ದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾನೂನುಗಳು ಅಕ್ರಮ ಮತ್ತು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷ ದುಷ್ಯಂತ್ ದವೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿ ಸಂಘರ್ಷ ಸಮಿತಿಯ ಸದಸ್ಯ ಬಲ್ದೇವ್ ಸಿಂಗ್ ಸಿರ್ಸಾ ಮತ್ತು ವಕೀಲ ಹರ್ವಿಂದರ್ ಸಿಂಗ್ ಫೂಲ್ಕಾ ಅವರ ಜೊತೆ ನಡೆಸಿದ ಸಭೆಯ ನಂತರ ಪ್ರತಿಕ್ರಿಯಿಸಿದ ಅವರು, ‘ ಪ್ರಜಾಪ್ರಭುತ್ವದ ಬೇರುಗಳ ಮೇಲೇ ಪ್ರಭಾವ ಬೀರುವ ಅಂಶಗಳು ನೂತನ ಕೃಷಿ ಕಾಯ್ದೆಗಳಲ್ಲಿವೆ. ಒಂದು ವೇಳೆ ಜಾರಿಗೆ ಬಂದದ್ದೇ ಆದರೆ, ರೈತರನ್ನು ಸಾಲದ ಕಪಿಮುಷ್ಟಿಯಲ್ಲಿ ಬಂಧಿಸುತ್ತವೆ. ಸಾಲದ ಜಾಲದಲ್ಲಿ ಸಿಲುಕಿ ರೈತರು ಶೋಷಣೆಗೆ ಒಳಗಾಗುವ ಸ್ಥಿತಿ ನಿರ್ಮಾಣವಾಗಲಿದೆ’ ಎಂದು ಹೇಳಿದರು.
ಲಾಭವೊಂದನ್ನೇ ಉತ್ತೇಜಿಸುವ ನೂತನ ಕೃಷಿ ಕಾಯ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮಧ್ಯಮ ಮತ್ತು ಸಣ್ಣ ಪ್ರಮಾಣದ ರೈತರಿಗೆ ಯಾವ ಸುರಕ್ಷತೆಯನ್ನೂ ಒದಗಿಸುತ್ತಿಲ್ಲ. ನಿಯಮಗಳನ್ನು ಅರ್ಥೈಸಿಕೊಂಡು ವ್ಯಾಪಾರಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು ಕೃಷಿಕರ ಪಾಲಿಗೆ ಕಷ್ಟವಾಗಲಿದೆ. ಇದರಿಂದ ವ್ಯಾಪಾರಿಗಳಿಂದ ಶೋಷಣೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೃಷಿ ಸಂಘರ್ಷ ಸಮಿತಿಯ ಸದಸ್ಯರು ತಮ್ಮನ್ನು ಭೇಟಿಯಾದ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.
ಕೃಷಿಕರ ಬೇಡಿಕೆಗಳನ್ನು ಆಲಿಸಿ ನೂತನ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕೃಷಿಕರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕಡ್ಡಾಯವಾಗಿ ದಕ್ಕಲೇಬೇಕು ಎಂದು ಅವರು ವಿವರಿಸಿದರು.
ನ್ಯಾಯಾಂಗವನ್ನು ದೂರವಿಡಬಾರದು..
ಕೇಂದ್ರ ಸರ್ಕಾರ ಈಗಾಗಲೇ, ‘ನ್ಯಾಯಾಂಗ ವ್ಯವಸ್ಥೆಯನ್ನು ಈ ಕಾಯ್ದೆಯ ಪರಾಮರ್ಶೆಯಿಂದ ದೂರವಿಡುವೆನೆಂದು ಹೇಳಿದೆ. ಆದರೆ ನ್ಯಾಯಾಂಗದ ಬಳಿ ರೈತರಿಗೆ ನ್ಯಾಯ ಒದಗಿಸುವ ಎಲ್ಲಾ ಸಾಮರ್ಥ್ಯವಿದೆ. ಸರ್ಕಾರ ನ್ಯಾಯಾಂಗವನ್ನು ಒಳಗೊಂಡೇ ಕಾಯ್ದೆಯನ್ನು ಪರಾಮರ್ಶಿಸಬೇಕು. ಈ ಕಾಯ್ದೆಗಳು ಜಾರಿಯಾದ ನಂತರ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹೆಚ್ಚಾಗಲಿವೆ. ಇಂಥ ಕಾಯ್ದೆಗಳು ಅನಗತ್ಯ’ ಎಂದು ದುಷ್ಯಂತ್ ದವೆ ಅಭಿಪ್ರಾಯಪಟ್ಟರು.
ರೈತ ಮುಖಂಡರ ಬಳಿ ಕಾಲಾವಕಾಶ ಕೇಳಿದ ಕೇಂದ್ರ ಸಚಿವರು; ಮತ್ತೆ ಡಿ.9ಕ್ಕೆ ಮಾತುಕತೆ
Published On - 11:59 am, Sun, 6 December 20