250 ಅಡಿ ಆಳದ ತೆರೆದ ಕೊಳವೆ ಬಾವಿಗೆ ಜಾರಿಬಿದ್ದ ಮಗು: ಎನ್‌ಡಿಆರ್‌ಎಫ್ ಕಾರ್ಯಾಚರಣೆ ಫಲಿಸಲಿಲ್ಲ, ಆಸ್ಪತ್ರೆಯಲ್ಲಿ ಸಾವು ದೃಢ

ಹರಿಯಾಣದ ಫರಿದಾಬಾದ್‌ನಲ್ಲಿ 3 ವರ್ಷದ ನೇಹಾ ತೆರೆದ ಬೋರ್‌ವೆಲ್‌ಗೆ ಬಿದ್ದು ಮೃತಪಟ್ಟ ದುರಂತ ನಡೆದಿದೆ. 250 ಅಡಿ ಆಳಕ್ಕೆ ಜಾರಿದ ಬಾಲಕಿಯನ್ನು 10 ಗಂಟೆಗಳ ಕಾಲ ಎನ್‌ಡಿಆರ್‌ಎಫ್ ರಕ್ಷಿಸಲು ಯತ್ನಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘಿಸಿ ಬೋರ್‌ವೆಲ್ ತೆರೆದಿಟ್ಟ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿರುವುದು ಆತಂಕಕಾರಿ.

250 ಅಡಿ ಆಳದ ತೆರೆದ ಕೊಳವೆ ಬಾವಿಗೆ ಜಾರಿಬಿದ್ದ ಮಗು: ಎನ್‌ಡಿಆರ್‌ಎಫ್ ಕಾರ್ಯಾಚರಣೆ ಫಲಿಸಲಿಲ್ಲ, ಆಸ್ಪತ್ರೆಯಲ್ಲಿ ಸಾವು ದೃಢ
ಬೋರ್​ವೆಲ್​
Image Credit source: PTI

Updated on: Sep 28, 2026 | 8:54 AM

ಹರಿಯಾಣ, ಸೆಪ್ಟೆಂಬರ್ 28: ಮನೆಯ ಸಮೀಪ ಸಂಜೆ ವೇಳೆ ಬೇರೆ ಮಕ್ಕಳ ಜತರೆ ಆಟವಾಡುತ್ತಿದ್ದ ಮೂರು ವರ್ಷದ ಮಗು ಆಯತಪ್ಪಿ 250 ಅಡಿ ಆಳದ ಕೊಳವೆಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಹರಿಯಾಣದ ಫರಿದಾಬಾದ್ನ ಸೀಹಿ ಗ್ರಾಮದಲ್ಲಿ ನಡೆದಿದೆ.  ಮೂರು ವರ್ಷದ ಬಾಲಕಿ ನೇಹಾ, ಸತತ 10 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಹೊರಗೆ ತೆಗೆಯಲಾಗಿದ್ದರೂ,  ಜೀವ ಉಳಿಯಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. .

ಅಪಘಾತ ಸಂಭವಿಸಿದ್ದು ಹೇಗೆ?

ಉತ್ತರ ಪ್ರದೇಶದ ಮೈನ್‌ಪುರಿ ಮೂಲದ ಕೂಲಿ ಕಾರ್ಮಿಕ ರಾಮ್ದಿನ್ ಅವರ ಪುತ್ರಿ ನೇಹಾ, ಭಾನುವಾರ ಸಂಜೆ ಸುಮಾರು 6 ರಿಂದ 7 ಗಂಟೆಯ ಸುಮಾರಿಗೆ ಮನೆಯ ಸಮೀಪ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಸಮೀಪದಲ್ಲೇ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ ಮೇಲೆ ಹತ್ತಿ ಆಟವಾಡುವಾಗ, ಆಯತಪ್ಪಿ ಪಕ್ಕದಲ್ಲೇ ಇದ್ದ ತೆರೆದ ಕೊಳವೆಬಾವಿಯೊಳಗೆ ಜಾರಿಬಿದ್ದಿದ್ದಾಳೆ. ಜತೆಗಿದ್ದ ಮಕ್ಕಳು ಚೀರಾಡಿದಾಗ ಸ್ಥಳೀಯರು ಹಾಗೂ ಕುಟುಂಬಸ್ಥರು ಸ್ಥಳಕ್ಕೆ  ಬಂದಿದ್ದರು.

10 ಗಂಟೆಗಳ ಜಂಟಿ ರಕ್ಷಣಾ ಕಾರ್ಯಾಚರಣೆ:

ಮಾಹಿತಿ ತಿಳಿದ ತಕ್ಷಣ ಎನ್‌ಡಿಆರ್‌ಎಫ್ (NDRF), ಹರಿಯಾಣ ಎಸ್‌ಡಿಆರ್‌ಎಫ್ (SDRF), ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಜಂಟಿ ರಕ್ಷಣಾ ಕಾರ್ಯ ಆರಂಭಿಸಿದರು. ಬೋರ್‌ವೆಲ್ ಸುತ್ತಲೂ ಪ್ರಬಲ ಫ್ಲಡ್‌ಲೈಟ್‌ಗಳನ್ನು ಅಳವಡಿಸಿ, ಮಗುವಿನ ಚಲನವಲನ ಗಮನಿಸಲು ವಿಶೇಷ ನೈಟ್ ವಿಷನ್ ಕ್ಯಾಮೆರಾವನ್ನು ಹೊಂಡದೊಳಗೆ ಇಳಿಸಲಾಯಿತು.

