
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ನಲ್ಲಿ ಆಡಲಿರುವ ಟೀಂ ಇಂಡಿಯಾ ಆಟಗಾರರ ಹೆಸರು ಪ್ರಕಟವಾಗಿದೆ. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ತಂಡಕ್ಕೆ ಮರಳಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ನಾಳೆ ಕಾಂಗ್ರೆಸ್ ಪಕ್ಷ ಮತ್ತು ರೈತ ಸಂಘಟನೆಗಳಿಂದ ರಾಜಭವನ ಚಲೋ ನಡೆಸಲು ನಿರ್ಧರಿಸಲಾಗಿದೆ. ಮೆರವಣಿಗೆ ಮಾಡುವವರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಕೊವಿಡ್ 19 ಮಾರ್ಗಸೂಚಿ ಪಾಲಿಸುವಂತೆ ಸಂಘಟಕರಿಗೆ ಹೇಳಿದ್ದೇವೆ ಎಂದು ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. ಮೆರವಣಿಗೆ ಇದ್ದರೂ ಸಂಚಾರ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿರುವ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಹುಟ್ಟಿನಿಂದ ಎಲ್ಲರೂ ಸಮಾನರೆನ್ನುವವನೇ ಸರ್ವಶ್ರೇಷ್ಠನು ಎಂಬ ಉನ್ನತ ಚಿಂತನೆ ಹೊಂದಿದವರು ವೇಮನರು. ಯುವಕರಿಗೆ ವೇಮನ ಪದ್ಯದವನ್ನು ಅಧ್ಯಯನ ಮಾಡಲು, ಸಂಶೋಧನೆ ಮಾಡಲು ಅವಕಾಶ ಒದಗಿಸಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಶಾಸಕ ಸತೀಶ್ ರೆಡ್ಡಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಉಪಸ್ಥಿತರಿದ್ದರು.
ನೂತನ ಸಚಿವರಿಗೆ ಗುರುವಾರ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸಂಸತ್ ಭವನದ ಕ್ಯಾಂಟೀನ್ನಲ್ಲಿದ್ದ ಸಬ್ಸಿಡಿ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ಸುಮಾರು 5 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಲಸಿಕೆಗಳು ಸುರಕ್ಷಿತ ಎಂದು ಸಾಬೀತಾಗಿದೆ. ವ್ಯಾಕ್ಸಿನ್ ಕೊರೊನಾ ಸೋಂಕು ಬರದಂತೆ ತಡೆಯುತ್ತದೆ ಎಂದು ICMR ಯ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ ಹೇಳಿದ್ದಾರೆ.
ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 141ಕ್ಕೇರಿಕೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.
ಹಾಡು ಹಾಡಿ ಜೀವನ ಮಾಡುತ್ತಿರುವ ಗುಲ್ಬರ್ಗಾ ಮೂಲದ ಔರಾದ್ ಗ್ರಾಮದ ಯವಕ ಮೈಕ್ ಸ್ಪೀಕರ್ ಕೊಡಿಸಿ ಎಂದು ಮನವಿ ಮಾಡಿದ್ದರು. ಸುದೀಪ್ ಗಮನಕ್ಕೆ ವಿಷಯ ತಲುಪಿದ್ದು, ಅವರಿಗೆ ಮೈಕ್ ಹಾಗು ಸ್ಪೀಕರ್ ಕೊಡಿಸುವ ಕೆಲಸ ಮಾಡಿದ್ದಾರೆ.
ತುಮಕೂರು ತಾಲ್ಲೂಕಿನ ಹೆಗ್ಗೆರೆಯಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ಎಟಿಎಂ ಮಿಷನ್ನ ಇಬ್ಬರು ಹೊತ್ತೊಯ್ದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಹಳ ವೇಗವಾಗಿ ಮತ್ತು ಸುಸೂತ್ರವಾಗಿ ಲಸಿಕೆ ನೀಡಲಾಗುತ್ತಿದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ರಕ್ಷಣೆಗಾಗಿ ಲಸಿಕೆ ನೀಡಲಾಗುತ್ತಿದೆ. ದಯವಿಟ್ಟು ಮುಂದೆ ಬಂದು ಲಸಿಕೆ ಪಡೆಯಿರಿ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮನವಿ ಮಾಡಿದ್ದಾರೆ.
ಯತ್ನಾಳ್ಗೆ ಮಂತ್ರಿಗಿರಿ ಬೇಕಿದೆ, ಅದಕ್ಕಾಗಿ ಇಂತಹ ವರ್ತನೆ ತೋರುತ್ತಿದ್ದಾರೆ. ನಾನು ಅಧ್ಯಕ್ಷನಾಗಿದ್ದಾಗಲೂ ಇದೇ ರೀತಿ ನಡವಳಿಕೆ ತೋರಿದ್ದರು. ಆದರೆ ಇಂತಹ ಒತ್ತಡಕ್ಕೆ ಪಕ್ಷ ಯಾವುದೇ ಸೊಪ್ಪು ಹಾಕಲ್ಲ. ಇನ್ಮುಂದೆ ಪಕ್ಷದ ವಿರುದ್ಧ ಮಾತಾಡಿದರೆ ಕೇಂದ್ರದ ನಾಯಕರು ಕ್ರಮಕೈಗೊಳ್ಳುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸದಾನಂದಗೌಡ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಚರ್ಚೆ ನಡೆಸಿದ ರೇಣುಕಾಚಾರ್ಯರವರು 2 ಗಂಟೆ ಕಾಲ ಚರ್ಚಿಸಿದ್ದೇನೆ. ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದೇನೆ. ಈ ನಡುವೆ ಸಿಎಂ ಯಡಿಯೂರಪ್ಪ ಕೂಡ ಕರೆ ಮಾಡಿದ್ದರು. ಯಡಿಯೂರಪ್ಪನವರ ವಿರುದ್ಧ ಮಾತನಾಡುವುದು ಸರಿಯಲ್ಲ. ಸಿಎಂ ಯಡಿಯೂರಪ್ಪನವರ ಬಗ್ಗೆ ಅಪಾರ ಗೌರವ ಇದೆ. ನನಗಿಂತ ಹಿರಿಯರು ಇದ್ದಾರೆ ಅವರನ್ನು ಮಂತ್ರಿ ಮಾಡಲಿ. ಬೆಂಗಳೂರಿಗೆ ತೆರಳಿ ಯಡಿಯೂರಪ್ಪರನ್ನು ಭೇಟಿ ಮಾಡುತ್ತೀನಿ ಎಂದು ಹೇಳಿದ್ದಾರೆ.
