ಪಂಚಮಸಾಲಿ ಸಮಾವೇಶ: ಯಾರೂ ಕೂಡ ರಾಜ್ಯ ಸರ್ಕಾರಕ್ಕೆ ಗಡುವು ನೀಡಬಾರದು: ಕೈಮುಗಿದು ಕೇಳಿಕೊಂಡ ಆರ್. ಅಶೋಕ್
ಸಮುದಾಯವನ್ನು 3Bಗೆ ಸೇರಿಸಿದ್ದೇ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ. ಹಾಗಾಗಿ ಈಗ ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸಿ ಅಂತ ಕೇಳುವ ಅವಕಾಶ ಸಿಕ್ಕಿದೆ. ಆದರೆ, ಸ್ವಾಮೀಜಿಗಳು ಒತ್ತಡ ಹಾಕುವುದು ಸರಿಯಲ್ಲ.
ಬೆಂಗಳೂರು: ಪಂಚಮಸಾಲಿ ಮೀಸಲಾತಿ ನೀಡಲು ಸ್ವಾಮೀಜಿ ಗಡುವು ನೀಡಿದ ಹಿನ್ನೆಲೆಯಲ್ಲಿ, ಸ್ವಾಮೀಜಿಗಳ ಗಡುವಿಗೆ ಸರ್ಕಾರದ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀರಶೈವ ಲಿಂಗಾಯತ ಸಚಿವರು, ಶಾಸಕರು ಅಸಮಾಧಾನ ತೋರಿದ್ದಾರೆ. ಈ ಬಗ್ಗೆ ಸಚಿವ ಸಿ.ಸಿ.ಪಾಟೀಲ್ ನಿವಾಸದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಸಚಿವರು ಬೇಸರ ಹೊರಹಾಕಿದ್ದಾರೆ. ಸ್ವಾಮೀಜಿಗಳು ಸರ್ಕಾರಕ್ಕೆ ಒತ್ತಡ ಹೇರುವುದು ಸರಿಯಲ್ಲ. ಸರ್ಕಾರ ಕಾನೂನು ಚೌಕಟ್ಟಿನ ಒಳಗೆ ಕೆಲಸ ಮಾಡಬೇಕು. ಸಂವಿಧಾನದ ಚೌಕಟ್ಟಿನ ಒಳಗೆ ಕೆಲಸ ಮಾಡಬೇಕಾಗುತ್ತದೆ. ಈ ವೇಳೆ ಸರ್ಕಾರಕ್ಕೆ ಗಡುವು ಕೊಡುವುದು ಒಳ್ಳೆಯದಲ್ಲ ಎಂದು ವೀರಶೈವ ಲಿಂಗಾಯತ ಶಾಸಕ, ಸಚಿವರು ಅಸಮಾಧಾನ ತೋರಿದ್ದಾರೆ.
ಸಮುದಾಯವನ್ನು 3Bಗೆ ಸೇರಿಸಿದ್ದೇ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ. ಹಾಗಾಗಿ ಈಗ ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸಿ ಅಂತ ಕೇಳುವ ಅವಕಾಶ ಸಿಕ್ಕಿದೆ. ಆದರೆ, ಸ್ವಾಮೀಜಿಗಳು ಒತ್ತಡ ಹಾಕುವುದು ಸರಿಯಲ್ಲ. ಸ್ವಾಮೀಜಿಗಳಿಗೆ ಪರಿಸ್ಥಿತಿಯ ಮನವರಿಕೆ ಮಾಡುತ್ತೇವೆ. ಸ್ವಾಮೀಜಿಗಳು ಏನು ಹೇಳುತ್ತಾರೆ ಎಂಬುದನ್ನು ಸಿಎಂಗೆ ತಿಳಿಸುತ್ತೇವೆ. ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲು ಆಗಲ್ಲ. ಕಾನೂನು, ಸಂವಿಧಾನದ ಚೌಕಟ್ಟಿನೊಳಗೆ ನಿರ್ಧಾರ ಮಾಡಬೇಕು. ಸ್ವಾಮೀಜಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೂಡ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಮೀಸಲಾತಿಗೆ ಇನ್ನಷ್ಟು ಕಾಲ ಕಾಯುವುದು ಅನಿವಾರ್ಯ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟ ಸಂಬಂಧ ಮಾತನಾಡಿರುವ ಸಿ.ಸಿ. ಪಾಟೀಲ್, ಮೀಸಲಾತಿಗೆ ರಾಜ್ಯ ಸರ್ಕಾರದಿಂದ ಮುದ್ರೆ ಬೀಳುವುದಿಲ್ಲ. ಮೀಸಲಾತಿಗೆ ಇನ್ನಷ್ಟು ಕಾಲ ಕಾಯುವುದು ಅನಿವಾರ್ಯ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ಮಾಡುತ್ತಿದೆ. ಅಧ್ಯಯನ ಮುಗಿಯೋವರೆಗೆ ನಿರ್ಧಾರ ಅಸಾಧ್ಯ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಸಭೆ ನಡೆಸಿದೆ ಎಂದು ಬೆಂಗಳೂರಿನಲ್ಲಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಚಿವ ಸಿ.ಸಿ.ಪಾಟೀಲ್ ಪ್ರತ್ಯುತ್ತರ ನೀಡಿದ್ದಾರೆ. ರಾಜಕಾರಣ ಮಾಡಲು ನಮಗೂ ಬರುತ್ತದೆ. ನಾವು ಕೂಡ 13 ಶಾಸಕರು, ಇಬ್ಬರು ಸಚಿವರು ಇದ್ದೇವೆ. ನಮಗೆ ರಾಜಕೀಯ ಮಾಡುವುದಕ್ಕೆ ಬರುವುದಿಲ್ವಾ? ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಪಂಚಮಸಾಲಿ ಸಮುದಾಯ 2A ಮೀಸಲಾತಿಗೆ ಆಗ್ರಹಿಸಿ ಸಮಾವೇಶ ನಡೆಸುತ್ತಿದೆ. ಈ ಕುರಿತು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಯಾರೂ ಕೂಡ ರಾಜ್ಯ ಸರ್ಕಾರಕ್ಕೆ ಗಡುವು ನೀಡಬಾರದು. ನಾಳೆ ಒಕ್ಕಲಿಗರು ಕೂಡ ಮೀಸಲಾತಿಗಾಗಿ ಸಭೆ ಕರೆದಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿಗೂ ಮನವಿ ಮಾಡಿದ್ದೇನೆ. ಮೆರವಣಿಗೆ ಮಾಡೋದು ಬೇಡ ಎಂದು ಮನವಿ ಮಾಡಿದ್ದೇನೆ. ಬಡವರು, ಶೋಷಿತರಿಗಾಗಿ ಇರುವ ಮೀಸಲಾತಿ ಹೀಗೆ ಕೇಳಬಾರದು ಎಂದು ಆರ್. ಅಶೋಕ್ ಸ್ವಾಮೀಜಿಗಳಲ್ಲಿ ಕೈಮುಗಿದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ಚಾಲನೆ: ಸಮುದಾಯದ ಸ್ವಾಮೀಜಿಗಳು, ರಾಜಕೀಯ ಗಣ್ಯರು ಭಾಗಿ
Published On - 12:47 pm, Sun, 21 February 21