ಮುಂಬೈ: ಮಹಾರಾಷ್ಟ್ರದಲ್ಲಿ ವ್ಯಾಪಾರಿಗಳಿಂದ ರೈತರು ವಂಚನೆಗೊಳಗಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವುದರ ಬಗ್ಗೆ ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠ ಕಳವಳ ವ್ಯಕ್ತಪಡಿಸಿದೆ. ರಾಜ್ಯದಾದ್ಯಂತ ಹಲವಾರು ರೈತರು ವಂಚನೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ವಂಚನೆ ಪ್ರಕರಣ ರದ್ದತಿಗೆ ನಿರಾಕರಿಸಿದ ಪೀಠ
ಇದೇ ವೇಳೆ ರಾಜ್ಯದ ಜಲಗಾಂವ್ ಜಿಲ್ಲೆಯಲ್ಲಿನ ಬಾಳೆ ಬೆಳೆಯುವ ರೈತರನ್ನು ವಂಚಿಸಿದ ಪ್ರಕರಣವನ್ನು ರದ್ದು ಮಾಡಲು ಪೀಠ ನಿರಾಕರಿಸಿದೆ. ರೈತರ ಉತ್ಪನ್ನಗಳನ್ನು ವ್ಯಾಪಾರಿಗಳಿಗೆ ಮಾರಿದರೆ ಅವರು ಅದನ್ನು ದೇಶದಾದ್ಯಂತ ಸಾಗಾಣಿಕೆ ಮಾಡುತ್ತಾರೆ. ಈ ಮೂಲಕ ಹೆಚ್ಚು ಲಾಭಗಳಿಸಬಹುದು ಎಂದು ಭರವಸೆ ನೀಡಿ ರೈತರನ್ನು ವಂಚಿಸಿದ ಪ್ರಕರಣವಾಗಿದೆ ಇದು.
ಮಯೂರ್ ಖಂಡೇಲ್ವಾಲ್ (28) , ಕೈಲಾಶ್ ಚಂದ್ರ ಖಂಡೇಲ್ವಾಲ್ (58) ಮತ್ತು ಅಖಿಲ್ ಹಸನುದ್ದೇನ್ ಶೇಖ್ (37) ಈ ಮೂರು ವ್ಯಕ್ತಿಗಳ ಕ್ರಿಮಿನಲ್ ಅರ್ಜಿಯನ್ನು ವಿಭಾಗಿಯ ಪೀಠದ ನ್ಯಾಯಮೂರ್ತಿ ತಾನಾಜಿ ವಿ ನಲಾವಡೆ ಮತ್ತು ಮುಕುಂದ್ ಜಿ ಸೇವ್ಲಿಕರ್ ಡಿಸೆಂಬರ್ 7ರಂದು ವಿಚಾರಣೆ ನಡೆಸಿದ್ದಾರೆ. ಜಲಗಾಂವ್ ಜಿಲ್ಲೆಯ ರವೇರ್ ತಾಲೂಕಿನ ಅರ್ಜಿದಾರರಾದ ಇವರು ತಮ್ಮ ವಿರುದ್ಧ 2017 , ಜುಲೈ 28ರಂದು ದಾಖಲಾಗಿದ್ದ ಕೇಸು ರದ್ದು ಪಡಿಸಬೇಕೆಂದು ಕೋರಿದ್ದರು.
ಜಲಗಾಂವ್ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) , 406 ( ವಿಶ್ವಾಸ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯೊಬ್ಬರ ದೂರಿನ ಪ್ರಕಾರ ಈ ಪ್ರಕರಣ ದಾಖಲಿಸಿದ್ದು, ಆಕೆ ಕೃಷಿ ಉತ್ಪನ್ನಗಳ ಮಧ್ಯವರ್ತಿಯಾಗಿದ್ದಾರೆ. ಈ ಪ್ರಕರಣದಲ್ಲಿ ಆಕೆಯನ್ನು ಮಾಹಿತಿದಾರ ಎಂದು ಗುರುತಿಸಲಾಗಿದೆ.
ನ್ಯಾಯಾಲಯದಲ್ಲಿನ ವಾದ- ಪ್ರತಿವಾದ
ಜಲಗಾಂವ್ ಜಿಲ್ಲೆಯಿಂದ ಬಾಳೆಹಣ್ಣುಗಳನ್ನು ಇತರ ಸ್ಥಳಗಳಿಗೆ ಸಾಗಿಸಲು ಅವರು ತಮ್ಮ ಸೇವೆಗಳನ್ನು ಬಳಸಿಕೊಂಡಿದ್ದರಿಂದ ಪ್ರಕರಣದ ಆರೋಪಿಗಳಾದ ಖಂಡೇಲ್ವಾಲ್ ಟ್ರಾನ್ಸ್‌ಪೋರ್ಟರ್ಸ್ ಮಾಲೀಕರೊಂದಿಗೆ ಪರಿಚಯವಾಯಿತು ಎಂದು ದೂರುದಾರ ಸಾನಿಯಾ ಕದ್ರಿ ಹೇಳಿದ್ದಾರೆ.
