ಬಿಡುಗಡೆಯಾದ 24 ಗಂಟೆಗಳೊಳಗೆ ಹೊಸ ದಾಖಲೆ ಸೃಷ್ಟಿಸಿದ ಕೆಜಿಎಫ್-2 ಟೀಸರ್ ಎಲ್ಲೆಡೆ ಮನೆ ಮಾತಾಗಿದೆ. ಈ ಬಗ್ಗೆ ಚಲನಚಿತ್ರ ಉದ್ಯಮದವರು ಮಾತನಾಡಿಕೊಳ್ಳುವ ಹೊತ್ತಿಗೆ ಸರಿಯಾಗಿ ಈಗ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ತಮಿಳು ಚಲನಚಿತ್ರ ಮಾಸ್ಟರ್ ನಾಲ್ಕೇ ದಿನಗಳಲ್ಲಿ 400 ಕೋಟಿ ರೂಪಾಯಿ ಬಾಚಿಕೊಂಡು ದಾಖಲೆಯತ್ತ ಮುನ್ನುಗ್ಗುತ್ತಿದೆ. ಹಾಗಿದ್ದರೆ ಕೊವಿಡ್ನಿಂದ ಕಂಗಾಲಾದ ಭಾರತ ಚಲನಚಿತ್ರೋದ್ಯಮಕ್ಕೆ ದಕ್ಷಿಣ ಭಾರತದಲ್ಲಿ ಆಗುತ್ತಿರುವ ಈ ಬದಲಾವಣೆ ಆಶಾದಾಯಕವಾಗಿ ಪರಿಣಮಿಸಿದೆಯೇ ಎನ್ನುವುದು ಸದ್ಯ ಚರ್ಚೆ ಆಗುತ್ತಿರುವ ವಿಚಾರ.
ಸಂವಾದದಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ನಂದಕಿಶೋರ್, ಹಿರಿಯ ಪತ್ರಕರ್ತ ಶರಣು ಹುಲ್ಲೂರು ಭಾಗವಹಿಸಿದ್ದರು. ಟಿವಿ9 ಆ್ಯಂಕರ್ ಸೌಮ್ಯಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಒಟಿಟಿ ಪ್ಲಾಟ್ಫಾರ್ಮ್ಗಳು ನಾಲ್ಕೈದು ವರ್ಷಗಳ ಹಿಂದಷ್ಟೇ ಬಂದಿವೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವವರು ಇಂದಿಗೂ ಇದ್ದಾರೆ. ಉತ್ತಮ ಕಥೆ ಇರುವ ಸಿನಿಮಾಗಳು ಬರುವವರೆಗೂ ಜನ ಚಿತ್ರರಂಗಕ್ಕೆ ಬರುತ್ತಾರೆ. ಕೆಜಿಎಫ್ ಸಿನಿಮಾ ಇಡೀ ಕನ್ನಡ ಸಿನಿಮಾರಂಗದ ಹೆಮ್ಮೆ. ಹಿಂದೆ ಕನ್ನಡ ಬಂದ ನಂತರದಲ್ಲಿ ಮಲಯಾಳಂ ಸಿನಿಮಾ ಬರುತ್ತಿತ್ತು. ಆದರೆ ಅದು ಬದಲಾಗಿದೆ ಹಿಂದಿ, ತೆಲುಗು, ತಮಿಳು ಮಲಯಾಳಂ ಕನ್ನಡ ಬರುತ್ತಿದೆ. ನಾನು ಗಮನಿಸಿದ ಹಾಗೆ ಈಗ ಕೆಲ ದಿನಗಳಿಂದ ಟ್ಯಾಗ್ ಮಾಡುವಾಗ ಕನ್ನಡವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಬದಲಾವಣೆ ಕಾಣಲಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದರು.
ಅವನೇ ಶ್ರೀಮನ್ ನಾರಾಯಣ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ವಿತರಕರನ್ನು ಭೇಟಿ ಮಾಡಲು ಹೋದಾಗ ಕನ್ನಡ ಇಂಟಸ್ಟ್ರಿಯನ್ನು ಕೆಜಿಎಫ್ ಸಿನಿಮಾದಿಂದಲೇ ಗುರುತಿಸಿದರು. ರಿಮೇಕ್ ಸಿನಿಮಾಗಳನ್ನು ಮಾಡಿರುವುದರಿಂದ ನಾವು ಪ್ರೇಕ್ಷಕರನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಇಲ್ಲಿನ ಜನ ಎಲ್ಲಾ ಭಾಷೆಯ ಸಿನಿಮಾವನ್ನು ನೋಡುತ್ತಾರೆ. ಹೀಗಾಗಿ ಯಾವುದೇ ಬೇರೆ ಭಾಷೆಯ ಸಿನಿಮಾ ಮತ್ತೆ ಇಲ್ಲಿಗೆ ಬಂದಾಗ ಖಂಡಿತಾ ಅದು ಜನರಿಂದ ಕಡೆಗಣಿಸಲ್ಪಡುತ್ತದೆ. ಸ್ವಮೇಕ್ ಸಿನಿಮಾಗಳಿಗೆ ಸದ್ಯ ಗಮನ ಕೊಡುವುದರಿಂದ ಈಗ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟಿದ್ದಾರೆ.
