ಹೊಸ ಸಂಸತ್ ಭವನವು ಆತ್ಮನಿರ್ಭರ ಭಾರತದ ಗುಡಿಯಾಗಲಿದೆ: ಓಮ್ ಬಿರ್ಲಾ
2022 ರ ಹೊತ್ತಿಗೆ ತಯಾರಾಗಲಿರುವ ಹೊಸ ಸಂಸತ್ ಭವನದ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುವಾರದಂದು ನೆರವೇರಿಸಲಿದ್ದು, ಒಟ್ಟು 11,000 ಕಾರ್ಮಿಕರು ಇದರ ನಿರ್ಮಾಣ ಕಾರ್ಯದಲ್ಲಿ ತೊಡಗಲಿದ್ದಾರೆ.
ಡಿಸೆಂಬರ್ 10ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿರುವ ಹೊಸ ಸಂಸತ್ ಭವನದ ಕಟ್ಟಡವು ಆತ್ಮನಿರ್ಭರ ಭಾರತದ ಗುಡಿಯಾಗಲಿದೆಯೆಂದು ಲೋಕಸಭೆಯ ಸ್ಪೀಕರ್ ಓಮ್ ಬಿರ್ಲಾ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದರ ಜತೆ ಮಾತಾಡಿದ ಬಿರ್ಲಾ ಆವರು, ‘‘ ಈಗಿನ ಪಾರ್ಲಿಮೆಂಟ್ ಭವನಕ್ಕಿಂತ 17,000 ಚದರ ಮೀಟರ್ಗಳಷ್ಟು ದೊಡ್ಡದಾಗಿರುವ ಈ ಹೊಸ ಸಂಸತ್ ಭವನವು ಭಾರತದ ವೈವಿಧ್ಯತೆಯನ್ನು ಬಿಂಬಿಸುವ ಆತ್ಮನಿರ್ಭರ ಭಾರತದ ದೇವಸ್ಥಾನವೆನಿಸಿಕೊಳ್ಳಲಿದೆ,’’ ಎಂದರು.
ಕಟ್ಟಡದ ನಿರ್ಮಾಣ ಕಾರ್ಯದಲ್ಲಿ 11,000 ಜನ ತೊಡಗಲಿದ್ದಾರೆ ಎಂದು ಹೇಳಿದ ಲೋಕಸಭಾಧ್ಯಕ್ಷ, ‘‘ಈ ಬೃಹತ್ ರಚನೆಯು ಭೂಕಂಪ ನಿರೋಧಕವಾಗಿರಲಿದೆ, ನಿರ್ಮಾಣದ ಗುತ್ತಿಗೆಯನ್ನು ಸೆಪ್ಟೆಂಬರ್ 29ರಂದು ಟಾಟಾ ಪ್ರಾಜೆಕ್ಟ್ಸ್ ಸಂಸ್ಥೆಗೆ ನೀಡಲಾಗಿದೆ,’’ ಎಂದರು.
ಸುಮಾರು 971 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಲಾಗುತ್ತಿರುವ ಹೊಸ ಸಂಸತ್ ಭವನದ ಒಟ್ಟು ವಿಸ್ತೀರ್ಣ64,000 ಚದರ ಮೀಟರ್ಗಳಷ್ಟಿದೆ ಮತ್ತು ಅದರ ನಿರ್ಮಾಣ ಕಾರ್ಯ ಮುಗಿದ ನಂತರ 1,224 ಸದಸ್ಯರನ್ನೊಳಗೊಂಡ ಸಂಸತ್ ಕಲಾಪಗಳು ಅದರಲ್ಲಿ ನಡೆಯಲಿವೆಯೆಂದು ಬಿರ್ಲಾ ಹೇಳಿದರು.
ಸಂಸತ್ತಿನ ಎರಡೂ ಮನೆಗಳ ಸಂಸದರಿಗಾಗಿ ಈಗಿನ ಶ್ರಮ್ ಶಕ್ತಿ ಭವನ್ ಇರುವ ಸ್ಥಳದಲ್ಲಿ ಒಂದು ಹೊಸ ಕಾಂಪ್ಲೆಕ್ಸ್ ಸಹ ನಿರ್ಮಿಸಲಾಗುವುದೆಂದು ಬಿರ್ಲಾ ಹೇಳಿದರು. 2022 ರ ಹೊತ್ತಿಗೆ ಈ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ಮೂಲಗಳ ಪ್ರಕಾರ ನಿರ್ಮಾಣ ಕಾರ್ಯದಲ್ಲಿ ತೊಡಗುವ ಕೆಲಸಗಾರರ ಪೈಕಿ ಶೇಕಾಡಾ 50 ರಷ್ಟು ಜನ ಕಲ್ಲು ಕೆತ್ತನೆ ಮತ್ತು ಫ್ರೆಸ್ಕೊ (ಸೀಲಿಂಗ್ಗಳಿಗೆ ಬಣ್ಣ ಬಳಿಯುವುದು) ಕೆಲಸದಲ್ಲಿ ನುರಿತವರಾಗಿದ್ದಾರೆ. ಹಾಗೆಯೇ, ಕಟ್ಟಡದ ನಿರ್ಮಾಣ ಹಂತದಲ್ಲಿ ಕೊವಿಡ್-19ಗೆ ಸಂಬಂಧಿಸಿದ ಎಲ್ಲಾ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಲಾಗಿದೆ.
Published On - 9:45 pm, Sat, 5 December 20