Fact Check ಕಾಸರಗೋಡಿನ ಅನಂತಪುರ ದೇವಸ್ಥಾನದ ದೇವರ ಮೊಸಳೆ ಬಬಿಯಾ ಸಸ್ಯಾಹಾರಿ ಅಲ್ಲ

| Updated By: ರಶ್ಮಿ ಕಲ್ಲಕಟ್ಟ

Updated on: Oct 10, 2022 | 10:04 PM

ಬಬಿಯಾ ಸಾವಿನ ಸುದ್ದಿ ಜತೆಗೆ ಮೊಸಳೆಯೊಂದರ ಮುಂದೆ ತಲೆಬಾಗಿ ಹಣೆಯೊತ್ತಿ ನಿಂತಿರುವ ವ್ಯಕ್ತಿಯೊಬ್ಬರ ಫೋಟೊವನ್ನು ಅನೇಕ ಸುದ್ದಿಮಾಧ್ಯಮಗಳು ಪ್ರಕಟಿಸಿವೆ. ಆದರೆ ಇದು ಬಬಿಯಾ ಮೊಸಳೆಯ ಚಿತ್ರವಲ್ಲ

Fact Check ಕಾಸರಗೋಡಿನ ಅನಂತಪುರ ದೇವಸ್ಥಾನದ ದೇವರ ಮೊಸಳೆ ಬಬಿಯಾ ಸಸ್ಯಾಹಾರಿ ಅಲ್ಲ
ಬಬಿಯಾ ಮೊಸಳೆ
Follow us on

ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ (Sri Anantha Padmanabha Swamy Temple) ಕಲ್ಯಾಣಿಯಲ್ಲಿದ್ದ ಬಬಿಯಾ (Babiya) ಮೊಸಳೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದೆ. ಸುಮಾರು 70 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ಬಬಿಯಾ ಮಹಾಪೂಜೆಯ ವೇಳೆ ದಡಕ್ಕೆ ಬರುತ್ತಿತ್ತು. ಅಲ್ಲಿ ಅರ್ಚಕರು ಕೊಟ್ಟ ನೈವೇದ್ಯವನ್ನು ಸೇವಿಸುತ್ತಿತ್ತು. ದೇವರ ಮೊಸಳೆ ಎಂದೇ ಕರೆಯಲ್ಪಡುತ್ತಿದ್ದ ಬಬಿಯಾ ಸಸ್ಯಾಹಾರಿ ಎಂದೇ ಖ್ಯಾತಿ ಪಡೆದಿದೆ. ಶಾಂತ ಸ್ವಭಾವದ ಬಬಿಯಾ ಶುದ್ಧ ಸಸ್ಯಾಹಾರಿ ಅಲ್ಲ ಎಂದು ಕಿಶನ್ ಕುಮಾರ್ ಹೆಗ್ಡೆ ಎಂಬವರು ಫೇಸ್ಬುಕ್ ನಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಬಬಿಯಾನಿಗೆ ಕೋಳಿ ಸಮರ್ಪಿಸುತ್ತಿರುವ ಚಿತ್ರ ಎಂದು ಅವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹಳೇ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ.

