ಫೆ.25ರಂದು ನಡೆಯಬೇಕಿದ್ದ ಗೋ ವಿಜ್ಞಾನ ಪರೀಕ್ಷೆ ಮುಂದೂಡಿಕೆ; ವೆಬ್​ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡ ರಾಷ್ಟ್ರೀಯ ಕಾಮಧೇನು ಆಯೋಗ

ಕಾಮಧೇನು ಗೋ ವಿಜ್ಞಾನ ಪ್ರಚಾರ-ಪ್ರಸಾರ ಪರೀಕ್ಷೆ ಶುಲ್ಕ ರಹಿತವಾಗಿದ್ದು, ಪ್ರಾಥಮಿಕ, ಪ್ರೌಢಶಾಲೆಗಳ, ಹಿರಿಯ ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬಹುದು.

  • TV9 Web Team
  • Published On - 19:52 PM, 21 Feb 2021
ಫೆ.25ರಂದು ನಡೆಯಬೇಕಿದ್ದ ಗೋ ವಿಜ್ಞಾನ ಪರೀಕ್ಷೆ ಮುಂದೂಡಿಕೆ; ವೆಬ್​ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡ ರಾಷ್ಟ್ರೀಯ ಕಾಮಧೇನು ಆಯೋಗ
ಪ್ರಾತಿನಿಧಿಕ ಚಿತ್ರ

ದೆಹಲಿ: ಫೆ.25ರಂದು ದೇಶಾದ್ಯಂತ ಆನ್​ಲೈನ್ ಮೂಲಕ ನಡೆಯಬೇಕಿದ್ದ ರಾಷ್ಟ್ರೀಯ ಮಟ್ಟದ ಕಾಮಧೇನು ಗೋ ವಿಜ್ಞಾನ ಪ್ರಚಾರ-ಪ್ರಸಾರ ಪರೀಕ್ಷೆ (ಗೋ ವಿಜ್ಞಾನ ಪರೀಕ್ಷೆ) ಮುಂದೂಡಲ್ಪಟ್ಟಿದೆ. ಇನ್ನು ಯಾವ ತಾರೀಖಿನಂದು ನಡೆಯಲಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಇಂದು (ಫೆ.21) ನಡೆಯಬೇಕಿದ್ದ ಅಣಕು ಪರೀಕ್ಷೆ (Mock Examination) ಕೂಡ ನಡೆದಿಲ್ಲ. kamdhenugvppexam.org ವೆಬ್​ಸೈಟ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಮೊದಲು ಫೆ.25ರಂದು ಪರೀಕ್ಷೆ ನಿಗದಿಪಡಿಸಲಾಗಿತ್ತು. ಹಾಗೇ, ಗೋವು ವಿಜ್ಞಾನದ ಬಗ್ಗೆ ಅರಿವು ಹೆಚ್ಚಿಸುವ ಈ ಆನ್​ಲೈನ್​ ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳಿಗೆ ಉತ್ತೇಜಿಸುವಂತೆ, ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (UGC) ದೇಶದ ಸುಮಾರು 900 ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಪತ್ರ ಬರೆದಿತ್ತು.

ಯಾರು ಬರೆಯಬಹುದು?
ಕಾಮಧೇನು ಗೋ ವಿಜ್ಞಾನ ಪ್ರಚಾರ-ಪ್ರಸಾರ ಪರೀಕ್ಷೆ ಶುಲ್ಕ ರಹಿತವಾಗಿದ್ದು, ಪ್ರಾಥಮಿಕ, ಪ್ರೌಢಶಾಲೆಗಳ, ಹಿರಿಯ ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬಹುದು. ಸಾರ್ವಜನಿಕರೂ ಸಹ ಆಸಕ್ತಿ ಇರುವವರು ತೆಗೆದುಕೊಳ್ಳಬಹುದು. ಈ ಪರೀಕ್ಷೆ ಇಂಗ್ಲಿಷ್ ಸೇರಿ 11 ಪ್ರಾದೇಶಿಕ ಭಾಷೆಗಳಾದ ಹಿಂದಿ​, ಗುಜರಾತಿ, ಸಂಸ್ಕೃತ, ಪಂಜಾಬಿ, ಮರಾಠಿ, ಕನ್ನಡ, ಮಲಯಾಳಂ, ತಮಿಳು, ಮರಾಠಿ, ತೆಲುಗು, ಓಡಿಯಾ ಭಾಷೆಗಳಲ್ಲಿ ನಡೆಯಲಿದೆ. ಪರೀಕ್ಷೆ ಬಹು ಆಯ್ಕೆ (multiple-choice) ಪದ್ಧತಿಯಲ್ಲಿ ಇರಲಿದ್ದು ಫಲಿತಾಂಶ ರಾಷ್ಟ್ರೀಯ ಕಾಮಧೇನು ಆಯೋಗದ ವೆಬ್​ಸೈಟ್​ನಲ್ಲಿ (Rashtriya Kamdhenu Aayog) ಪ್ರಕಟಗೊಳ್ಳಲಿದೆ. ಗೋ ವಿಜ್ಞಾನ ಪರೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು ಮತ್ತು ತುಂಬ ಚೆನ್ನಾಗಿ ಬರೆದು, ಉತ್ತಮ ಫಲಿತಾಂಶ ಪಡೆದ ಅಭ್ಯರ್ಥಿಗಳಿಗೆ ಬಹುಮಾನವನ್ನೂ ನೀಡಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ತಿಳಿಸಿದೆ.

ಭಾರತದಲ್ಲಿರುವ ಎಲ್ಲರೂ ಹಸುಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಹಸುಗಳು ಕೇವಲ ಹಾಲು ಕೊಡಲು ಮಾತ್ರವಲ್ಲ, ಅದರಾಚೆಗೂ ಅನೇಕ ಉಪಯುಕ್ತತೆಗಳನ್ನು ನೀಡಬಲ್ಲವು. ಉದ್ಯಮ ಅವಕಾಶ ಸೃಷ್ಟಿಸಬಲ್ಲವು ಎಂಬ ಬಗ್ಗೆ ಅರಿವು ಮೂಡಿಸುವುದೇ ಪರೀಕ್ಷೆಯ ಉದ್ದೇಶ ಎಂದು ರಾಷ್ಟ್ರೀಯ ಕಾಮಧೇನು ಆಯೋಗ ತಿಳಿಸಿದೆ.

ಇದನ್ನೂ ಓದಿ: ಪಂಚಮಸಾಲಿ ಹೋರಾಟದ ಕುರಿತು ಸರ್ಕಾರದ ನಿಲುವು ತಿಳಿಸಲು ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ನಾಳೆ ಸುದ್ದಿಗೋಷ್ಠಿ