ಮುಂದಿನ ತಿಂಗಳು ಪೊಗರು ಸಿನಿಮಾ ಬಿಡುಗಡೆ ಹಿನ್ನೆಲೆ ಸಿನಿಮಾ ನೋಡಲು ರಜೆ ಕೊಡಿ ಎಂದು ಎಸ್ಇಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹಿಟ್ಲರ್, ಮುಸಲೋನಿ ಇತಿಹಾಸ ನೋಡಿದ್ದೇವೆ. ಅಂತಹ ನಿರ್ಧಾರಗಳನ್ನು ಮೋದಿ ತೆಗೆದುಕೊಳ್ಳುತ್ತಾರೆ. ಪ್ರಧಾನಿ ಮೋದಿ ರೈತ ವಿರೋಧಿ ಕಾನೂನು ತಂದಿದ್ದಾರೆ ಎಂದು ಹೇಳಿಕೆ ನೀಡಿದ ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಸ್ವಯಂಕೃತ ಆತ್ಮಹತ್ಯೆ ನಡವಳಿಕೆ ಮೋದಿಯದ್ದಾಗಿದೆ. ಶೇ.70ರಷ್ಟು ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಧರಣಿ ನಿರತ ರೈತರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ.
ದೆಹಲಿಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಮನೆಗೆ ಭೇಟಿ ನೀಡಿ ರೇಣುಕಾಚಾರ್ಯ ಚರ್ಚೆ ನಡೆಸಿದರು.
ಸಿಐಎಸ್ಎಫ್ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಕೇಂದ್ರ ಸರ್ಕಾರದ ಅಧಿಕಾರಿ ದಂಪತಿ ಬಳಿಯಿದ್ದ ಕಂತೆ ಕಂತೆ ಹಣವನ್ನು ಅಧಿಕಾರಿಯ ಪತ್ನಿ ಕೆಂಪೇಗೌಡ ಏರ್ ಪೋರ್ಟ್ನ ಬಾತ್ ರೂಂ ನಲ್ಲಿ ಬಿಸಾಡಿದ ಮಾಹಿತಿ ತಿಳಿದುಬಂದಿದೆ. ಎರಡು ದುಬಾರಿ ಮೊಬೈಲ್, ಆಫಲ್ ವಾಚ್, ಒಂದು ಸೂಟ್ ಕೇಸ್, ಬ್ಯಾಗ್ನಲ್ಲಿದ್ದ 74 ಲಕ್ಷದ 81 ಸಾವಿರ ರೂ.ಹಣವನ್ನು ಜಪ್ತಿ ಮಾಡಲಾಗಿದೆ.
ಇಡೀ ಸಚಿವ ಸಂಪುಟ ಪುನಾರಚನೆ ಮಾಡಲು ಆಗ್ರಹಿಸಿ 20 ತಿಂಗಳಿಂದ ಸಚಿವರಾದವನ್ನು ಸಂಪುಟದಿಂದ ಕೈಬಿಡಿ. 32 ಜನ ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ. ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಕೊಡಬೇಕು ಎಂದು ಬೆಂಗಳೂರಿನ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿನ ಭಾರತ ತಂಡದಿಂದ ಅತಿ ವಿರಳ ಹಾಗೂ ಅದ್ಭುತ ಸಾಧನೆಯಾಗಿದೆ ಎಂದು ಆಂಧ್ರ ಪ್ರದೇಶದ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
130 ಕೋಟಿ ಪೈಕಿ 11 ಮಂದಿ ಆಯ್ಕೆಯಾಗಿ ಬಂದಿದ್ದಾರೆ. ಹೀಗಾಗಿ ಟೀಂ ಇಂಡಿಯಾವನ್ನು ಕಡೆಗಣಿಸೋಕೆ ಹೋಗಬೇಡಿ. ಭಾರತೀಯ ಕ್ರಿಕೆಟಿಗರನ್ನು ಹಗುರವಾಗಿ ಪರಿಗಣಿಸಲೇಬೇಡಿ ಎಂದು ಆಸ್ಟ್ರೇಲಿಯಾ ತಂಡಕ್ಕೆ ಕೋಚ್ ಜಸ್ಟಿನ್ ಲ್ಯಾಂಗರ್ ಸಲಹೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪ್ರವಾಸದಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿಗೆ ವಾಪಸಾಗಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಲ್ಲಾ ಶಾಸಕರು ಘರ್ ವಾಪಸ್ಸಿ ಅಗಲಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಾವು ಈಗ ಸಕ್ರಿಯ ರಾಜಕಾರಣಿಗಳು, ನಾವ್ಯಾಕೆ ಬಿಜೆಪಿ ತೊರೆಯಬೇಕು? ಅದು ನಿಷ್ಕ್ರಿಯವಾಗಿರುವ ರಾಜಕಾರಣಿಗಳು ಕಾಂಗ್ರೆಸ್ ಸೇರ್ಪಡೆ ಆಗಬಹುದು. ಆದರೆ ನಾವಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಕೋರ್ ಕಮಿಟಿಯಲ್ಲಿ ಜಿ.ಟಿ.ದೇವೇಗೌಡರ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿ ಪಕ್ಷದ ಸಂಘಟನೆ ಬಗ್ಗೆ ಅವರಿಗೆ ಆಸಕ್ತಿಯಿಲ್ಲ. ಅವರೇ ಹೇಳಿದ್ದಾರೆ ನನಗೆ ನನ್ನ ಕ್ಷೇತ್ರ ಮುಖ್ಯ ಅಂತಾ. ಪಕ್ಷದ ಸಂಘಟನೆಗೆ ಸಮಯ ಕೊಡಲು ಆಗಲ್ಲ ಎಂದಿದ್ದಾರೆ. ಈಗ ಅವರಿಗೆ ಕ್ಷೇತ್ರದ ಬಗ್ಗೆ ಗಮನಬಂದಿದೆ. ಹಾಗಾಗಿ ಕೇವಲ ವಿಸಿಟಿಂಗ್ ಕಾರ್ಡ್ ಗಾಗಿ ನಾನು ಅವಕಾಶ ಕೊಡ್ಲ? ಇಲ್ಲಿ ವಯಸ್ಸಿನ ವಿಚಾರ ಬರಲ್ಲ, ಹೊರಟ್ಡಿಯವರಿಗೆ ವಯಸ್ಸಾಗಿಲ್ಲವಾ? ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನಾಳೆ ಕಾಂಗ್ರೆಸ್ ವತಿಯಿಂದ ರಾಜಭವನ ಚಲೋ ಬೃಹತ್ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನ ಹೃದಯ ಭಾಗದಲ್ಲಿ ಟ್ರಾಫಿಕ್ ಜಾಂ ಆಗುವ ಸಾಧ್ಯತೆ ಹೆಚ್ಚಿದೆ.