1997ರ ಡಾಕ್ಯುಮೆಂಟರಿಯಲ್ಲಿದೆ ಬಬಿಯಾಗೆ ಕೋಳಿ ಸಮರ್ಪಿಸುವ ವಿಡಿಯೊ

ಬಬಿಯಾ ಬಗ್ಗೆ ಹರಿದಾಡುತ್ತಿರುವ ಕಥೆಗಳಲ್ಲಿ ಅದು ಸಸ್ಯಾಹಾರಿ ಎಂಬುದು ಒಂದು ಕತೆ. ಈ ಬಗ್ಗೆ ಹಳೇ ವಿಡಿಯೊಗಳ ಜಾಡು ಹಿಡಿದು ಹೋದಾಗ ಸಿಕ್ಕಿದ್ದು ಇ. ಉಣ್ಣಿಕೃಷ್ಣನ್ ಎಂಬ ಕಾಸರಗೋಡಿನ ಅಧ್ಯಾಪಕರೊಬ್ಬರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ಡ್ಯಾಕ್ಯುಮೆಂಟರಿ ವಿಡಿಯೊ. ಈ ಮೊಸಳೆ ಸಸ್ಯಾಹಾರಿ ಆಗುವುದಕ್ಕಿಂತ ಮುನ್ನ ಎಂಬ ಶೀರ್ಷಿಕೆಯೊಂದಿಗೆ ಜುಲೈ ತಿಂಗಳಲ್ಲಿ ಅವರೇ ಶೇರ್ ಮಾಡಿದ್ದ ವಿಡಿಯೊವನ್ನು ಅವರು ಇಂದು ಪೋಸ್ಟ್ ಮಾಡಿದ್ದಾರೆ.

ವಿಡಿಯೊದಲ್ಲೇನಿದೆ?

25 ವರ್ಷಗಳ ಹಿಂದೆ 97 ಮಾಧ್ಯಮ ಕಲಿಕೆಯ ಭಾಗವಾಗಿ ಕಾವು (ಬನಗಳು) ಬಗ್ಗೆ ಮಾಡಿದ ಡಾಕ್ಯುಮೆಂಟರಿ ಈಗ ಸಿಕ್ಕಿತು. ಖ್ಯಾತ ಸಿನಿಮಾಸಂಗೀತ ನಿರ್ದೇಶಕ ಬಿಜುರಾಂ ಅಂದು ಹಿನ್ನಲೆ ಸಗೀತ ನೀಡಿದ್ದ ಡಾಕ್ಯುಮೆಂಟರಿಗಳಲ್ಲಿ ಇದೂ ಒಂದು. ಸ್ನೇಹಿತ ಮತ್ತು ಶಿಕ್ಷಕರೂ ಆಗಿದ್ದ ಪಿಪಿ ಪ್ರಕಾಶನ್ ಎಂಫಿಲ್ ಕಲಿಕೆಯ ಸಮಯದಲ್ಲಿ ಈ ಡಾಕ್ಯುಮೆಂಟರಿಗಾಗಿ ಹಾಡಿದ್ದಾರೆ. ಮಾಡಾಯಿಯ ಕೃಷ್ಣ ಕೇಸರಂ ಇದ್ದ ಕಲ್ಯಾಣಿ ಈಗ ಇಲ್ಲ. ಮೇಲೋತ್ತ್ ಕಾವುನಲ್ಲಿದ್ದ ಆಮೆಗಳೂ ಈಗಿಲ್ಲ. ರಾಮಂತಳಿಯಲ್ಲಿ ಕಮಲ ಪಕ್ಷಿ ಗೂಡುಕಟ್ಟಿದ್ದ ಮರವನ್ನು ಕಡಿಯಲಾಗಿದೆ. ಮಾಣಿಕಮ್ಮ ಸ್ಟ್ರಾಕ್ ಬಂದು ಹಾಸಿಗೆ ಹಿಡಿದಿದ್ದಾರೆ. ಮಗಳು ಈಗ ಮಂಗಗಳಿಗೆ ಆಹಾರ ನೀಡುತ್ತಿರುವುದು. ಮುದುಕ್ಕಾಟ್ಟುಕಾವುನಲ್ಲಿದ್ದ ಮಂಞಳೇಟ್ಟಕಳ್ ಹೆಸರಿಗೆ ಮಾತ್ರ ಇವೆ. ದೇವಾಲಯ ನವೀಕರಣದ ನಂತರ ಅನಂತಪುರಂ ದೇವಾಲಯದಲ್ಲಿ ಕೋಳಿಯನ್ನು ತಿನ್ನುತ್ತಿದ್ದ ಮೊಸಳೆಯನ್ನು ಶುದ್ಧ ಸಸ್ಯಾಹಾರಿಯನ್ನಾಗಿ ಬಿಂಬಿಸಲಾಗಿದೆ ಎಂದು ಉಣ್ಣಿಕೃಷ್ಣನ್ ಬರೆದಿದ್ದು ಜತೆಗೆ ವಿಡಿಯೊ ಶೇರ್ ಮಾಡಿದ್ದಾರೆ. ಈ ವಿಡಿಯೊದ 10ನೇ ನಿಮಿಷದಲ್ಲಿ ಅನಂತಪುರದಲ್ಲಿರುವ ಮೊಸಳೆಯ ಬಗ್ಗೆ ಹೇಳಲಾಗುತ್ತದೆ.ಬಬಿಯಾಗೆ ಕೋಳಿಯವನ್ನು ಅರ್ಪಿಸುತ್ತಿರುವುದು, ಕೋಳಿಯನ್ನು ಬಬಿಯಾ ತಿನ್ನುತ್ತಿರುವುದು ವಿಡಿಯೊದಲ್ಲಿದೆ.