ಈಗ ಕೊರೊನಾ ಕಾರಣದಿಂದ ಸ್ವಲ್ಪ ಭಯಪಟ್ಟಿರುವುದು ನಿಜ. ಇದರಿಂದ ಸಿನಿಮಾ ನಿರ್ಮಾಪಕರಿಗೆ ಹೊಡೆತ ಬಿದ್ದಿದೆ. ನನ್ನ 5 ಸಿನಿಮಾಗಳು ಬಾಕಿ ಇವೆ. ಆದರೆ ಕೊರೊನಾದಿಂದ ಆರೋಗ್ಯ ಸಂಬಂಧಿ ನಿಯಮಗಳಿಗೆ ಪ್ರಾಮುಖ್ಯತೆ ಕೊಡುವಂತಾಗಿದೆ. ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಿಕೊಳ್ಳಲು ಮತ್ತು ಆತ್ಮಾವಲೋಕನ ಮಾಡಿಕೊಳ್ಳಲು ಇದರಿಂದ ಅವಕಾಶ ಸಿಕ್ಕಿತು. ಹೊಸ ಕತೆ, ವಿಚಾರಗಳನ್ನು ಯೋಚಿಸಲು ಸಮಯ ಸಿಕ್ಕಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದರು.
ಸಿನಿಮಾ ಎಂದು ಬಂದಾಗ ಎಲ್ಲವೂ ಒಂದೇ. ಭಾಷೆ ಬೇರೆ ಆದರೂ ಉದ್ಯಮ ಒಂದೇ. ಎಲ್ಲರೂ ಸಿನಿಮಾ ಮಾಡುವುದು ಮನರಂಜನೆ ನೀಡುವ ಉದ್ದೇಶದಿಂದ. ಇನ್ನು ಚಿತ್ರರಂಗ ಎಂದು ಬಂದಾಗ ಒಂದೇ ಕುಟುಂಬ ಇದ್ದ ಹಾಗೆ ಇದರಲ್ಲಿ ಕೆಜಿಎಫ್ ಸಿನಿಮಾ ತನ್ನದೇ ಆದ ಪ್ರಾಧಿಕಾರವನ್ನು ಹೊಂದಿದ್ದು ಇದರ ಬಗ್ಗೆ ಹೆಮ್ಮೆ ಪಡುವಂತಾಗಿದೆ. ನಾವು ಕೂಡ ಪ್ರಬಲರಾಗಿದ್ದೀವೆ ಎನ್ನುವುದಕ್ಕೆ ಇದು ನಿದರ್ಶನ . ಇನ್ನು ಒಟಿಟಿ ಬಗ್ಗೆ ಮಾತನಾಡುವಾಗ ಒಂದು ವಿಷಯ ಪ್ರಸ್ತಾಪ ಮಾಡಬಹುದು. ಆನ್ಲೈನ್ ಕ್ಲಾಸ್ ಇದ್ದರೂ ಶಾಲೆಗೆ ಮಕ್ಕಳನ್ನು ಕಳಿಸಬೇಕು ಎಂಬ ವಾದವಿದೆ. ಹಾಗೆಯೇ ಸಿನಿಮಾ ಎಂದಾಗ ಹೊರ ಬಂದು ಥಿಯೇಟರ್ನಲ್ಲಿ ಸಿನಿಮಾ ನೋಡಬೇಕು ಎನ್ನುವ ಉತ್ಸಾಹ ಜನರಲ್ಲಿ ಇನ್ನೂ ಇದೆ. ಇದು ಈ ಉದ್ಯಮಕ್ಕೆ ಇರುವ ಶಕ್ತಿ ಎಂದು ನಿರ್ದೇಶಕ ನಂದಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ಪೊಗರು ಸಿನಿಮಾಗೆ ಧ್ರುವ ಸರ್ಜಾ, ನಿರ್ಮಾಪಕ ಗಂಗಾಧರ್ ಶ್ರಮ ವಹಿಸಿದ್ದಾರೆ. 