FactCheck: ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಯೇ ಶಾಹೀನ್‌ ಬಾಗ್ ದಾದಿ? ವೈರಲ್ ಫೋಟೊ ಯಾರದ್ದು?

| Updated By: ರಶ್ಮಿ ಕಲ್ಲಕಟ್ಟ

Updated on: Dec 10, 2020 | 7:32 PM

ಗೌರವ್ ಪ್ರಧಾನ್ ಎಂಬ ಟ್ವೀಟಿಗರು ಮೊದಲ ಫೋಟೊದಲ್ಲಿ ದಾದಿ ಶಾಹೀನ್ ‌ಬಾಗ್‌ನಲ್ಲಿರುವುದು. 2ನೇ ಫೋಟೊದಲ್ಲಿ ಅದೇ ದಾದಿ ರೈತರ ಪ್ರತಿಭಟನೆಯಲ್ಲಿದ್ದಾರಂತೆ ನೋಡಿ.

FactCheck: ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಯೇ ಶಾಹೀನ್‌ ಬಾಗ್ ದಾದಿ? ವೈರಲ್ ಫೋಟೊ ಯಾರದ್ದು?
ವೈರಲ್ ಚಿತ್ರ
Follow us on

ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರಪ್ರದೇಶಗಳ ಸಾವಿರಾರು ರೈತರು ಈ ಪ್ರತಿಭಟನೆಯ ಭಾಗವಾಗಿದ್ದಾರೆ. ಪ್ರತಿಭಟನೆಯ ಹಲವಾರು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಷೇರ್ ಆಗುತ್ತಿದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಅಜ್ಜಿಯೊಬ್ಬರ ಫೋಟೊ ಇತ್ತೀಚೆಗೆ ವೈರಲ್ ಆಗಿತ್ತು.

ಈ ಫೋಟೊದಲ್ಲಿರುವ ಅಜ್ಜಿ ಶಾಹೀನ್ ‌ಬಾಗ್ ದಾದಿ ಎಂದು ಕರೆಯಲ್ಪಡುವ 82ರ ಹರೆಯದ ಬಿಲ್ಕಿಸ್ ಬಾನು. ಈಕೆ ರೈತರ ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದಾರೆ ಎಂದು ಹೇಳುವ ಎರಡು ಫೋಟೊಗಳು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹರಿದಾಡಿವೆ. ಇವರಿಗೆ ದಿನಕ್ಕೆ ಇಂತಿಷ್ಟು ಹಣ ಕೊಟ್ಟರೆ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಾರೆ ಎಂದು ಕೆಲವು ನೆಟ್ಟಿಗರು ಆರೋಪಿಸಿದ್ದು, ಶಾಹೀನ್‌ ಬಾಗ್ ಮತ್ತು ರೈತರ ಪ್ರತಿಭಟನೆಯ ಬದ್ಧತೆ ಪ್ರಶ್ನಿಸಿದ್ದರು.

ಗೌರವ್ ಪ್ರಧಾನ್ ಎಂಬ ಟ್ವೀಟಿಗರು ಮೊದಲ ಫೋಟೊದಲ್ಲಿ ದಾದಿ ಶಾಹೀನ್ ‌ಬಾಗ್‌ನಲ್ಲಿರುವುದು. 2ನೇ ಫೋಟೊದಲ್ಲಿ ಅದೇ ದಾದಿ ರೈತರ ಪ್ರತಿಭಟನೆಯಲ್ಲಿದ್ದಾರೆ ನೋಡಿ. ದಿನಗೂಲಿ ಕೊಟ್ಟರೆ ಈ ದಾದಿ ಪ್ರತಿಭಟನೆಗೆ ಬರುತ್ತಾರೆ. ಹೆಚ್ಚುವರಿಯಾಗಿ ಆಹಾರ, ಬಟ್ಟೆ, ಪ್ರಶಸ್ತಿ ಮತ್ತು ಎಕ್ಸ್‌ಟ್ರಾ ಪಾಕೆಟ್ ಮನಿ ಬೇಕು. ಅದಕ್ಕಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅಥವಾ ನವದೆಹಲಿಯ ಅಕ್ಬರ್ ರೋಡ್‌ನಲ್ಲಿರುವ ಕಾಂಗ್ರೆಸ್ ಕಚೇರಿಯನ್ನು ಭೇಟಿ ಮಾಡಿ ಎಂದು ಟ್ವೀಟಿಸಿದ್ದರು, ಈ ಟ್ವೀಟ್ 1,300 ಬಾರಿ ರೀಟ್ವೀಟ್ ಆಗಿದೆ.