ಪಾಕ್ನ ಬಾಲಾಕೋಟ್ ದಾಳಿ ಮಾಹಿತಿ ಸೋರಿಕೆ ವಿಚಾರಕ್ಕೆ ಸಂಬಂಧಿಸಿ ನಾಲ್ಕೈದು ಜನರಿಗೆ ಮಾತ್ರ ದಾಳಿಯ ಬಗ್ಗೆ ಮಾಹಿತಿ ಇರುತ್ತದೆ. ಪ್ರಧಾನಿ, ಕೇಂದ್ರ ಗೃಹ ಸಚಿವರು, ರಕ್ಷಣಾ ಇಲಾಖೆ ಸಚಿವ, ವಾಯು ಸೇನೆ ಮುಖ್ಯಸ್ಥರಿಗೆ ಮಾತ್ರ ಈ ಬಗ್ಗೆ ಗೊತ್ತಿರುತ್ತದೆ. ಆದ್ರೆ ಅರ್ನಾಬ್ ಗೋಸ್ವಾಮಿಗೆ ದಾಳಿಗೂ ಮುಂಚೆ ಮಾಹಿತಿ ಗೊತ್ತಿದ್ದರೆ ಅದು ಕ್ರಿಮಿನಲ್ ಕೃತ್ಯ. ಅರ್ನಾಬ್ಗೆ ಗೊತ್ತಿದ್ರೆ ಪಾಕಿಸ್ತಾನಕ್ಕೂ ಮಾಹಿತಿ ಗೊತ್ತಿರುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಭಾರತದ ತಂಡದಿಂದ ಆಸ್ಟ್ರೇಲಿಯಾದಲ್ಲಿದಾಖಲೆಯ ವಿಜಯಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಭಾಶಯ ಕೋರಿದ್ದು, ಯುವ ತಂಡ ವಿಶಿಷ್ಟ ಕೌಶಲ್ಯದಿಂದ ಅದ್ಭುತ ಸಾಧನೆ ಮಾಡಿದೆ. ತಂಡದ ಈ ಸಾಧನೆ ಭಾರತಕ್ಕೆ ಹೆಮ್ಮೆ ಮೂಡಿಸಿದೆ ಎಂದು ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.
ಕೃಷಿ ಕಾಯ್ದೆ ಬಗ್ಗೆ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮೊದಲ ಸಭೆಯನ್ನು ಜನವರಿ 21 ರಂದು ನಿಗದಿಪಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ನ ನೇಮಕ ಸಮಿತಿಯ ಸದಸ್ಯ ಅನಿಲ್ ಘನ್ವಾತ್ ತಿಳಿಸಿದ್ದಾರೆ.
ನಾನು ಈಗಷ್ಟೇ ಟೆಸ್ಟ್ನಲ್ಲಿ ಭಾರತದ ಗೆಲುವನ್ನು ನೋಡಿದೆ ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನಿಜಕ್ಕೂ ಇದು ಅತ್ಯಂತ ಅರ್ಹ ಗೆಲುವು ಎಂದರು.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಟ್ವೀಟ್ ಮೂಲಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಸತತ 8 ಗಂಟೆಗಳ ಕಾಲದ ಕಾರ್ಯಚರಣೆಯಲ್ಲಿ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ನುಗು ಜಲಾಶಯದಲ್ಲಿ ಮೀನಿನ ಬಲೆಗೆ ಸಿಕ್ಕಿಕೊಂಡ ಆನೆಯನ್ನು ರಕ್ಷಿಸಲಾಗಿದೆ.
ಭಾತರ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಗೆಲವು ಸಾಧಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದರು.
ಶಿವಮೊಗ್ಗದ ಪಿಎಂಎವೈ ನಗರ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆಯೆಂದು ತನಿಖೆಗೆ ಆಗ್ರಹಿಸಿ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದೆ.
ನೀವು ಹೇಳಿದ್ದನ್ನೆಲ್ಲಾ ಕೇಳಿ ಕೊಂಡು ಕೈಮುಗಿದು ನಿಲ್ಲಬೇಕಾ? ನೀವು ರೈತರು ಬೆಳೆದ ಅನ್ನ ತಿಂದು ಮಜಾ ಮಾಡುತ್ತಿದ್ದೀರಿ. ಹಸಿರು ಶಾಲು ಹಾಕಿಕೊಂಡು ರೈತರ ಮರ್ಯಾದೆ ಕಳೆಯುತ್ತಿದ್ದೀರಿ. ನೀವೇನು ಆಕಾಶದಿಂದ ಧರೆಗಿಳಿದು ಬಂದಿದ್ದೀರಾ? ನಿಮ್ಮ ಸರ್ಕಾರ ಮತ್ತು ನಿಮ್ಮ ನಡವಳಿಕೆಗೆ ನಾಚಿಕೆಯಾಗಬೇಕು ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ಗೆ ರೈತರು ಬೆವರಿಳಿಸಿದರು.
ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆಂಬುದೇ ಗೊತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ಪರಿಜ್ಞಾನವೂ ಇಲ್ಲ. ಆಡಳಿತ ನಡೆಸಲು ಗೊತ್ತಿಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಸಚಿವ ಬಿ.ಸಿ.ಪಾಟೀಲ್ಗೆ ರೈತರು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಮೀಸಲಾತಿ ಪಾದಯಾತ್ರೆಗಳ ವಿಚಾರಕ್ಕೆ ಸಂಬಂಧಿಸಿ, ಆಯಾ ಜನಾಂಗದವರು ಮೀಸಲಾತಿ ಸಿಗಬೇಕು ಅಂತ ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತಾರೆ. ನಮ್ಮ ದೇಶದಲ್ಲಿ ಸಂವಿಧಾನವಿದೆ. ಸಂವಿಧಾನ ಪ್ರಕಾರವೇ ಮಾಡಬೇಕು. ಕುಲಶಾಸ್ತ್ರ ಅಧ್ಯಯನದ ಪ್ರಕಾರ ಅರ್ಹತೆ ಇದ್ದವರಿಗೆ ಮೀಸಲಾತಿ ಸಿಗುತ್ತದೆ ಎಂದು ಪರೋಕ್ಷವಾಗಿ ಕಾರಜೋಳ ವಿರೋಧ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲವು ಸಾಧಿಸಿದ್ದು, ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ಕ್ರಿಕೆಟ್ ಆಟಗಾರರು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತದೆ. 2 ದಿನದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ. ಅಲ್ಲದೇ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇವೆ ಎಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸಿಎಂ ಬಿಎಸ್ವೈ ಹೇಳಿಕೆ ನೀಡಿದ್ದಾರೆ.
ಇದೊಂದು ಅತ್ಯದ್ಭುತ ಗೆಲುವಾಗಿದೆ. ನಮ್ಮನ್ನು ಅವಮಾನಿಸಿದವರಿಗೆ ಇದು ತಿರುಗೇಟು ಎಂದು ಕೊಹ್ಲಿ ಹೇಳಿ ಟ್ವೀಟ್ ಮೂಲಕ ತಂಡಕ್ಕೆ ಶುಭಾಶಯ ತಿಳಿಸಿದರು.
ಸರ್ಕಾರ ತನ್ನ ಅಹಂಕಾರದಿಂದ ರೈತರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿದೆ. ಪ್ರಧಾನಿಗಿಂತ ರೈತರು ಚೆನ್ನಾಗಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ದೇಶದ ಆರ್ಥಿಕತೆ ಉತ್ತಮ ಸ್ಥಿತಿಯಿಂದ ನಿಕೃಷ್ಟ ಸ್ಥಿತಿಗೆ ಹೋಗುತ್ತಿದೆ ಎಂದು ಮಾತನಾಡಿದ ರಾಹುಲ್ ಮೂರು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಲೇಬೇಕು ಎಂದರು.
ಇದುವರೆಗೂ ಕೃಷಿಯಲ್ಲಿ ಏಕಸ್ವಾಮ್ಯ ಇರಲಿಲ್ಲ. ಆದರೆ ಇದೀಗ ಪ್ರತಿಯೊಂದು ಕ್ಷೇತ್ರದಲ್ಲಿ ನಾಲ್ಕೈದು ವ್ಯಕ್ತಿಗಳ ಏಕಸ್ವಾಮ್ಯ ಇದೆ. ಕೃಷಿ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಪೂರ್ವದ ಸ್ಥಿತಿ ಮರುಕಳಿಸುತ್ತಿದೆ. ಇದರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ರೈತರಿಗೆ ಪೂರ್ತಿ ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ಕಲ್ಯಾಣಮಂಟಪದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಮಸ್ಕಿಯ 4 ಗ್ರಾಮ ಪಂಚಾಯತಿ ರೈತರ ಜೊತೆ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಉಪಸ್ಥಿತರಿದ್ದಾರೆ.
ಸರ್ಕಾರಗಳು ತನ್ನ ಕೆಲಸ ಮಾಡುತ್ತಿವೆ. ಹಳ್ಳಿಯಲ್ಲಿರುವವರು ಬಹುತೇಕರು ರೈತರೇ ಆಗಿರುತ್ತಾರೆ. ಹಳ್ಳಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರೆಲ್ಲಾ ರೈತರಾಗಲ್ಲ. ಆತ್ಮಹತ್ಯೆಗೆ ಕಾರಣವನ್ನು ತಜ್ಞರು ಹುಡುಕಬೇಕಾಗಿದೆ. ತಜ್ಞರ ವರದಿಯಂತೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಕೇವಲ ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಉದ್ಯಮಿಗಳು, ಅಧಿಕಾರಿಗಳು, ಇತರೇ ಕ್ಷೇತ್ರದ ಜನರು ಸೇರಿ ಎಲ್ಲ ವಲಯದಲ್ಲೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದ ನೀತಿ ಕಾರಣವಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಹೋಗಿ ಹಾರ ಹಾಕಿ, ಸಾಂತ್ವನ ಹೇಳಿದ್ರೆ ರೈತರ ಆತ್ಮಹತ್ಯೆ ನಿಲ್ಲಲ್ಲ. ಅದಕ್ಕೆ ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಬ್ರಿಸ್ಬೇನ್ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಜಯ ಸಿಕ್ಕಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜಭವನ ಮುತ್ತಿಗೆ ಹಾಕಿದ ಹಿನ್ನೆಲೆ, ಎಲ್ಲೆಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುಪೊಲೀಸರು ಬಂಧಿಸಿದ್ದಾರೆ. ಲುಂಬಿನಿ ಪಾರ್ಕ್ ಬಳಿ ಸೇರಿದ ಕಾಂಗ್ರೆಸ್ ನಾಯಕರನ್ನು ಮುಂದೆ ಹೋಗದಂತೆ ಪೊಲೀಸರು ತಡೆದಿದ್ದಾರೆ.
ಪುತ್ರಿ ಮದುವೆ ಹಿನ್ನೆಲೆಯಲ್ಲಿವಿಶೇಷ ಪೂಜೆಯನ್ನು ಡಿ.ಕೆ.ಶಿವಕುಮಾರ್ ಕುಟುಂಬ ನಡೆಸುತ್ತಿದ್ದು, ಕೇವಲ ಕುಟುಂಬಸ್ಥರಿಗೆ ಮಾತ್ರ ಮನೆಯೊಳಗೆ ಪ್ರವೇಶ ನೀಡಲಾಗಿದೆ.