ಹೆಚ್ಚಿನ ಲಾಭದ ಪಡೆಯಲು ರೈತರಿಂದ ಸಂಗ್ರಹಿಸಿದ ಬಾಳೆಹಣ್ಣುಗಳನ್ನು ತಮಗೆ ಹಸ್ತಾಂತರಿಸುವ ಪ್ರಸ್ತಾಪದೊಂದಿಗೆ ಆರೋಪಿಗಳಲ್ಲಿ ಒಬ್ಬನಾದ ಮಯೂರ್ ತನ್ನನ್ನು ಸಂಪರ್ಕಿಸಿದ್ದನು. ಬಾಳೆಹಣ್ಣನ್ನು ಹೆಚ್ಚಿನ ಬೆಲೆಗೆ ಖರೀದಿಸಲು ಸಿದ್ಧರಿರುವ ವ್ಯಾಪಾರಿಗಳು ನಮಗೆ ಗೊತ್ತು ಎಂದು ಮಯೂರ್ ಹೇಳಿರುವುದಾಗಿ ಸಾನಿಯಾ ಆರೋಪಿಸಿದ್ದಾರೆ.
ದೇಶಾದ್ಯಂತದ ವ್ಯಾಪಾರ ವಲಯಗಳಲ್ಲಿನ ತಮ್ಮ ಸಂಪರ್ಕಗಳನ್ನು ಉಲ್ಲೇಖಿಸಿ ಆರೋಪಿಗಳು ಈ ರೀತಿಯ ಭರವಸೆಗಳನ್ನು ನೀಡಿದ್ದಾರೆ ಎಂದಿದ್ದಾರೆ ಸಾನಿಯಾ. ದೂರಿನ ಪ್ರಕಾರ, ಭರವಸೆ ನೀಡಿದ ವಹಿವಾಟಿನ ಬಗ್ಗೆ ಮಾಹಿತಿದಾರ ಮತ್ತು ಆರೋಪಿಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಮಾಹಿತಿದಾರರ ಪರ ವಾದಿಸಿದ ವಕೀಲ ಎಸ್.ಎನ್. ಸೂರ್ಯವಂಶಿ ಅವರು, ಸಾನಿಯಾ ರೈತರ ಗುಂಪಿನಿಂದ ಬಾಳೆಹಣ್ಣುಗಳನ್ನು ಸಂಗ್ರಹಿಸಿ ಕೆಲವೇ ದಿನಗಳಲ್ಲಿ ಉತ್ತಮ ಬೆಲೆ ನೀಡುವ ಭರವಸೆ ನೀಡಿದರು. ಆದರೆ, ಆರೋಪಿಗಳು ಹಣ ಪಾವತಿಸದ ಕಾರಣ, ಅವರು ಬೆಳೆಗಾರರಿಗೆ ತಾನು ನೀಡಿದ್ದ ಭರವಸೆಯಂತೆ ಹಣವನ್ನು ನೀಡಲು ಸಾಧ್ಯವಾಗಲಿಲ್ಲ. ಆಗ ರೈತರು ತಮಗೆ ಭರವಸೆ ನೀಡಿದ ಹಣ ಪಾವತಿಸಬೇಕೆಂದು ಒತ್ತಾಯಿಸಿದರು ಎಂದಿದ್ದಾರೆ.
ತಾನು ಬೆಳೆಗಾರರಿಗೆ ಭರವಸೆ ನೀಡಿದ ಹಣವನ್ನು ಕೊಡುವಂತೆ ಆರೋಪಿಗಳನ್ನು ಕೋರಿದಾಗ, ಅವರು ಹಣಕಾಸಿನ ಬಿಕ್ಕಟ್ಟನ್ನು ಉಲ್ಲೇಖಿಸಿ, ಹಣವನ್ನು ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು. ಕೆಲವು ದಿನಗಳ ನಂತರ ಹಣವನ್ನು ಪಾವತಿಸುವುದಾಗಿಯೂ ಹೇಳಿದರು. ಅವರ ಮಾತಿನ ಆಧಾರದ ಮೇಲೆ ನಾನು ಕೆಲವು ರೈತರಿಗೆ ಹಣ ಪಾವತಿ ಮಾಡಿದೆ. ಆದರೆ ಆರೋಪಿಗಳು ನನಗೆ ಸಂಪರ್ಕಕ್ಕೆ ಸಿಗದೇ ಇದ್ದಾಗ ಪೊಲೀಸರಿಗೆ ದೂರು ನೀಡಬೇಕಾಗಿ ಬಂತು ಎಂದಿದ್ದಾರೆ ಸಾನಿಯಾ.
