ದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಉತ್ತರ ಪ್ರದೇಶದ ರೈತ ಮುಖಂಡರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದರು. ವಿಧಾನಸಭೆಯಲ್ಲಿ ರೈತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ದೆಹಲಿ ಸಾರಿಗೆ ಮತ್ತು ಪರಿಸರ ಸಚಿವ ಕೈಲಾಶ್ ಗೆಹ್ಲೋಟ್, ಜಲಸಂಪನ್ಮೂಲ ಮತ್ತು ಪ್ರವಾಸೋದ್ಯಮ ಸಚಿವ ರಾಜೇಂದ್ರ ಪಾಲ್ ಗೌತಮ್ ಹಾಗೂ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಇದ್ದರು. ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತ ಮುಖಂಡರು ನವೆಂಬರ್ನಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಈ ಬಾರಿಯ ಗಣರಾಜ್ಯೋತ್ಸವದಂದು ಹಿಂಸಾತ್ಮಕ ರೂಪವನ್ನೇ ತಳೆದಿತ್ತು. ಸದ್ಯ ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ತಡೆಹಿಡಿಯಲಾಗಿದ್ದರೂ, ಆ ಮೂರನ್ನೂ ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತರು ಹೇಳಿದ್ದಾರೆ. ಕೇಂದ್ರ ಸರ್ಕಾರದೊಂದಿಗಿನ ಎಲ್ಲ ಮಾತುಕತೆಗಳೂ ವಿಫಲವಾಗಿರುವ ಹೊತ್ತಲ್ಲಿ, ದೆಹಲಿ ಸಿಎಂ ಮಾತುಕತೆ ಕುತೂಹಲ ಮೂಡಿಸಿದೆ.
ಪ್ರತಿಭಟನಾ ನಿರತ ರೈತರ ನಿಯೋಗವನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಕೃಷಿ ಕಾಯ್ದೆಗಳ ವಿರುದ್ಧ ಹರಿಹಾಯ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಮೂರೂ ಕೃಷಿ ಕಾಯ್ದೆಗಳು ರೈತರ ಪಾಲಿಗೆ ಡೆತ್ ವಾರೆಂಟ್ ಎಂದು ಹೇಳಿದರು. ದೇಶದ ಹಲವು ಭಾಗಗಳ ಅನ್ನದಾತರ ನಿದ್ದೆಗೆಡಿಸಿರುವ ಈ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು.
ಒಂದೊಮ್ಮೆ ಈ ನೂತನ ಕೃಷಿ ಕಾಯ್ದೆಗಳು ಜಾರಿಯಾದರೆ ಕೃಷಿ ಎಂಬುದು ಕೆಲವೇ ಕೆಲವು ಕಾರ್ಪೋರೇಟ್ಗಳ ಪಾಲಾಗುತ್ತದೆ. ಈ ಕೃಷಿ ಕಾಯ್ದೆಗಳ ಬಗ್ಗೆ ಇನ್ನಷ್ಟು ಸಮಗ್ರವಾಗಿ ಚರ್ಚಿಸುವ ಸಲುವಾಗಿ ಫೆ.28ರಂದು ಮೀರತ್ನಲ್ಲಿ ದೊಡ್ಡ ಮಟ್ಟದಲ್ಲಿ ಕಿಸಾನ್ ಪಂಚಾಯತ್ ಹಮ್ಮಿಕೊಳ್ಳಲಾಗಿದೆ. ಹಾಗೇ, ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.
ನಿಯೋಗದಲ್ಲಿದ್ದ ರಾಷ್ಟ್ರೀಯ ಜಾಟ್ ಮಹಾಸಭಾದ ಮುಖ್ಯಸ್ಥ ರೋಹಿತ್ ಜಾಖದ್ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ. ಹಳ್ಳಿಗಳಿಗೂ ಹೋಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Parliament: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಮಂಡಿ ವ್ಯವಸ್ಥೆಯನ್ನು ನಾಶ ಮಾಡಲಿದೆ: ರಾಹುಲ್ ಗಾಂಧಿ
Published On - 6:42 pm, Sun, 21 February 21