ಚೀನಾದಿಂದ ಭಾರತದ ಅರುಣಾಚಲ ಪ್ರದೇಶದಲ್ಲಿ ಗ್ರಾಮ ನಿರ್ಮಾಣದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಧ್ಯಾಹ್ನ 1.30 ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಭಾರತ- ಚೀನಾ ಗಡಿ ಬಿಕ್ಕಟ್ಟು ಬಗ್ಗೆ ರಾಹುಲ್ ವಾಗ್ದಾಳಿ ಮಾಡುವ ಸಾಧ್ಯತೆಯಿದೆ.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಯ ಗಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕಲಬುರಗಿ ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಉದ್ದವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ಹಾಸ್ಟೆಲ್ ವ್ಯವಸ್ಥೆ, ಅತಿಥಿ ಉಪನ್ಯಾಸಕರ ನೇಮಕಾತಿ, ಬಸ್ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಯಿಟ್ಟು ಶಿವಮೊಗ್ಗ ಡಿಸಿ ಕಚೇರಿ ಎದುರು ಎಬಿವಿಪಿಯಿಂದ ಪ್ರತಿಭಟನೆ ನಡೆಯುತ್ತಿದೆ.
ಸಿಎಎ, ಎನ್ಆರ್ಸಿ ಖಂಡಿಸಿ ಮಂಗಳೂರಿನಲ್ಲಿ ನಡೆದಿದ್ದ ಗೋಲಿಬಾರ್ ಪ್ರತಿಕಾರ ತೀರಿಸಿಕೊಳ್ಳಲು ‘ಟೀಮ್ ಮಾಯಾ’ ಹೆಸರಲ್ಲಿ ಮುಂದಾದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಜಮೀನಿಗೆ ನೀರು ಬಿಡಲು ಹೋದ ವೇಳೆ ಬಾಲಕನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಸ್ತೂರಿಪುರದಲ್ಲಿ ನಡೆದಿದೆ. ಕರಡಿ ದಾಳಿಯನ್ನು ಗಮನಿಸಿದ ಎರಡು ನಾಯಿಗಳು ಕರಡಿ ಮೇಲೆ ದಾಳಿ ನಡೆಸಿ ಬಾಲಕನ ಪ್ರಾಣ ಉಳಿಸಿವೆ.
ರೈತರ ಮೈಂಡ್ ವೀಕ್ ಆದಾಗ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬದಲಾಗಿ ಸರ್ಕಾರದ ನೀತಿಗಳು ಕಾರಣವಲ್ಲ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಕೃಷಿ ತಿದ್ದುಪಡಿ ಕಾಯ್ದೆ ಖಂಡಿಸಿ ರೈತರ ಹೋರಾಟ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯ ಮೊದಲ ಸಭೆ ಶುರುವಾಗಿದೆ.
ಮೀನಿನ ಬಲೆಯಲ್ಲಿ ಸಿಲುಕಿ ಕಾಡಾನೆ ಪರದಾಟ ಪಟ್ಟ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಬಿರ್ವಾಳಿ ಗ್ರಾಮದಲ್ಲಿ ನಡೆದಿದೆ. ಬಲೆಯಲ್ಲಿ ಸಿಲುಕಿದ ಕಾಡಾನೆಯನ್ನುಅರಣ್ಯಾಧಿಕಾರಿ ಸಿಬ್ಬಂದಿ ರಕ್ಷಿಸಿದೆ.
ಶಾಸಕ ರೇಣುಕಾಚಾರ್ಯ ತಮ್ಮ ನೋವು ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶವಿದೆ. ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗುವ ವಿಶ್ವಾಸವಿದೆ ಎಂದು ಉಡುಪಿಯಲ್ಲಿ BJP ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ ನೀಡಿದ್ದಾರೆ.
ಕೊವ್ಯಾಕ್ಸಿನ್ 2ನೇ ಬ್ಯಾಚ್ 45 ಲಕ್ಷ ಡೋಸ್ ಲಸಿಕೆ ಪೂರೈಕೆಗೆ ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗೆ ಕೇಂದ್ರ ಸರ್ಕಾರ ಆರ್ಡರ್ ನೀಡಿದೆ.
ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ದೆಹಲಿ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ.
ಬಾಗಲಕೋಟೆ ಕಾರ್ಯಕ್ರಮದಲ್ಲಿ ಕನ್ನಡ ನಿರ್ಲಕ್ಷ್ಯ ವಿಚಾರಕ್ಕೆ ಸಂಬಂಧಿಸಿ ಅಮಿತ್ ಶಾ ಮುಂದೆ ರಾಜ್ಯ ಬಿಜೆಪಿ ನಾಯಕರಿಗೆ ಮಾತನಾಡುವ ಧೈರ್ಯವಿಲ್ಲ. ಆ ಕಾರ್ಯಕ್ರಮದಲ್ಲಿ ಒಂದು ಶಿಷ್ಟಾಚಾರ ಇರಬಹುದು. ಆದರೆ ಕನ್ನಡ ಬಳಸಬಾರದು ಎಂದು ಎಲ್ಲಾದರೂ ಉಂಟಾ? ರಾಜ್ಯ ಬಿಜೆಪಿ ಸರ್ಕಾರ ಇಚ್ಛಾಶಕ್ತಿಯನ್ನ ತೋರಬೇಕು. ಕನ್ನಡ ನಿರ್ಲಕ್ಷಿಸಿರುವುದನ್ನು ಬಲವಾಗಿ ಖಂಡಿಸುತ್ತೇನೆ ಎಂದು ವಿಧಾನಸೌಧದಲ್ಲಿ ಶಾಸಕ ಬಂಡೆಪ್ಪ ಕಾಶಂಪುರ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ನ ಖಂಡಿಸಿ ದಾವಣಗೆರೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತಿದ್ದು, ಸಿಎಂ ಉದ್ಧವ್ ಠಾಕ್ರೆ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿ ವಿನಾಯಕನ ದರ್ಶನ ಪಡೆದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ದೇವಸ್ಥಾನಕ್ಕೆ ಆಗಮಿಸಿದ್ದು, ಪುತ್ರ ಸಂಸದ ಬಿವೈ ರಾಘವೇಂದ್ರ , ಶೋಭಾ ಕರಂದ್ಲಾಜೆ ಸಾಥ್ ನೀಡಿದರು.
