ಪಂಚಮಸಾಲಿ ಸಮಾವೇಶ: ಸರ್ಕಾರದ ಮೇಲೆ ವಿಶ್ವಾಸ ಇಡಿ ಎಂದ ಸಚಿವರು, ಸಭಿಕರ ವಿರೋಧ

2A ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಡಿ ನಾವು ಮುಂದಿನ ದಿನಗಳಲ್ಲಿ ಮೀಸಲಾತಿ ಕೊಡಿಸುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಪಂಚಮಸಾಲಿ ಸಮಾವೇಶ: ಸರ್ಕಾರದ ಮೇಲೆ ವಿಶ್ವಾಸ ಇಡಿ ಎಂದ ಸಚಿವರು, ಸಭಿಕರ ವಿರೋಧ
ಸಿ.ಸಿ. ಪಾಟೀಲ್ ಹಾಗೂ ಮುರುಗೇಶ್ ನಿರಾಣಿ
Follow us
TV9 Web
| Updated By: ganapathi bhat

Updated on:Apr 06, 2022 | 7:49 PM

ಬೆಂಗಳೂರು: ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ ಸ್ವಾಮೀಜಿಗಳ ಪಾದಕ್ಕೆ ನನ್ನ ನಮನ. ಬಸವ ಜಯಮೃತ್ಯುಂಜಯಶ್ರೀಗಳು ಐತಿಹಾಸಿಕ ಪಾದಯಾತ್ರೆ ಮಾಡಿದ್ದಾರೆ. ಶ್ರೀಗಳು ಸುಮಾರು 700 ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಪಾದಯಾತ್ರೆ ವೇಳೆ ಶ್ರೀಗಳಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಅದಕ್ಕಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸುವಂತೆ ಕಳೆದ ಕೆಲವಾರು ದಿನಗಳಿಂದ ಹೋರಾಟ ನಡೆಯುತ್ತಿದೆ. ಇಂದು (ಫೆ.21) ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಸಮಾರಂಭ ಆಯೋಜಿಸಲಾಗಿದೆ. ಈ ವೇಳೆ ಸಿ.ಸಿ. ಪಾಟೀಲ್ ಹಾಗೂ ಮುರುಗೇಶ್ ನಿರಾಣಿ ಮಾತನಾಡಿದರು.

ಈ ನಡುವೆ ಸಮಾವೇಶಕ್ಕೆ ಸೇರಿದ್ದವರು ವೇದಿಕೆ ಬಳಿ ಜೋರಾಗಿ ಕೂಗಿದ್ದರಿಂದ ಸಿ.ಸಿ.ಪಾಟೀಲ್ ಸಿಟ್ಟಾದರು. ಶಿಳ್ಳೆ, ಚಪ್ಪಾಳೆ ತಟ್ಟಿ ಪಾದಯಾತ್ರೆಯ ಪಾವಿತ್ರ್ಯತೆ ಹಾಳು ಮಾಡಬೇಡಿ ಎಂದು ಜನರನ್ನು ಕೇಳಿಕೊಂಡರು.

ಈ ರಾಜ್ಯದಲ್ಲಿ ಹಲವು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ನಮಗೆ 3B ಕೊಟ್ಟ ಧೀಮಂತ ನಾಯಕರು ಯಡಿಯೂರಪ್ಪ. ಹೀಗಾಗಿ ನಾವು ಈಗ 2A ಮೀಸಲಾತಿಯನ್ನ ಕೇಳುತ್ತಿದ್ದೇವೆ. 2A ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ, ವಿಚಾರವನ್ನು ಹಿಂದುಳಿದ ವರ್ಗಗಳ ಆಯೋಗದ ಪರಿಶೀಲನೆಗೆ ಶಿಫಾರಸು ಮಾಡಿದ್ದಾರೆ. ಹೇಗೆಂದರೆ ಹಾಗೆ ಮೀಸಲಾತಿ ನೀಡುವುದಕ್ಕೆ ಬರುವುದಿಲ್ಲ. ಮೀಸಲಾತಿ ನೀಡಿ ಕೋರ್ಟ್‌ಗೆ ಹೋದರೆ ತಡೆಯಾಜ್ಞೆ ತರುತ್ತಾರೆ. ಹೀಗಾಗಿ ಅಧ್ಯಯನ ನಡೆಸಿ ಮೀಸಲಾತಿ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಕ್ರಮ ಕೈಗೊಳ್ತಾರೆ ಎಂದು ವಾರ್ತಾ ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.