ಮತ್ತಷ್ಟು ಓದಿ: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ನಿರ್ಮಾಣ ಕಾರ್ಯ ವಿಳಂಬ; ಚಿತ್ರದುರ್ಗದ ರೈತರಿಂದ ಆಕ್ರೋಶ

ಕಾರ್ಯಾಚರಣೆಯ ವೇಳೆ ಮಗು ಅಳುತ್ತಿದ್ದ ಶಬ್ದ ಕೇಳಿಬಂದಿದ್ದು, ಆಮ್ಲಜನಕ ಪೂರೈಕೆಯನ್ನೂ ಮುಂದುವರೆಸಲಾಗಿತ್ತು. ಸತತ ಪ್ರಯತ್ನದ ಬಳಿಕ ಸೋಮವಾರ ನಸುಕಿನ ಜಾವ ಸುಮಾರು 3.50 ರಿಂದ 4 ಗಂಟೆಯ ವೇಳೆಗೆ ಮಗುವನ್ನು ಮೇಲಕ್ಕೆತ್ತಲಾಯಿತು. ಆದರೆ ಆ ವೇಳೆ ಮಗುವಿನಲ್ಲಿ ಯಾವುದೇ ಚಲನವಲನ ಇರಲಿಲ್ಲ. ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದರು.

ಆಡಳಿತ ಮಂಡಳಿಯ ನಿರ್ಲಕ್ಷ್ಯದ ಆರೋಪ

ಬಾಲಕಿಯ ತಂದೆ ರಾಮ್ದಿನ್ ಅವರ ಪ್ರಕಾರ, ಈ ಕೊಳವೆಬಾವಿಯು ಫರಿದಾಬಾದ್ ಮಹಾನಗರ ಪಾಲಿಕೆಗೆ ಸೇರಿದ್ದಾಗಿದ್ದು, ಕಳೆದ 15 ವರ್ಷಗಳಿಂದ ಬಳಕೆಯಲ್ಲಿರಲಿಲ್ಲ. ಇತ್ತೀಚಿನವರೆಗೂ ಮುಚ್ಚಳ ಮುಚ್ಚಲಾಗಿದ್ದರೂ, ಕೆಲ ದಿನಗಳ ಹಿಂದೆ ಕಾಮಗಾರಿ ಅಥವಾ ನಿರ್ಲಕ್ಷ್ಯದಿಂದ ಅದರ ಮುಚ್ಚಳವನ್ನು ತೆಗೆದು ಹಾಗೆಯೇ ಬಿಡಲಾಗಿತ್ತು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಉಲ್ಲಂಘನೆ: ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ಬಳಕೆಯಲ್ಲಿಲ್ಲದ ಅಥವಾ ನಿಷ್ಕ್ರಿಯವಾಗಿರುವ ಕೊಳವೆಬಾವಿಗಳನ್ನು ಕಾಂಕ್ರೀಟ್, ಮಣ್ಣು ಅಥವಾ ಭದ್ರವಾದ ಮುಚ್ಚಳಗಳಿಂದ ಶಾಶ್ವತವಾಗಿ ಮುಚ್ಚುವುದು ಕಡ್ಡಾಯ. ಆದಾಗ್ಯೂ, ಸ್ಥಳೀಯ ಆಡಳಿತಗಳು ಇದನ್ನು ಪಾಲಿಸದಿರುವುದು ಇಂತಹ ದುರಂತಗಳು ಮರುಕಳಿಸಲು ಕಾರಣವಾಗುತ್ತಿದೆ.

ಹರಿಯಾಣದಲ್ಲಿ ಮರುಕಳಿಸುತ್ತಿರುವ ಬೋರ್‌ವೆಲ್ ಸಾವುಗಳು: ಕಳೆದ ಜುಲೈ ತಿಂಗಳಲ್ಲಿಯೂ ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ 220 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದ 4 ವರ್ಷದ ಬಾಲಕ ನಿರ್ವೈರ್ ಸಿಂಗ್, ಸುಮಾರು 21 ಗಂಟೆಗಳ ಬೃಹತ್ ಕಾರ್ಯಾಚರಣೆಯ ಹೊರತಾಗಿಯೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ.

ಕಾನೂನು ಕ್ರಮ: ತೆರೆದ ಬೋರ್‌ವೆಲ್ ಅನ್ನು ಮುಚ್ಚದೆ ಅಪಾಯ ತಂದೊಡ್ಡಿದ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಸ್ಥಳೀಯ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ (BNS / IPC ಅಡಿಯಲ್ಲಿ) ಪ್ರಕರಣ ದಾಖಲಿಸಲು ಸಿದ್ಧತೆಗಳು ನಡೆದಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us