ಅಮಿತ್ ಶಾ ಸುಳ್ಳಿನ ಮೂಟೆ ಉರುಳಿಸಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯರದ್ದು ಕಾಮಾಲೆ ಕಣ್ಣು. ಇನ್ನೂ ಭೂತಕಾಲದಲ್ಲೇ ಇದ್ದಾರೆ. ಸಿದ್ದರಾಮಯ್ಯ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ನಾಡಿನೆಲ್ಲೆಡೆ ತುಳಸಿ ಷಷ್ಟಿ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮರಥೋತ್ಸವಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿಯಿಂದ ಚಾಲನೆ ಸಿಕ್ಕಿದೆ.
ಕೋಲಾರ ಜಿಲ್ಲೆಯ ಗಡಿ ಭಾಗಗಳಲ್ಲಿ ಕಾಡಾನೆಗಳ ಉಪಟಳ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಪ್ರಾಣ ಕಳೆದುಕೊಂಡುವರಿಗೆ ಪರಿಹಾರ ಮತ್ತು ಕಾಡಾನೆಗಳಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕೋಲಾರದ ಉಪ ಅರಣ್ಯ ಸಂರಕ್ಷಾಧಿಕಾರಿಗಳ ಕಚೇರಿ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಎ1 ಶಿವಪ್ರಕಾಶ್ಗೆ ಜಾಮೀನು ಸಿಕ್ಕಿದೆ. ಉಳಿದವರೆಲ್ಲರನ್ನು ಬಂಧಿಸಲಾಗಿದೆ. ಆದಿತ್ಯ ಆಳ್ವಾನನ್ನು ಕೂಡ ಬಂಧಿಸಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಮಂತ್ರಿ ಮಾಡುವುದು ಮತ್ತು ಖಾತೆ ಹಂಚಿಕೆ ಮಾಡುವುದು ಸಿಎಂ ಪರಮಾಧಿಕಾರವಾಗಿದೆ. ಇದರ ಬಗ್ಗೆ ಸಿಎಂ ಅಂತಿಮ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ ಎಂದು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭದ್ರತಾ ಪಡೆಗಳಲ್ಲಿರುವವರಿಂದಲೇ ದಾಳಿಯಾಗುವ ಭೀತಿ ಎದುರಾಗಿದ್ದು, ಕಾರ್ಯಕ್ರಮದ ಭದ್ರತೆಗೆ 25 ಸಾವಿರ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ನನ್ನು ನಿಯೋಜನೆ ಮಾಡಲಾಗಿದೆ.
ಇಂದು ರಾತ್ರಿ ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರದ ಹಿನ್ನಲೆ ಸಮಾರಂಭದಲ್ಲಿ ಭದ್ರತಾ ಪಡೆಗಳಲ್ಲಿರುವವರಿಂದಲೇ ದಾಳಿ ಭೀತಿ ಎದುರಾಗಿದೆ.
ನಾಡಿನ ಜಲ, ನೆಲ ವಿಚಾರಗಳು ಬಂದರೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದು ಜೆಡಿಎಸ್ ಹಿರಿಯ ಮುಖಂಡ ಬಂಡೆಪ್ಪ ಕಾಶಂಪುರ್ ಹೇಳಿದರು.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಯುವರಾಜ್ ಸ್ವಾಮಿ ಕೋಟ್ಯಾಂತರ ರೂ. ಗಳನ್ನು ಹಲವಾರು ಜನರಿಗೆ ಮೋಸ ಮಾಡಿದ್ದಾನೆ. ನಿವೃತ್ತ ನ್ಯಾಯಮೂರ್ತಿಗೆ ಗೌರ್ನರ್ ಹುದ್ದೆ ಕೊಡಿಸುತ್ತೆ ಎಂದು ಮೋಸ ಮಾಡಿದ್ದಾನೆ. ಉನ್ನತ ಹುದ್ದೆಗಾಗಿ ಹಣ ಸಂದಾಯ ಅಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ನ್ಯಾಯಮೂರ್ತಿಗಳು ಹೇಳಿಕೆ ನೀಡಿದ್ದಾರೆ. ಅದರೆ ಹಣ ವ್ಯವಹಾರದ ಬಗ್ಗೆ ಭ್ರಷ್ಟಾಚಾರದ ಅಡಿಯಲ್ಲಿ ತನಿಖೆ ಮಾಡಬೇಕು ಎಂದು ವಕೀಲ ಅಮೃತೇಶ್ ಸಿಸಿಬಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವವನ್ನು ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ. ದೇವಸ್ಥಾನದ ಸಿಬ್ಬಂದಿ ಅಧಿಕಾರಿಗಳು ಮತ್ತು ಕೆಲ ಗಣ್ಯರಿಗೆ ಮಾತ್ರ ರಥೋತ್ಸವದಲ್ಲಿ ಭಾಗಿಯಾಗಲು ಅವಕಾಶವಿದೆ.
ನಾನು ಯಾವುದೇ ಸಿಡಿ ತೆಗೆದುಕೊಂಡು ದೆಹಲಿಗೆ ಬಂದಿಲ್ಲ. ಎಲ್ಲವೂ ಊಹಾಪೋಹ ಸುದ್ದಿ, ಸಿಡಿ ವಿಚಾರ ನನಗೆ ಗೊತ್ತಿಲ್ಲ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವುದಕ್ಕೆ ಸೂಕ್ತ ಬಸ್ ಸೌಲಭ್ಯವಿಲ್ಲದ ವಿಚಾರಕ್ಕೆ ಸಂಬಂಧಿಸಿ ಸಾರಿಗೆ ಇಲಾಖೆ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಕ್ರೀಡಾಂಗಣಕ್ಕೆ ಪೊಲೀಸ್ ಇಲಾಖೆಯಿಂದ ಬೇಲಿ ಹಾಕಿದ ಹಿನ್ನೆಲೆ ತೆರವಿಗೆ ಆಗ್ರಹಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಿ ವರ್ತಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಸಾರ್ವಜನಿಕರು ಭಾಗಿಯಾಗಿದ್ದಾರೆ.
