನ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರು ನವೆಂಬರ್ 2023ರಲ್ಲಿ ಮಾಲ್ಡೀವಿಯನ್ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಜುಲೈನಲ್ಲಿ ಇರಾನ್ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಅವರು ಅಕ್ಟೋಬರ್ 2024ರಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಮತ್ತು ಮೆಕ್ಸಿಕೋ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2.0 ಯುಗಾರಂಭ; ಭಾರತದ ಮೇಲಾಗುವ ಪರಿಣಾಮವೇನು?
ಜೂನ್ 2022ರಲ್ಲಿ, ಆಗಿನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್ ಕುಮಾರ್ ರಂಜನ್ ಸಿಂಗ್ ಫಿಲಿಪೈನ್ಸ್ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೀಗ ಅಮೆರಿಕ ಅಧ್ಯಕ್ಷರ ಪ್ರಮಾಣವಚನದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗಿಯಾಗಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