ಬಾಲಿವುಡ್ ನಟಿ ಕಂಗನಾ ರನೌತ್ ಕೂಡಾ ಇದೇ ಫೋಟೊ ಟ್ವೀಟ್ ಮಾಡಿ ಭಾರತದ ಪ್ರಭಾವಿ ಮಹಿಳೆ ಎಂದು ಪರಿಗಣಿಸಲ್ಪಟ್ಟ ಅದೇ ದಾದಿ. ₹ 100  ಕೊಟ್ಟರೆ ಇವರು ಬರುತ್ತಾರೆ. ಪಾಕಿಸ್ತಾನಿ ಪತ್ರಕರ್ತೆ ಭಾರತಕ್ಕಿರುವ ಅಂತರರಾಷ್ಟ್ರೀಯ ಪಿಆರ್ (ಸಾರ್ವಜನಿಕ ಸಂಪರ್ಕ ಅಧಿಕಾರಿ) ಅನ್ನು ಹೈಜಾಕ್ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬಗ್ಗೆ ಮಾತನಾಡಲು ನಮ್ಮದೇ ಜನ ಬೇಕಾಗಿದ್ದಾರೆ ಎಂದು ಟ್ವೀಟಿಸಿದ್ದರು.

ಕಂಗನಾ ಡಿಲೀಟ್ ಮಾಡಿದ್ದ ಟ್ವೀಟ್

ಶಾಹೀನ್‌ಬಾಗ್ ದಾದಿ ಆಜ್ ಕಿಸಾನ್ ಬನೀ ಹೈ (ಶಾಹೀನ್‌ ಬಾಗ್ ಅಜ್ಜಿ ಇವತ್ತು ರೈತ ಮಹಿಳೆಯಾಗಿದ್ದಾರೆ) ಎಂಬ ಸಂದೇಶಗಳು ವಾಟ್ಸಾಪ್‌ನಲ್ಲಿ ಹರಿದಾಡಿತ್ತು. ಈ ವೈರಲ್ ಚಿತ್ರದ ಬಗ್ಗೆ ಫ್ಯಾಕ್ಟ್‌ ಚೆಕ್ ಮಾಡಿದ ಆಲ್ಟ್ ನ್ಯೂಸ್, ಎರಡು ಚಿತ್ರಗಳಲ್ಲಿರುವ ಅಜ್ಜಿ ಬೇರೆ ಬೇರೆ ಎಂದಿದೆ.

ಫೋಟೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿರುವುದು ಬೇರೆ ಬೇರೆ ಮಹಿಳೆಯರು ಎಂಬುದು ತಿಳಿಯುತ್ತದೆ.

ಫ್ಯಾಕ್ಟ್‌ ಚೆಕ್

1.ಬಿಲ್ಕಿಸ್ ಬಾನು

‘ಶಾಹೀನ್ ಬಾಗ್ ದಾದಿ’ ಬಿಲ್ಕಿಸ್ ಬಾನು  ಈ ವರ್ಷದ ಆರಂಭದಲ್ಲಿ ಟೈಮ್ ಮ್ಯಾಗಜಿನ್ ಪ್ರಕಟಿಸಿದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಬಾನು ಸಕ್ರಿಯರಾಗಿದ್ದರು.

