ಎರಡು ವರ್ಷ ಕಳೆದರೂ ಚಾಲನಾ ತರಬೇತಿ ಕೇಂದ್ರಕ್ಕೆ ಸಿಕ್ಕಿಲ್ಲ ಚಾಲನೆ: ಹೋರಾಟದ ಎಚ್ಚರಿಕೆ ನೀಡಿದ ಸ್ಥಳೀಯರು

ಜಿಲ್ಲೆಯ ಹೊಳಲ್ಕೆರೆ ಪಟ್ಟಣ ಬಳಿಯ ಬಸಾಪುರ ಕ್ರಾಸ್ ಬಳಿ ಕಳೆದ ಎರಡು ವರ್ಷಗಳ ಹಿಂದೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಚಾಲನಾ ತರಬೇತಿ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಆಗಿದೆ.

ಎರಡು ವರ್ಷ ಕಳೆದರೂ ಚಾಲನಾ ತರಬೇತಿ ಕೇಂದ್ರಕ್ಕೆ ಸಿಕ್ಕಿಲ್ಲ ಚಾಲನೆ: ಹೋರಾಟದ ಎಚ್ಚರಿಕೆ ನೀಡಿದ ಸ್ಥಳೀಯರು
ಚಾಲನಾ ತರಬೇತಿ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ
Follow us
sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 22, 2021 | 12:05 AM

ಚಿತ್ರದುರ್ಗ: ನಿರುದ್ಯೋಗ ಎಂಬುದು ದೇಶದ ಯುವ ಪೀಳಿಗೆಗೆ ಪೆಡಂಭೂತವಾಗಿ ಕಾಡುತ್ತಿದೆ‌. ಲಕ್ಷಾಂತರ ಜನ ಯುವಕರು ಕೆಲಸವಿಲ್ಲದೆ ಅಲೆಯುವ ಸಂಕಷ್ಟ ಎದುರಾಗಿರುವುದು ರಹಸ್ಯವೇನಲ್ಲ. ಆದರೆ ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಯುವಕರಿಗೆ ಉದ್ಯೋಗ ಕಲ್ಪಿಸುವ ಏಣಿಯಾಗಬೇಕಿದ್ದ ತರಬೇತಿ ಕೇಂದ್ರಕ್ಕೆ ಚಾಲನೆ ನೀಡದೆ ನಿರ್ಲಕ್ಷ ತೋರಲಾಗಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಾಲಕ ತರಬೇತಿ ಘಟಕ ನಿರ್ಮಾಣ ಆಗಿ ಎರಡು ವರ್ಷ ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚಾಲನೆ ಸಿಕ್ಕಿಲ್ಲ. ಚಾಲಕ ತರಬೇತಿಗಾಗಿ ಅರ್ಜಿ ಸಲ್ಲಿಸಿದ ಯುವಕರು ನಿತ್ಯ ಅಲೆಯುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನಗಳು ಆಗುತ್ತಿಲ್ಲ. ಇದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಜಿಲ್ಲೆಯ ಹೊಳಲ್ಕೆರೆ ಪಟ್ಟಣ ಬಳಿಯ ಬಸಾಪುರ ಕ್ರಾಸ್ ಬಳಿ ಕಳೆದ ಎರಡು ವರ್ಷಗಳ ಹಿಂದೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಚಾಲನಾ ತರಬೇತಿ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಆಗಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಈವರೆಗೆ ಕೇಂದ್ರಕ್ಕೆ ಚಾಲನೆ ಸಿಕ್ಕಿಲ್ಲ. ಹೀಗಾಗಿ, ಯುವಕರಿಗೆ ಉದ್ಯೋಗ ಕಲ್ಪಿಸುವ ಕೇಂದ್ರ ಧೂಳು ತುಂಬಿ ಹಾಳಾಗುತ್ತಿದೆ. ಪರಿಣಾಮ ಅನೇಕ ಯುವಕರು ಉದ್ಯೋಗದಿಂದ ವಂಚಿತರಾಗಿದ್ದು ಇದಕ್ಕೆ ಯಾರು ಹೊಣೆ ಎಂಬುದು ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಅಭಿವೃದ್ಧಿ ವಿಚಾರದಲ್ಲೂ ರಾಜಕಾರಣ ಮಾಡುತ್ತ ಇದೇ ರೀತಿ ಮುಂದುವರೆದರೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಚಾಲನಾ ತರಬೇತಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಯುವಕರು

ಈ ಬಗ್ಗೆ ಹೊಳಲ್ಕೆರೆಯ ಬಿಜೆಪಿ ಶಾಸಕ ಹಾಗೂ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಎಂ.ಚಂದ್ರಪ್ಪರವರ ಬಳಿ ಕೇಳಿದಾಗ ಈ ತರಬೇತಿ ಕೇಂದ್ರ ಮತ್ತು ಸಾರಿಗೆ ಬಸ್ ನಿಲ್ದಾಣ ಎರಡೂ‌ ಏಕ ಕಾಲಕ್ಕೆ ಉದ್ಘಾಟನೆ ಮಾಡಬೇಕೆಂಬ ಉದ್ದೇಶವಿದೆ. ಆದರೆ ಕಾಂಗ್ರೆಸ್​ನ​ ಕೆಲ ಪುರಸಭೆ ಸದಸ್ಯರು ಇಲ್ಲದ ಸಮಸ್ಯೆ ಸೃಷ್ಟಿಸಿ ಬಸ್ ನಿಲ್ದಾಣ ಕಾರ್ಯಕ್ಕೆ ಅಡ್ಡಗಾಲು ಹಾಕಿದ್ದರು. ಇದೀಗ ಕೋರ್ಟ್​ನಲ್ಲಿ ಸಮಸ್ಯೆ ಬಗೆಹರಿದಿದೆ. ನಾವೇನು ರಾಜಕೀಯ ಕಾರಣಕ್ಕೆ ವಿಳಂಬ ಮಾಡಿಲ್ಲ. ಕಳೆದ ಅವಧಿ ಹೊಳಲ್ಕೆರೆಯ ಕಾಂಗ್ರೆಸ್ ಶಾಸಕರಾಗಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಈ ತರಬೇತಿ ಕೇಂದ್ರವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಸದ್ಯದಲ್ಲೇ ಬಸ್ ನಿಲ್ದಾಣ ಮತ್ತು ತರಬೇತಿ ಕೇಂದ್ರ ಉದ್ಘಾಟಿಸುತ್ತೇವೆ ಎಂದು ತಿಳಿಸಿದರು.

ಚಾಲನಾ ತರಬೇತಿ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ

ನಿರ್ಮಾಣವಾಗಿ ಎರಡು ವರ್ಷ ಕಳೆದರು ಚಾಲನಾ ತರಬೇತಿ ಕೇಂದ್ರಕ್ಕೆ ಚಾಲನೆ ಸಿಕ್ಲಿಲ್ಲ. ಹೀಗಾಗಿ, ತರಬೇತಿಗೆ ಅರ್ಜಿ‌ಸಲ್ಲಿಸಿದ ಸಾವಿರಾರು ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಸರ್ಕಾರದ ಕೋಟ್ಯಾಂತರ ರೂಪಾಯಿ‌ ಹಣ ವ್ಯರ್ಥವಾದಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಸದಸ್ಯರಿಗೆ ಇಂದಿನಿಂದ ತರಬೇತಿ: ಅಧ್ಯಕ್ಷರು, ಉಪಾಧ್ಯಕ್ಷರಿಗೆ ಪ್ರತ್ಯೇಕ ತರಬೇತಿ- ಸಚಿವ ಈಶ್ವರಪ್ಪ

ಇದನ್ನೂ ಓದಿ:ಧಾರವಾಡ ಜಿಲ್ಲೆಯ ರಂಗಾಯಣದ ರಂಗ ನವಮಿ ನಾಟಕೋತ್ಸವಕ್ಕೆ ಚಾಲನೆ