ಸಂಘಟನೆ ನಾಯಕರು ನಿನ್ನೆ ಕರೆ ಮಾಡಿ ದೆಹಲಿಗೆ ಬರುವಂತೆ ಹೇಳಿದ್ದರು. ಸಂಘಟನೆ ನಾಯಕರ ಭೇಟಿಯಾಗಿ ಅರ್ಧ ಗಂಟೆ ಚರ್ಚಿಸಿದ್ದೇನೆ. ಯಾರ ಜೊತೆ ಚರ್ಚೆ ಮಾಡಿದ್ದೇನೆ ಎಂಬುದನ್ನು ನಾನು ಹೇಳಲ್ಲ. ನನಗೆ ಯಾರ ಮೇಲೂ ಯಾವುದೇ ರೀತಿ ಅಸಮಾಧಾನವಿಲ್ಲ ಎಂದು ದೆಹಲಿಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಸಿಎಂ ಬದಲಾವಣೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಿದ್ದರಾಮಯ್ಯ ಯಾವಾಗ ಜ್ಯೋತಿಷ್ಯ ಹೇಳ್ತಾರೋ ಗೊತ್ತಾಗಲ್ಲ. ಬಿಡುವಿನ ವೇಳೆ ಜ್ಯೋತಿಷ್ಯ ಕಲಿಯುತ್ತಿರಬೇಕು. ಪದೇ ಪದೇ ಈ ರೀತಿಯಾಗಿ ಹೇಳುವುದನ್ನು ಬಿಡಬೇಕು ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.
ಮಕ್ಕಳಿಂದ ಭಿಕ್ಷಾಟನೆ, ಬೀದಿಗಳಲ್ಲಿ ವ್ಯಾಪಾರ ವಿಚಾರಕ್ಕೆ ಸಂಬಂಧಿಸಿ ಇದನ್ನು ತಡೆಯಲು ಬೆಂಗಳೂರಿನ ಟೌನ್ಹಾಲ್ ಮುಂದೆ ನಗರ ಕಾರ್ಯಪಡೆ ಸಮಿತಿ ಸದಸ್ಯರ ಕಾರ್ಯಾಗಾರ ನಡೆಯಲಿದೆ. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ , ಪೊಲೀಸ್ ಅಧಿಕಾರಿಗಳು ಮತ್ತು ಮಕ್ಕಳ ಹಕ್ಕುಗಳ ಆಯೋಗದ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಜೆಡಿಎಸ್ ರಾಜ್ಯ ವೀಕ್ಷಕರ ಪಟ್ಟಿಯಲ್ಲಿ ಹೆಸರಿಲ್ಲದ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ವೀಕ್ಷಕರ ಪಟ್ಟಿಯ ಬಗ್ಗೆ ಹೇಳುವುದಕ್ಕೆ ಏನಿದೆ? ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಏನೂ ನಡೆಯಲಿಲ್ಲ. ಈಗ ಕೇವಲ ಶಾಸಕ, ನನ್ನ ಮಾತನ್ನು ಯಾರು ಕೇಳುತ್ತಾರೆ. ಎಲ್ಲ ಮೈಸೂರು ಹೈಕಮಾಂಡ್ ಹೇಳಿದಂತೆ ಮಾಡಿದ್ದಾರೆ.ನನಗೂ 75 ವರ್ಷ ವಯಸ್ಸಾಯ್ತು, ಈಗ ರಾಜಕಾರಣ ಕಷ್ಟ. ಇನ್ನೆರಡು ವರ್ಷ ನಾನು ಶಾಸಕನಾಗಿ ಇರುತ್ತೇನೆ. ಆ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸ್ತೇನೆ ಎಂದು ಮೈಸೂರಿನಲ್ಲಿ JDS ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಲಿರುವ ಉಡುಪಿ ಜಿಲ್ಲೆಯ ಕುಂಬಾಶಿ ಮಹಾಗಣಪತಿ ದೇವಸ್ಥಾನದಲ್ಲಿ 1008 ಗಣಯಾಗ ಆರಂಭವಾಗಿದೆ.
ಬೆಂಗಳೂರಿನ ಸ್ಲಮ್ ಮಕ್ಕಳು ಶಾಲೆಗಳು ಹೋಗದ ಕಾರಣ ಬಿಬಿಎಂಪಿ ಹೊಸ ನಿರ್ಧಾರ ಕೈಗೊಂಡಿದೆ. ಸ್ಲಮ್ಗಳಿಗೆ ಬಿಎಂಟಿಸಿ ಬಸ್ಗಳನ್ನು ತೆಗೆದುಕೊಂಡು ಹೋಗಿ ಬಿಬಿಎಂಪಿ ಶಿಕ್ಷಕರಿಂದ ಪಾಠ ಮಾಡಲು ನಿರ್ಧರಿಸಲಾಗಿದೆ. ಕಾರ್ಯಾಗಾರದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೋಡದಿಣ್ಣೆಯ ಸುಧೀರ್ ಗೌಡ ಎಂಬುವವರ ಕಾಫಿ ತೋಟದಲ್ಲಿದ್ದ ಕಾಳಿಂಗ ಸರ್ಪವನ್ನು ಹಿಡಿದು ಚಾರ್ಮಾಡಿ ಘಾಟ್ ಗೆ ಬಿಟ್ಟು ರಕ್ಷಿಸಿದ್ದಾರೆ.
ಸೂರತ್ನಲ್ಲಿ ಲಾರಿ ಹರಿದು 15 ಕಾರ್ಮಿಕರ ಸಾವು ಪ್ರಕರಣಕ್ಕೆ ಸಂಬಂಧಿಸಿ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಘೋಷಿಸಿದ್ದು, ಗಾಯಾಳುಗಳಿಗೆ 50,000 ರೂ. ನೀಡಲಾಗುತ್ತದೆ ಎಂದು ಪಿಎಂಒ ತಿಳಿಸಿದ್ದಾರೆ.
ಸುಭಾಷ್ ಚಂದ್ರ ಬೋಸ್ ಜಯಂತಿ ಹಿನ್ನೆಲೆ ಪ್ರತಿವರ್ಷ ಜ.23 ರಂದು ‘ಪರಾಕ್ರಮ ದಿವಸ’ ಆಚರಣೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಘೋಷಿಸಿದೆ.
ಬೆಂಗಳೂರಿನಲ್ಲಿ ಈವರೆಗೆ 12,555 ಜನರಿಗೆ ಲಸಿಕೆ ನೀಡಲಾಗಿದೆ. ಪ್ರತಿನಿತ್ಯ 20 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಇತ್ತು. ಆದರೆ ಕೇವಲ 7 ರಿಂದ 8 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ.
