Farmers Protest ದೆಹಲಿಯ ಜಂತರ್​​ ಮಂತರ್​​ನಲ್ಲಿ ಮಹಾ ಪಂಚಾಯತ್; ರೈತರ ಬೇಡಿಕೆಗಳು ಏನು?

| Updated By: ರಶ್ಮಿ ಕಲ್ಲಕಟ್ಟ

Updated on: Aug 22, 2022 | 3:27 PM

ಮಹಾಪಂಚಾಯತ್ ಸೋಮವಾರ ಬೆಳಗ್ಗೆ 11ರಿಂದ 4ರವರೆಗೆ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ. ಪಂಚಾಯತ್ ಮುಗಿದ ಕೂಡಲೇ ರಾಷ್ಟ್ರಪತಿಯವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗುವುದು

Farmers Protest  ದೆಹಲಿಯ ಜಂತರ್​​ ಮಂತರ್​​ನಲ್ಲಿ ಮಹಾ ಪಂಚಾಯತ್; ರೈತರ ಬೇಡಿಕೆಗಳು ಏನು?
ರೈತರ ಪ್ರತಿಭಟನೆ
Follow us on

ದೆಹಲಿ: ದೆಹಲಿಯ ಜಂತರ್ ಮಂತರ್​​ನಲ್ಲಿ (Jantar Mantar) ಸಂಯುಕ್ತ ಕಿಸಾನ್ ಮೋರ್ಚಾ (Samyukta Kisan Morcha) ನೇತೃತ್ವದಲ್ಲಿ ಮಹಾ ಪಂಚಾಯತ್ (mahapanchayat) ನಡೆಯುತ್ತಿದ್ದು, ಬಿಗಿ ಬಂದೋಬಸ್ತ್ ನಡುವೆ ತಂಡೋಪತಂಡವಾಗಿ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಜಂತರ್ ಮಂತರ್​​ಗೆ ತಲುಪುದನ್ನು ತಡೆಯಲು ಕೆಲವು ಪ್ರದೇಶಗಳಲ್ಲಿ ರಸ್ತೆ ಬಂದ್ ಮಾಡಲಾಗಿದೆ ಎಂದು ಎಸ್​​ಕೆಎಂ ನಾಯಕರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಕರ್ನಾಟಕ ಮತ್ತು ಇತರ ರಾಜ್ಯದ ರೈತರು ಈಗಾಗಲೇ ದೆಹಲಿ ತಲುಪಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಇದು ಒಂದು ದಿನದ ಕಾರ್ಯಕ್ರಮ ಆಗಿದ್ದು, ಶಾಂತಿ ಮತ್ತು ಶಿಸ್ತು ಪಾಲಿಸಲಾಗುವುದು. ಮಹಾಪಂಚಾಯತ್ ಸೋಮವಾರ ಬೆಳಗ್ಗೆ 11ರಿಂದ 4ರವರೆಗೆ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ. ಪಂಚಾಯತ್ ಮುಗಿದ ಕೂಡಲೇ ರಾಷ್ಟ್ರಪತಿಯವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗುವುದು. ಸರ್ಕಾರ ಯಾವುದೇ ರೀತಿಯಲ್ಲಿ ನಮಗೆ ತೊಂದರೆ ಕೊಡಲು ಯತ್ನಿಸಿದರೆ ಅದಕ್ಕೆ ಅವರೇ ಹೊಣೆ ಎಂದು ಎಸ್​​ಕೆಎಂ ಹೇಳಿದೆ.

ಕಿಸಾನ್ ಪಂಚಾಯತ್ ಮೂಲಕ ರೈತರು ಮುಂದಿಟ್ಟಿರುವ ಬೇಡಿಕೆಗಳೇನು?

ಲಖೀಂಪುರ ಖೇರಿ ಹತ್ಯಾಕಾಂಡದಲ್ಲಿ ಸಾವಿಗೀಡಾದ ರೈತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಕಳೆದ 9 ತಿಂಗಳಿನಿಂದ ಜೈಲಿನಲ್ಲಿರುವ ರೈತರನ್ನ ಬಿಡುಗಡೆ ಮಾಡಬೇಕು. ಲಖಿಂಪುರ ಖೇರಿ ಹತ್ಯಾಕಾಂಡದ ಪ್ರಮುಖ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿಯನ್ನು ಬಂಧಿಸಬೇಕು.

ಸ್ವಾಮಿನಾಥನ್ ಆಯೋಗ ವರದಿಯಲ್ಲಿ ಹೇಳಿದಂತೆ C2+50% ಫಾರ್ಮುಲಾ ಆಧರಿಸಿ ಎಂಎಸ್ ಪಿ ಖಾತರಿ ಪಡಿಸಬೇಕು. ಭರವಸೆ ನೀಡಿದಂತೆ ಎಂಎಸ್​​ಪಿ ಖಾತರಿಗಾಗಿ ಕಾನೂನು ಮಾಡಬೇಕು.

ದೇಶದ ರೈತರ ಸಾಲ ಮನ್ನಾ ಮಾಡಬೇಕು

ವಿದ್ಯುತ್ ತಿದ್ದುಪಡಿ ಮಸೂದೆ 2022 ರದ್ದು ಮಾಡಬೇಕು

ಕಬ್ಬು ಬೆಳೆಗಿರುವ ಬೆಂಬಲ ಬೆಲೆ ಏರಿಕೆ ಮಾಡಬೇಕು, ಕಬ್ಬು ಬೆಳೆಗೆ ಬಾಕಿ ಇರುವ ಮೊತ್ತವನ್ನು ತಕ್ಷಣವೇ ನೀಡಬೇಕು

ಡಬ್ಲ್ಯುಟಿಒದಿಂದ ಭಾರತ ಹೊರಗೆ ಬರಬೇಕು, ಮತ್ತು ಎಲ್ಲ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದು ಮಾಡಬೇಕು
ರೈತರ ಪ್ರತಿಭಟನೆ ವೇಳೆ ದಾಖಲಿಸಲಾದ ಎಲ್ಲ ಪ್ರಕರಣಗಳನ್ನು ರದ್ದು ಮಾಡಬೇಕು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ , ರೈತರ ಬಾಕಿ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.

ಅಗ್ನಿಪಥ್ ಯೋಜನೆ ಹಿಂಪಡೆಯಬೇಕು

Published On - 3:24 pm, Mon, 22 August 22