ವೈರಲ್ ಟ್ವೀಟ್

ಬಬಿಯಾ ಸಾವಿನ ಬೆನ್ನಲ್ಲೇ ಬಬಿಯಾ ಸಸ್ಯಾಹಾರಿ ಅಲ್ಲ ಎಂದು ತೋರಿಸಲು ಇದೇ ಡಾಕ್ಯುಮೆಂಟರಿಯ ತುಣಕನ್ನು ಫೆಬಿನ್ ಥಾಮಸ್ ಎಂಬವರು ಟ್ವೀಟ್ ಮಾಡಿದ್ದಾರೆ.

ಮೊಸಳೆಯ ಮುಂದೆ ತಲೆಬಾಗಿ ನಿಂತಿರುವ ವ್ಯಕ್ತಿ; ಈ ಫೋಟೊದಲ್ಲಿರುವುದು ಬಬಿಯಾ ಅಲ್ಲ

ಬಬಿಯಾ ಸಾವಿನ ಸುದ್ದಿ ಜತೆಗೆ ಮೊಸಳೆಯೊಂದರ ಮುಂದೆ ತಲೆಬಾಗಿ ಹಣೆಯೊತ್ತಿ ನಿಂತಿರುವ ವ್ಯಕ್ತಿಯೊಬ್ಬರ ಫೋಟೊವನ್ನು ಅನೇಕ ಸುದ್ದಿಮಾಧ್ಯಮಗಳು ಪ್ರಕಟಿಸಿವೆ. ಆದರೆ ಇದು ಬಬಿಯಾ ಮೊಸಳೆಯ ಚಿತ್ರವಲ್ಲ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ವಿಡಿಯೊವೊಂದನ್ನು ಅವರು ಟ್ವೀಟ್ ಮಾಡಿದ್ದು ವ್ಯಕ್ತಿಯೊಬ್ಬ ಮೊಸಳೆಗೆ ನಮಸ್ಕರಿಸುತ್ತಿರುವ ಚಿತ್ರ ಅನಂತಪುರ ದೇವಸ್ಥಾನದ ಕಲ್ಯಾಣಿಯಲ್ಲಿದ್ದ ಮೊಸಳೆ ಮರಿಯದ್ದಲ್ಲ. ಇದು ಕೋಸ್ಟೊ ರಿಕನ್ ಮೊಸಳೆ ‘ಪೊಚೊ’ ತನ್ನ ಮಾಸ್ಟರ್ ‘ಗಿಲ್ಬರ್ಟೊ ಶೆಡ್ಡೆನ್’ ಜೊತೆ ಇರುವುದು ಎಂದಿದ್ದಾರೆ .

Published On - 9:53 pm, Mon, 10 October 22