ನಡ್ಡಾ ಕಾರಿನ ಮೇಲೆ ಕಲ್ಲು ತೂರಾಟಕ್ಕೆ ಬಿಜೆಪಿ ಆಕ್ರೋಶ: ಬಂಗಾಳಕ್ಕೆ ಅಮಿತ್ ಶಾ ಭೇಟಿ ಸಾಧ್ಯತೆ

|

Updated on: Dec 11, 2020 | 3:31 PM

ಡಿಸೆಂಬರ್ 19 ಮತ್ತು 20ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಭೇಟಿಯ ಅಧಿಕೃತ ದಿನಾಂಕ ಇನ್ನೂ ಘೋಷಣೆ ಆಗಿಲ್ಲ.

ನಡ್ಡಾ ಕಾರಿನ ಮೇಲೆ ಕಲ್ಲು ತೂರಾಟಕ್ಕೆ ಬಿಜೆಪಿ ಆಕ್ರೋಶ: ಬಂಗಾಳಕ್ಕೆ ಅಮಿತ್ ಶಾ ಭೇಟಿ ಸಾಧ್ಯತೆ
ಅಮಿತ್ ಶಾ
Follow us on

ಕೋಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಾರಿನ ಮೇಲೆ ನಡೆದ ಕಲ್ಲು ತೂರಾಟವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿ.19 ಮತ್ತು 20ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜೆ.ಪಿ.ನಡ್ಡಾ ಅವರ ಕಾರಿನ ಮೇಲೆ ಗುರುವಾರ ಕಲ್ಲು ತೂರಾಟ ನಡೆದಿತ್ತು. ನಾರ್ತ್ 24 ಪರಗಣಾಸ್ ಜಿಲ್ಲೆಯ ಡಿಮೈಂಡ್ ಹಾರ್ಬರ್​ನತ್ತ ತೆರಳುತ್ತಿದ್ದಾಗ ನಡ್ಡಾ ಅವರ ಬೆಂಗಾವಲು ವಾಹನ ವಾಹನದ ಮೇಲೆ ದಾಳಿ ನಡೆದಿದೆ. ನಡ್ಡಾ ಜತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯ ಮತ್ತು ದಿಲೀಪ್ ಘೋಷ್ ಇದ್ದರು. ದಾಳಿಯಲ್ಲಿ ವಿಜಯ್ ವರ್ಗಿಯ ಅವರಿಗೆ ಗಾಯಗಳಾಗಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಜೆ.ಪಿ. ನಡ್ಡಾ ಭೇಟಿ ವೇಳೆ ಸಾಕಷ್ಟು ಭದ್ರತಾ ಲೋಪ ಕಂಡು ಬಂದಿದೆ. ಪೊಲೀಸ್​ ಸಿಬ್ಬಂದಿ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ದಿಲೀಪ್​ ಘೋಷ್​ ಪತ್ರದಲ್ಲಿ ಆರೋಪಿಸಿದ್ದಾರೆ. ಈ ಪತ್ರ ದೊರೆತ ಬೆನ್ನಲ್ಲೇ ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.

ನಡ್ಡಾ ಕಾರಿನ ಮೇಲೆ ನಡೆದ ದಾಳಿಯು ಪ್ರಾಯೋಜಿತ ಎಂದು ಹೇಳಿರುವ ಅಮಿತ್ ಶಾ, ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವು ದಬ್ಬಾಳಿಕೆ ಮತ್ತು ಅರಾಜಕತೆಯನ್ನು ಮುಂದುವರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವುದಕ್ಕಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ವಿವರವಾದ ವರದಿ ನೀಡಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಪಾಲ ಜಗದೀಪ್ ಧನ್​ಕರ್ ಅವರಿಗೆ ಸೂಚಿಸಿದೆ.

ನಡ್ಡಾ ಅವರ ಕಾರಿನ ಮೇಲೆ ದಾಳಿ ಖಂಡಿಸಿ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ಚಳವಳಿ ನಡೆಸಿದರು. ದೊರಿನಾ ಕ್ರಾಸಿಂಗ್, ಎಸ್.ಸಿ. ಮಲ್ಲಿಕ್ ರೋಡ್, ವಿಐಪಿ ರಸ್ತೆ, ಚಿಗಾಂರಿಘಟ್ಟ ಮೊದಲಾದ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪಶ್ಚಿಮ ಬಂಗಾಳದ ಕಾನೂನು ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ:  ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ, ಡಿಜಿಪಿಗೆ ಕೇಂದ್ರದಿಂದ ಸಮನ್ಸ್