ಆದರೆ, ಸಾನಿಯಾ ಅವರು ಬಾಳೆಹಣ್ಣುಗಳನ್ನು ತನ್ನ ಕಕ್ಷಿದಾರರರಿಗೆ ಮಾರಾಟಕ್ಕಾಗಿ ನೀಡಿಲ್ಲ ಎಂದು ಆರೋಪಿಗಳ ಪರ ವಾದಿಸಿದ ವಕೀಲ ಕೆ.ಸಿ.ಸಂತ್ ಹೇಳಿದ್ದಾರೆ. ದೂರುದಾರನಿಗೆ ಬಾಕಿ ಇರುವ ₹2.8 ಕೋಟಿ ನೀಡಲು ಆರೋಪಿಗಳು ನಿರಾಕರಿಸಿದ್ದಾರೆ.
ತನ್ನ ಕಕ್ಷಿದಾರರು ಸಾರಿಗೆ ವ್ಯವಹಾರದಲ್ಲಿರುವ ಕಾರಣ ಮಾಹಿತಿದಾರರೊಂದಿಗೆ ಟ್ರಕ್ ಸರಬರಾಜಿಗೆ ಸಂಬಂಧಿಸಿದ ಕೆಲವು ವಹಿವಾಟುಗಳನ್ನು ಮಾಡಿದ್ದಾರೆ. ಬಾಳೆಹಣ್ಣುಗಳನ್ನು ನೇರವಾಗಿ ವ್ಯಾಪಾರಿಗಳಿಗೆ ಮಾರಾಟ ಮಾಡಿದವರು ಮಾಹಿತಿದಾರರು ಆಗಿರುವುದರಿಂದ ನಮ್ಮ ಕಕ್ಷಿದಾರ ಮೇಲಿರುವ ಪ್ರಕರಣ ರದ್ದು ಮಾಡಬೇಕೆಂದು ಕೆ.ಸಿ. ಸಂತ್ ಒತ್ತಾಯಿಸಿದ್ದಾರೆ.
ನ್ಯಾಯಾಲಯ ಹೇಳಿದ್ದೇನು?
ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ, ನ್ಯಾಯಾಲಯವು ಅರ್ಜಿದಾರರಿಗೆ ಮೋಸ ಮಾಡುವ ಉದ್ದೇಶ ಇಲ್ಲ ಎಂದು ಹೇಳಲಾಗುವುದಿಲ್ಲ. ಅವರು ಈ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಮಾರಾಟ ಪ್ರಕ್ರಿಯೆ ನಡೆಯುತ್ತಿದ್ದಂತೆ ಅವರು ಹಣ ಸಂಗ್ರಹಿಸಿದ್ದಾರೆ. ಆದರೆ ಅವರು ಆ ಹಣವನ್ನು ಮಾಹಿತಿದಾರ ಮತ್ತು ರೈತರಿಗೆ ನೀಡಿಲ್ಲ. ಇದು ವಂಚನೆ ಎಂದು ಹೇಳಿದೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನಲಾವಾಡೆ ಇಂತಹ ನಿದರ್ಶನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದು ದುರದೃಷ್ಟಕರ. ಆದರೆ ಎಲ್ಲಾ ವ್ಯವಸ್ಥೆಗಳು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆಯನ್ನು ತೋರಿಸುತ್ತಿಲ್ಲ ಎಂಬುದು ಸತ್ಯ. ರೈತರಿಗೆ ಯಾವುದೇ ಸಂಪನ್ಮೂಲಗಳಿಲ್ಲ ಮತ್ತು ಅವರು ದಾವೆ ಹೂಡಲು ಸಾಧ್ಯವಿಲ್ಲ. ರೈತರ ಈ ಅಸಾಮರ್ಥ್ಯವನ್ನು ವ್ಯಾಪಾರಿಗಳು, ಅರ್ಜಿದಾರರು (ಈ ಸಂದರ್ಭದಲ್ಲಿ), ಲಾಭ ಪಡೆಯಲು ಬಳಸಿಕೊಳ್ಳುತ್ತಾರೆ.
ರೈತರು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ದಿನದಿಂದ ದಿನಕ್ಕೆ ಆತ್ಮಹತ್ಯೆಗಳು ಹೆಚ್ಚುತ್ತಿವೆ ಮತ್ತು ಈ ರೀತಿಯ ವಂಚನೆಗಳು ರೈತರನ್ನು ಆತ್ಮಹತ್ಯೆಗೆ ದೂಡುತ್ತದೆ. ಈ ಎಲ್ಲಾ ಸಂದರ್ಭಗಳಿಂದಾಗಿ, ಅರ್ಜಿದಾರರ ಪರವಾಗಿ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
‘ಆತ್ಮಹತ್ಯೆ ಮಾಡಿಕೊಳ್ಳೋ ರೈತರು ಹೇಡಿಗಳು.. ಹೆಂಡತಿ, ಮಕ್ಕಳನ್ನ ನೋಡಿಕೊಳ್ಳಲಾರದವನು ಹೇಡಿ’