“ಮೈ ಇತ್ನಾ ಲೆಸೂನ್, ಪ್ಯಾಜ್ ನಹೀ ಖಾತಿ ಹೂ ಜೀ. ಮೈನ್ ಐಸೆ ಪರಿವಾರ್ ಸೆ ಆತಿ ಹೂ ಜಹಾ ಆನಿಯನ್ ಪ್ಯಾಜ್ ಸೆ ಮತ್ಲಬ್ ನಹೀ ರಖ್ತೆ (ನಾನು ಹೆಚ್ಚು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ. ನಾನು ಈರುಳ್ಳಿ ತಿನ್ನದ ಕುಟುಂಬದಿಂದ ಬಂದಿದ್ದೇನೆ)-ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 2019 ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಈರುಳ್ಳಿ (onion) ಬೆಲೆ ಏರಿಕೆಯ ಕುರಿತು ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರಿಗೆ ಪ್ರತಿಕ್ರಿಯಿಸುವಾಗ ಹೇಳಿದ ಮಾತು ಇದು. ಇದಾಗಿ ಎರಡು ವರ್ಷಗಳ ನಂತರ ನಿರ್ಮಲಾ ಸೀತಾರಾಮನ್ ಹೇಳಿದ್ದು ಈಗ ಮತ್ತೆ ಸುದ್ದಿಯಾಗುತ್ತಿದೆ. ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ತರಕಾರಿ ಶಾಪಿಂಗ್ ಮಾಡಲು ಹೋದಾಗ, ಈರುಳ್ಳಿ ಖರೀದಿಸಿದ್ದರು ಎಂಬುದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿರುವ ಸಂಗತಿ. ಟ್ವಿಟರ್‌ನಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಸೇವಾದಳವು ವಿತ್ತ ಸಚಿವೆ ಬೀದಿ ವ್ಯಾಪಾರಿಯಿಂದ ಈರುಳ್ಳಿ ಖರೀದಿಸುತ್ತಿರುವ ಫೋಟೋವನ್ನು ಶೇರ್ ಮಾಡಿದೆ. ಅದೂ ಎರಡೆರಡು ಬಾರಿ. ನಿರ್ಮಲಾ ಸೀತಾರಾಮನ್ ಅವರು ಈರುಳ್ಳಿ ತಿನ್ನುವುದಿಲ್ಲ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಅದು ಸುಳ್ಳು ಎಂದು ಫೋಟೊಗೆ ಶೀರ್ಷಿಕೆ ನೀಡಲಾಗಿದೆ. ಆದಾಗ್ಯೂ, ಇದು ಎಡಿಟ್ ಮಾಡಿದ ಫೋಟೊ, ನಿರ್ಮಲಾ ಸೀತಾರಾಮನ್ ಅವರು ಚೆನ್ನೈನಲ್ಲಿ ಈರುಳ್ಳಿ ಖರೀದಿಸಿಲ್ಲ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದೆ.
ये प्याज क्या पड़ोसियों के लिए खरीदी जा रही है??? pic.twitter.com/OQtuxMz2Aw
— Maharashtra Congress Sevadal (@SevadalMH) October 10, 2022
ಫ್ಯಾಕ್ಟ್ ಚೆಕ್
ಹಣಕಾಸು ಸಚಿವರ ಕಚೇರಿಯ ಟ್ವಿಟರ್ ಖಾತೆಯಲ್ಲಿ ಅವರು ಮಾಡಿದ ಶಾಪಿಂಗ್‌ನ ಹಲವಾರು ಫೋಟೋಗಳು ಮತ್ತು ವಿಡಿಯೊ ಇದೆ. ಇವುಗಳಲ್ಲಿ ಎಲ್ಲಿಯೂ ಅವರು ಈರುಳ್ಳಿ ಖರೀದಿಸುವುದು ಕಾಣುತ್ತಿಲ್ಲ.