ಆದಾಗ್ಯೂ, ಪರಿಸ್ಥಿತಿ ಶಾಂತವಾಗಿದೆ . ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಸುರಕ್ಷಿತವಾಗಿ ಡೈಮಂಡ್ ಹಾರ್ಬರ್ ತಲುಪಿದ್ದಾರೆ. ಅವರ ಬೆಂಗಾವಲು ವಾಹನಕ್ಕೆ ಏನೂ ಆಗಿಲ್ಲ. ದೆಬಿಪುರ್, ಫಲ್ತಾ ಪೊಲೀಸ್ ಠಾಣೆ, ಡೈಮಂಡ್ ಹಾರ್ಬರ್ ಬಳಿ ನಿಂತಿದ್ದ ಜನರ ಗುಂಪೊಂದು ಏಕಾಏಕಿ ಬೆಂಗಾವಲು ವಾಹನದ ಹಿಂದಿರುವ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ಟ್ವೀಟ್ ಮಾಡಿದ್ದರು.

ನಡ್ಡಾ ಕಾರಿನ ಮೇಲೆ ದಾಳಿ: ಟಿಎಂಸಿ ಮತ್ತು ಬಿಜೆಪಿ ನಡುವೆ ವಾಗ್ದಾಳಿ
ನಡ್ಡಾ ಕಾರಿನ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಬಿಜೆಪಿ, ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದೆ. ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಹಿರಿಯ ನಾಯಕರು ಒತ್ತಾಯಿಸಿದ್ದಾರೆ. ಆದರೆ ಬಿಜೆಪಿ ರಾಜ್ಯದಲ್ಲಿ ಶಾಂತಿ ಕದಡುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ನೀವು ಯಾಕೆ ಭಯಪಡುತ್ತಿದ್ದೀರಿ?
ಬಂಗಾಳದಲ್ಲಿ ಹಿಂಸಾಚಾರವನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮಮತಾ, ಬಿಜೆಪಿ ಕಾರ್ಯಕರ್ತರು ರ‍್ಯಾಲಿಯಲ್ಲಿ ಭಾಗವಹಿಸಲು ಬರುವಾಗ ಆಯುಧಗಳನ್ನು ಹಿಡಿದುಕೊಂಡು ಬರುತ್ತಿದ್ದಾರೆ. ಬಿಜೆಪಿಯವರು ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಈ ದಾಳಿಯ ಬಗ್ಗೆ ತನಿಖೆ ನಡೆಸುವಂತೆ ನಾನು ಪೊಲೀಸರಿಗೆ ಆದೇಶಿಸಿದ್ದೇನೆ. ಪ್ರತಿ ಬಾರಿಯೂ ಸುಳ್ಳುಗಳನ್ನು ಹಬ್ಬಲು ನಾನು ಬಿಡಲಾರೆ ಎಂದಿದ್ದಾರೆ.

ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಲು ಬರುವ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡು ಟಿಎಂಸಿ ಮೇಲೆ ಆರೋಪ ಹೊರಿಸುತ್ತಾರೆ. ಅವರು ಬಿಎಸ್​ಎಫ್, ಸಿಆರ್​​ಪಿಎಫ್, ಸೇನಾಪಡೆ ಮತ್ತು ಸಿಐಎಸ್​​ಎಫ್ ಜತೆಯೇ ತಿರುಗುತ್ತಾರೆ. ಅಷ್ಟೊಂದು ಭಯ ಯಾಕೆ ಎಂದು ಮಮತಾ ಪ್ರಶ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಟಿಎಂಸಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಹೊತ್ತಲ್ಲಿ ರಾಜ್ಯದಲ್ಲಿ ಕಾನೂನು ಲೋಪ ಉಂಟಾಗಿದೆ. ಇಲ್ಲಿ ಆಹಾರ, ಆರೋಗ್ಯ ವ್ಯವಸ್ಥೆ ಸರಿಯಾಗಿಲ್ಲ ಎಂದು ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದಿದ್ದಾರೆ.

ನಡ್ಡಾ ಕಾರಿನ ಮೇಲೆ ದಾಳಿ; ವರದಿ ನೀಡಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರದ ಸೂಚನೆ

ಜೆ.ಪಿ.ನಡ್ಡಾ ಪ್ರವಾಸದ ವೇಳೆ ಬಿಜೆಪಿ ಮುಖಂಡರ ವಾಹನಗಳ ಮೇಲೆ ಕಲ್ಲು ತೂರಾಟ

Published On - 2:29 pm, Fri, 11 December 20