2. ಪ್ರತಿಭಟನಾ ಮಾರ್ಚ್‌ನಲ್ಲಿರುವ ಹಿರಿಯ ಮಹಿಳೆ

ಈ ಚಿತ್ರ ಸಂತ ಬಾಬಾ ಜರ್ನೈಲ್ ಸಿಂಗ್ ಜೀ ಭಿಂದ್ರನ್‌ವಾಲೆ ಎಂಬ ಫೇಸ್‌ಬುಕ್ ಪುಟದಲ್ಲಿ ಅಕ್ಟೋಬರ್ 13ರಂದು ಪೋಸ್ಟ್ ಆಗಿದೆ. ದಿ ಟ್ರಿಬ್ಯೂನ್ ಪತ್ರಿಕೆಯ ರುಚಿಕಾ ಎಂ. ಖನ್ನಾ, ದಿ ಟೈಮ್ಸ್ ಆಫ್ ಇಂಡಿಯಾದ ನೀಲ್ ಕಮಲ್ ಎಂಬ ಪತ್ರಕರ್ತರು ಕೂಡಾ ಇದೇ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ದಿ ಟ್ರಿಬ್ಯೂನ್ ಚಂಡೀಗಢ ಪತ್ರಿಕೆಯ ಪ್ರಕಾರ ಹಳದಿ ಬಣ್ಣದ ಸ್ಕಾರ್ಫ್ ಧರಿಸಿದ ಹಿರಿಯ ಮಹಿಳೆ ರೈತರ ಹೋರಾಟದಲ್ಲಿ ಭಾಗವಹಿಸಿದ್ದರು. ಈ ಪ್ರತಿಭಟನೆ ನಡೆದದ್ದು ಅಕ್ಟೋಬರ್ 27ರಂದು. ಇಲ್ಲಿ ಪ್ರತಿಭಟನೆಕಾರರು ಭಾರತೀಯ ಕಿಸಾನ್ ಯೂನಿಯನ್‌ನ (ಉಗ್ರಾಹನ್) ಪತಾಕೆ ಹಿಡಿದಿದ್ದಾರೆ.

ಅಕ್ಟೋಬರ್ 9ರಂದು ಕೃಷಿ ಮಸೂದೆ ವಿರೋಧಿಸಿ ಬೆನ್ರಾ ಗ್ರಾಮದ ಬಳಿ ನಡೆದ ಪ್ರತಿಭಟನೆ ವೇಳೆ ಮೇಘರಾಜ್ ನಾಗ್ರಿ ಎಂಬ ರೈತ ಮೃತಪಟ್ಟಿದ್ದರು. ಮೃತ ರೈತನ ಕುಟುಂಬದವರಿಗೆ ಪರಿಹಾರ ಮತ್ತು ಸರ್ಕಾರಿ ಕೆಲಸ ನೀಡಬೇಕು ಎಂದು ರೈತರು ನಡೆಸಿದ ಪ್ರತಿಭಟನೆಯಲ್ಲಿ ಈ ಅಜ್ಜಿ ಭಾಗವಹಿಸಿದ್ದರು.

ಕಂಗನಾ ಲೇವಡಿ ಮಾಡಿದ್ದ ಅಜ್ಜಿಯ ಚಿತ್ರವನ್ನು ಇಲ್ಲಿಂದ ತೆಗೆಯಲಾಗಿತ್ತು

ಬಿಲ್ಕಿಸ್ ಬಾನು ಅವರ ಪುತ್ರ ಮನ್ಸೂರ್ ಅಹ್ಮದ್ ಅವರಲ್ಲಿ ಆಲ್ಟ್ ನ್ಯೂಸ್ ಮಾತನಾಡಿದಾಗ, ಹಳದಿ ಬಣ್ಣದ ಸ್ಕಾರ್ಫ್ ಧರಿಸಿದ ಮಹಿಳೆ ನನ್ನ ಅಮ್ಮ ಅಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು ಎಂದಿದ್ದಾರೆ.

ನಾನು ದೆಹಲಿಗೂ ಹೋಗಬಲ್ಲೆ: ಕಂಗನಾ ಲೇವಡಿಗೆ 73ರ ಹರೆಯದ ಹೋರಾಟಗಾರ್ತಿಯ ತಿರುಗೇಟು

Published On - 5:02 pm, Wed, 2 December 20