ನಿರಾಣಿ ಭಾಷಣಕ್ಕೆ ಕೈ ಬೀಸಿ ವಿರೋಧ ವ್ಯಕ್ತಪಡಿಸಿದ ಜನ 2A ಮೀಸಲಾತಿ ಹೋರಾಟಕ್ಕೆ ಸರ್ಕಾರದ ಬೆಂಬಲವಿದೆ. 2A ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಡಿ ನಾವು ಮುಂದಿನ ದಿನಗಳಲ್ಲಿ ಮೀಸಲಾತಿ ಕೊಡಿಸುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಮುರುಗೇಶ್ ನಿರಾಣಿ ಈ ಹೇಳಿಕೆಗೆ ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾವೇಶಕ್ಕೆ ಸೇರಿದ್ದ ಜನರು ಕೈ ಬೀಸಿ ವಿರೋಧ ವ್ಯಕ್ತಪಡಿಸಿದರು.

70 ವರ್ಷದಿಂದ ಹಲವು ಸರ್ಕಾರಗಳು ಬಂದು ಹೋಗಿದ್ದವು. ಆಗ ನೀವ್ಯಾರು ಕೈ ತೋರಿಸಲಿಲ್ಲ, ಈಗ ಕೈ ತೋರಿಸುತ್ತೀರಾ? ಎಂದು ಜನರು ಕೈ ತೋರಿಸಿದ್ದಕ್ಕೆ ಸಚಿವ ಮುರುಗೇಶ್ ನಿರಾಣಿ ಸಿಟ್ಟಿನಿಂದ ಪ್ರತಿಕ್ರಿಯಿಸಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್ ಘೋಷಣೆ ಸಮಾವೇಶದ ಕೊನೆಗೆ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್ ಹೆಸರು ಘೋಷಣೆಯಾಗಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ವಿಚಾರವನ್ನು ಸಮಾವೇಶದಲ್ಲಿ ಅಧಿಕೃತವಾಗಿ ಘೋಷಿಸಿದರು.

ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟ ಕೈಗೊಂಡಿದೆ. ಸಮಾವೇಶದಲ್ಲಿ ಕಾಂಗ್ರೆಸ್, ಬಿಜೆಪಿ ಎಂಬ ಪಕ್ಷ ಬೇಧವಿಲ್ಲದೆ ಉಭಯ ಪಕ್ಷಗಳ ಶಾಸಕರು, ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಲವು ಸಂಘಟನೆಗಳು, ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದಶ್ರೀ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ್, ಸಚಿವ ಮುರುಗೇಶ್ ನಿರಾಣಿ ಹಾಗೂ ಸಿ.ಸಿ.ಪಾಟೀಲ್ ಮಾತನಾಡಿದರು.

ಇದನ್ನೂ ಓದಿ: ನನಗೆ ಸಮಾಜವೇ ತಂದೆ-ತಾಯಿ, ಸಮಾಜವೇ ಗುರು: ಪಂಚಮಸಾಲಿ ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ

ಪಂಚಮಸಾಲಿ ಸಮಾವೇಶ: ಯಾರೂ ಕೂಡ ರಾಜ್ಯ ಸರ್ಕಾರಕ್ಕೆ ಗಡುವು ನೀಡಬಾರದು: ಕೈಮುಗಿದು ಕೇಳಿಕೊಂಡ ಆರ್. ಅಶೋಕ್

Published On - 2:47 pm, Sun, 21 February 21