ಫೆಬ್ರವರಿ 8 ಮತ್ತು 9 ರಂದು ವಾಲ್ಮೀಕಿ ಜಾತ್ರೆ ಹಿನ್ನೆಲೆ ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ ಗಳು ಭಕ್ತರ ಸಭೆ ನಡೆಸಿದರು.
ಹೈಕಮಾಂಡ್ ಭೇಟಿಯಾಗಿ ದೂರು ನೀಡಲಿರುವ ರೇಣುಕಾಚಾರ್ಯ ಇಂದು ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. ರೇಣುಕಾಚಾರ್ಯ ಜತೆ ಅರವಿಂದ್ ಬೆಲ್ಲದ್ ಸಹ ತೆರಳಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದ ದೇಗುಲಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ದೇವರ ದರ್ಶನ ಪಡೆದರು.
ರಾಜ್ಯಾಧ್ಯಕ್ಷರ ಜೊತೆಗೆ ನಾಲ್ಕು ಹೊಸ ಕಾರ್ಯಧ್ಯಕ್ಷರ ನೇಮಕ ಮಾಡಲು ಹೆಚ್.ಡಿ.ಕುಮಾರಸ್ವಾಮಿ ತೀರ್ಮಾನಿಸಿದ್ದು,ಸಂಸದ ಪ್ರಜ್ವಲ್ರನ್ನು ಕಾರ್ಯಾಧ್ಯಕ್ಷ ಮಾಡುವ ಸಾಧ್ಯತೆಯಿದೆ.
ಸಚಿವ ಸ್ಥಾನ ಸಿಗದ BJP ಶಾಸಕರು ಬೆಂಗಳೂರಿನಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ನಿವಾಸದಲ್ಲಿಇಂದು ಸಭೆ ಸೇರುವ ಸಾಧ್ಯತೆಯಿದ್ದು, ಎಲ್ಲ ಅಸಮಾಧಾನಿತರ ಜೊತೆ ಚರ್ಚಿಸಿ ನಂತರ ದೆಹಲಿಗೆ ಹೋಗಲು ರೆಬೆಲ್ ಶಾಸಕರ ನಿರ್ಧಾರಿಸಲಿದ್ದಾರೆ.
ಚಿತ್ರನಟ ಕಮಲ್ ಹಾಸನ್ ಅವರ ಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ನಾಲ್ಕೈದು ದಿನಗಳಲ್ಲಿ ಆಸ್ಪತ್ರೆಯಿಂದ ಕಮಲ್ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೋಹತ್ಯೆ ನಿಷೇಧ ಮಾಡುವುದು ಗಾಂಧೀಜಿ ಕನಸಾಗಿತ್ತು. ಇದೀಗ ಗೋಹತ್ಯೆ ನಿಷೇಧ ಕಾನೂನು ಜಾರಿ ಸಮಾಧಾನ ತಂದಿದೆ. ಬೇರೆ ಬೇರೆ ಕಾರಣಗಳಿಂದ ಮುಂದೂಡುತ್ತಾ ಬಂದರು ಕೂಡಾ ಈಗ ನಾವು ಕಾಯ್ದೆಯನ್ನು ತಕ್ಷಣಕ್ಕೆ ಜಾರಿಗೆ ತಂದಿದ್ದೇವೆ ಎಂದು ಉಡುಪಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ, ಯಾವಾಗಲೂ ನಾವು ರಾಜಕೀಯ ಗೊಂದಲದಲ್ಲಿರುತ್ತೇವೆ. ಆದರೆ ಇದೀಗ ರಾಜಕೀಯ ಮರೆತು ಧಾರ್ಮಿಕ ಪ್ರವಾಸಕ್ಕಾಗಿ ಬಂದಿದ್ದೇನೆ. ಇಲ್ಲಿನ ಮೀನುಗಾರರ ಸಮಸ್ಯೆ ಏನಿದೆ ಎಂದು ತಿಳಿದುಕೊಳ್ಳುತ್ತೇನೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾವಿನಕಟ್ಟೆ ಗುಡ್ಡಕ್ಕೆ ಬಿದ್ದ ಕಾಡ್ಗಿಚ್ಚಿನಿಂದ ಸಾಸ್ವೆಹಳ್ಳಿಯ 22 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮವಾಗಿದೆ.
ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ನಿನ್ನೆ ಸಂಜೆ ಭೇಟಿ ನೀಡಿದ್ದ ಬಳ್ಳಾರಿ ಜಿಲ್ಲಾಧಿಕಾರಿ ಆಸ್ಪತ್ರೆ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಮಂಜು ಕವಿದು ಹಳಿ ಕಾಣದ ಹಿನ್ನೆಲೆ ಉತ್ತರ ರೈಲ್ವೆಯ 16 ರೈಲುಗಳ ಸಂಚಾರವನ್ನು ವ್ಯತ್ಯಯಗೊಳಿಸಲಾಗಿದೆ.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿ ಅಮಾಯಕರ ಬಿಡುಗಡೆಗೆ ಆಗ್ರಹಿಸಿ ಮತ್ತು ಲವ್ ಜಿಹಾದ್, ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಲು ಒತ್ತಾಯಿಸಿ ಜನವರಿ 22 ರಂದು ಬೆಂಗಳೂರು ಮುಸ್ಲಿಂ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಲಾಗಿದೆ.
ತಮಿಳುನಾಡು ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡು ಸಿಎಂ ಪಳನಿಸ್ವಾಮಿ ಬೆಳಿಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುತ್ತಾರೆ.
ಗದಗ ನಗರದ ಹಾತಲಗೇರಿ ರಸ್ತೆಯ SBI ಎಟಿಎಂನಲ್ಲಿ ದರೋಡೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಧ್ಯಾಹ್ನ 3 ಗಂಟೆಗೆ ಗನ್ನಾವರಂ ವಿಮಾನ ನಿಲ್ದಾಣದಿಂದ ದೆಹಲಿಗೆ ಪಯಾಣಿಸಲಿರುವ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಮಾಡಿ ಹಲವು ಮಹತ್ವದ ವಿಷಯ ಕುರಿತು ಚರ್ಚೆ ಮಾಡುವ ಸಾಧ್ಯತೆಯಿದೆ.
Published On - 7:36 pm, Tue, 19 January 21