ವಿಡಿಯೊದಲ್ಲಿ ನಿರ್ಮಲಾ ಸೀತಾರಾಮನ್ ಅವಳು ಕಾಡು ಗೆಣಸುಗಳನ್ನು ಖರೀದಿಸುತ್ತಿರುವುದು ಕಾಣುತ್ತದೆ. ಅದೇ ಪ್ರೇಮ್ ನಲ್ಲಿರುವ ಚಿತ್ರದಲ್ಲಿ ಕಾಡು ಗೆಣಸು ಬದಲು ಈರುಳ್ಳಿ ಚಿತ್ರವಿಟ್ಟು ಎಡಿಟ್ ಮಾಡಲಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
Some glimpses from Smt @nsitharaman‘s visit to Mylapore market in Chennai. https://t.co/GQiPiC5ui5 pic.twitter.com/fjuNVhfY8e
— NSitharamanOffice (@nsitharamanoffc) October 8, 2022
ಆನಂದ ಕರುಣಾ ವಿದ್ಯಾಲಯವನ್ನು ಉದ್ಘಾಟಿಸಲು ಚೆನ್ನೈಗೆ ಒಂದು ದಿನದ ಪ್ರವಾಸದಲ್ಲಿದ್ದ ನಿರ್ಮಲಾ ಸೀತಾರಾಮನ್ ಅವರು ಮೈಲಾಪುರ ಪ್ರದೇಶದ ದಕ್ಷಿಣ ಮಾದ ಸ್ಟ್ರೀಟ್ ಗೆ ಭೇಟಿ ನೀಡಿದ್ದರು ಎಂದು ದಿ ಹಿಂದೂ ವರದಿ ಮಾಡಿದೆ. ಅಲ್ಲಿ ಅವರು ಸುಂಡಕ್ಕೈ (ಟರ್ಕಿ ಬೆರ್ರಿ), ಪಿಡಿ ಕರನೈ (ಕಾಡು ಗೆಣಸು), ಐದು ಗೊಂಚಲು ಮುಲೈ ಕೀರೈ (ಒಂದು ರೀತಿಯ ಸೊಪ್ಪು), ಮತ್ತು ಮನಾಥಕ್ಕಲಿ ಕೀರೈ (ಸೊಪ್ಪು) ಖರೀದಿಸಿದ್ದಾರೆ.
ಕೇಂದ್ರ ಸಚಿವರ ಜೊತೆಗಿದ್ದ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಅವರು, ಸೀತಾರಾಮನ್ ಅಮರಂತ್ ತಳಿಯ “ತಂಡು ಕೀರೈ” ಖರೀದಿಸಲು ಅಲ್ಲಿ ವಾಹನ ನಿಲ್ಲಿಸಿದ್ದರು. ಆದರೆ ಅದು ಇರಲಿಲ್ಲ. ಆಮೇಲೆ ಅವರು ಇತರ ತರಕಾರಿಗಳನ್ನು ಖರೀದಿಸಿದರು. ಸೀತಾರಾಮನ್ ಅವರು ಚಿಕ್ಕವರಿದ್ದಾಗ ಮೈಲಾಪುರದಲ್ಲಿ ಅನೇಕ ಬೇಸಿಗೆಗಳನ್ನು ಕಳೆದಿದ್ದರು ಮತ್ತು ಆ ಸ್ಥಳವನ್ನು ಚೆನ್ನಾಗಿ ತಿಳಿದಿದ್ದರು ಎಂದು ವನತಿ ಹೇಳಿರುವುದಾಗಿ ವರದಿಯಲ್ಲಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಮಾರಾಟಗಾರರಲ್ಲಿ ಒಬ್ಬರೊಂದಿಗೆ ಮಾತನಾಡಿದ್ದು ವಿತ್ತ ಸಚಿವರು 200 ರೂಪಾಯಿಯ ತರಕಾರಿ ಖರೀದಿಸಿದ್ದಾರೆ. ವರದಿಯಲ್ಲಿ ಸೀತಾರಾಮನ್ ಅವರು ಖರೀದಿಸಿದ ತರಕಾರಿಗಳ ಪಟ್ಟಿಯಲ್ಲಿ ಈರುಳ್ಳಿ ಇಲ್ಲ. ಹಾಗಾಗಿ ವೈರಲ್ ಆಗಿರುವ ಫೋಟೊ ಎಡಿಟ್ ಮಾಡಿದ್ದು ಎಂಬುದು ಇಲ್ಲಿ ಸ್ಪಷ್ಟವಾಗಿದೆ.
Published On - 4:53 pm, Thu, 13 October 22