3 ವರ್ಷಗಳ ಶ್ರಮ ಈ ಸಿನಿಮಾದ ಮೇಲೆ ಇದೆ. ಈ ಸಿನಿಮಾದಲ್ಲಿ ಭಾವನೆಗಳ ಮೇಲೆ ಕಥೆ ಹೆಣೆದಿದ್ದೇವೆ. ಹೀಗಾಗಿ ಈ ಸಿನಿಮಾದ ಮೇಲೆ ನಮಗೆ ಒಂದು ನಿರೀಕ್ಷೆ ಇದೆ. ಇದು ನಮ್ಮ ಸಿನಿಮಾದ ಮೇಲೆ ನಮಗೆ ಇರುವಂತಹ ಒಂದು ಊಹೆ ಇದೆ. ಇದು ನಾವು ಮಾಡಿರುವ ಕೆಲಸದ ಮೇಲೆ ನಮಗೆ ಇರುವಂತಹ ಒಂದು ನಂಬಿಕೆ. ಈ ರೀತಿಯ ಒಂದು ಕಥೆಯ ಚಿತ್ರಣ ಮೊಬೈಲ್ನಲ್ಲಿ ನೋಡುವುದರಿಂದ ಯಾವುದೇ ರೀತಿಯ ಫಲಿತಾಂಶ ಸಿಗಲ್ಲ. ಸಿನಿಮಾದ ನಿಜವಾದ ಖುಷಿ ಇರುವುದು ಚಿತ್ರಮಂದಿರಗಳಲ್ಲಿ ಮಾತ್ರ. ಬೆಳಕಿನಲ್ಲಿ ಸಿನಿಮಾ ಶೂಟ್ ಮಾಡಿ ಕತ್ತಲಿನಲ್ಲಿ ತೋರಿಸುತ್ತೇವೆ. ಸಿನಿಮಾ ಎನ್ನುವಂಥದ್ದು, ಕನಸಿನಂತೆ. ನಿಮ್ಮ ರಕ್ಷಣೆ ನಮ್ಮ ಜವಾಬ್ದಾರಿ ದಯವಿಟ್ಟು ಚಿತ್ರರಂಗಕ್ಕೆ ಬನ್ನಿ ಎಂದು ನಿರ್ದೇಶಕ ನಂದಕಿಶೋರ್ ಹೇಳಿದರು.
ಈಗ ಕನ್ನಡ ಸಿನಿಮಾ ರಂಗದಲ್ಲಿ ಖಂಡಿತಾ ಆಶಾಭಾವ ಇದೆ. ಮೊದಲು ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗುತ್ತಿದ್ದವು ಆದರೆ ಈಗ ಕನ್ನಡ ಸಿನಿಮಾಗಳು ಕೂಡ ಅನ್ಯ ಭಾಷೆಗೆ ರಿಮೇಕ್ ಆಗುತ್ತಿದೆ. ಈಗ ಕನ್ನಡ ಸಿನಿಮಾವನ್ನು ಬಾಲಿವುಡ್ ತಿರುಗಿ ನೋಡುತ್ತಿದೆ. ಒಳ್ಳೇ ಕಂಟೆಂಟ್ ಸಿನಿಮಾಗಳು ಇಲ್ಲಿ ಬರುತ್ತಿರುವುದು ಕನ್ನಡ ಸಿನಿಮಾದ ಯಶಸ್ಸಿಗೆ ಕಾರಣವಾಗಿದೆ ಎಂದು ಹಿರಿಯ ಪತ್ರಕರ್ತ ಶರಣು ಹುಲ್ಲೂರು ಹೇಳಿದರು.
ಒಟ್ಟಾರೆ ಕನ್ನಡ ಸಿನಿಮಾರಂಗ ಈಗ ಹೆಚ್ಚು ಬದಲಾವಣೆಗಳನ್ನು ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಬಾಲಿವುಡ್, ಟಾಲಿವುಡ್ಕ್ಕಿಂತ, ಸ್ಯಾಂಡಲ್ವುಡ್ ಹೆಚ್ಚು ಯಶಸ್ಸನ್ನು ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದು ಸದ್ಯದ ವಿಚಾರ.
TV9 Facebook Live | ಕೊರೊನಾ ಲಸಿಕೆಯ ಊಹಾಪೋಹಗಳ ಬಗ್ಗೆ ವೈದ್ಯರ ವಿವರಣೆ