ಪಂಚಮಸಾಲಿ ಹೋರಾಟದ ಕುರಿತು ಸರ್ಕಾರದ ನಿಲುವು ತಿಳಿಸಲು ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ನಾಳೆ ಸುದ್ದಿಗೋಷ್ಠಿ
ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಸರ್ಕಾರದ ನಿಲುವು ತಿಳಿಸಲು ರಾಜ್ಯ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಸೋಮವಾರ (ಫೆ.22) ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಸರ್ಕಾರದ ನಿಲುವು ತಿಳಿಸಲು ರಾಜ್ಯ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಸೋಮವಾರ (ಫೆ.22) ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಳೆ ಸಚಿವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಿಜೆಪಿ ಶಾಸಕರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು, ರಾಜಕಾರಣಿಗಳು, ಮುಖಂಡರು ಹಾಗೂ ಜನಸಾಮಾನ್ಯರು ಇಂದು (ಫೆ. 21) ರಾಜ್ಯ ರಾಜಧಾನಿಯಲ್ಲಿ ಸಮಾವೇಶ ನಡೆಸಿದ್ದಾರೆ.
ಇಂದು (ಫೆ.21) ನಡೆದ ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ಮುರುಗೇಶ್ ನಿರಾಣಿ ಹಾಗೂ ಸಿ.ಸಿ. ಪಾಟೀಲ್ ಭಾಗವಹಿಸಿದ್ದರು. ಈ ನಡುವೆ, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡಬೇಕು ಎಂಬ ಆಗ್ರಹ ಜೋರಾಗಿದೆ. ನಾಳೆಯಿಂದ ಮಾರ್ಚ್ 4ನೇ ತಾರೀಖಿನವರೆಗೆ ಧರಣಿ ನಡೆಸುವುದಾಗಿ ಪಂಚಮಸಾಲಿಗರು ನಿರ್ಧಾರ ಕೈಗೊಂಡಿದ್ದಾರೆ. ಮೀಸಲಾತಿ ಹೋರಾಟ ಹಾಗೂ ಸರ್ಕಾರದ ಪೇಚಾಟದ ನಡುವೆ ನಾಳೆ ಸಚಿವರು, ಶಾಸಕರು ಏನು ಹೇಳಲಿದ್ದಾರೆ, ಯಾವ ನಿಲುವು ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಾಗಿದೆ.
ನಿರಾಣಿ ಭಾಷಣಕ್ಕೆ ಕೈ ಬೀಸಿ ವಿರೋಧ ವ್ಯಕ್ತಪಡಿಸಿದ ಜನ 2A ಮೀಸಲಾತಿ ಹೋರಾಟಕ್ಕೆ ಸರ್ಕಾರದ ಬೆಂಬಲವಿದೆ. 2A ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಡಿ ನಾವು ಮುಂದಿನ ದಿನಗಳಲ್ಲಿ ಮೀಸಲಾತಿ ಕೊಡಿಸುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ಸಮಾವೇಶದಲ್ಲಿ ಹೇಳಿದ್ದರು. ಮುರುಗೇಶ್ ನಿರಾಣಿ ಈ ಹೇಳಿಕೆಗೆ ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾವೇಶಕ್ಕೆ ಸೇರಿದ್ದ ಜನರು ಕೈ ಬೀಸಿ ವಿರೋಧ ವ್ಯಕ್ತಪಡಿಸಿದರು. 70 ವರ್ಷದಿಂದ ಹಲವು ಸರ್ಕಾರಗಳು ಬಂದು ಹೋಗಿದ್ದವು. ಆಗ ನೀವ್ಯಾರು ಕೈ ತೋರಿಸಲಿಲ್ಲ, ಈಗ ಕೈ ತೋರಿಸುತ್ತೀರಾ? ಎಂದು ಜನರು ಕೈ ತೋರಿಸಿದ್ದಕ್ಕೆ ಸಚಿವ ಮುರುಗೇಶ್ ನಿರಾಣಿ ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ.
ಈ ರಾಜ್ಯದಲ್ಲಿ ಹಲವು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ನಮಗೆ 3B ಕೊಟ್ಟ ಧೀಮಂತ ನಾಯಕರು ಯಡಿಯೂರಪ್ಪ. ಹೀಗಾಗಿ ನಾವು ಈಗ 2A ಮೀಸಲಾತಿಯನ್ನ ಕೇಳುತ್ತಿದ್ದೇವೆ. 2A ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ, ವಿಚಾರವನ್ನು ಹಿಂದುಳಿದ ವರ್ಗಗಳ ಆಯೋಗದ ಪರಿಶೀಲನೆಗೆ ಶಿಫಾರಸು ಮಾಡಿದ್ದಾರೆ. ಹೇಗೆಂದರೆ ಹಾಗೆ ಮೀಸಲಾತಿ ನೀಡುವುದಕ್ಕೆ ಬರುವುದಿಲ್ಲ. ಮೀಸಲಾತಿ ನೀಡಿ ಕೋರ್ಟ್‌ಗೆ ಹೋದರೆ ತಡೆಯಾಜ್ಞೆ ತರುತ್ತಾರೆ. ಹೀಗಾಗಿ ಅಧ್ಯಯನ ನಡೆಸಿ ಮೀಸಲಾತಿ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಕ್ರಮ ಕೈಗೊಳ್ತಾರೆ ಎಂದು ವಾರ್ತಾ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದರು.
ಇದನ್ನೂ ಓದಿ: ಪಂಚಮಸಾಲಿ ಸಮಾವೇಶ: ಸರ್ಕಾರದ ಮೇಲೆ ವಿಶ್ವಾಸ ಇಡಿ ಎಂದ ಸಚಿವರು, ಸಭಿಕರ ವಿರೋಧ
ಬೆಂಗಳೂರಿನಲ್ಲಿ ಪಾದಯಾತ್ರೆ ಸದ್ದು; ಸಂಜೆ 7ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿ
Published On - 7:36 pm, Sun, 21 February 21