ಬೆಂಗಳೂರು ಜೈನ್ ವಿವಿಯಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ-2022 ಕ್ರೀಡಾಕೂಟ; ಯಡಿಯೂರಪ್ಪ ಘೋಷಣೆ

ಕೇಂದ್ರ ಸರ್ಕಾರದಿಂದ ಖೇಲೋ 2ನೇ ಆವೃತ್ತಿ ಘೋಷಣೆ ಆಗಿದೆ. ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಹೇಳಿದ್ದಾರೆ.

  • TV9 Web Team
  • Published On - 20:33 PM, 21 Feb 2021
ಬೆಂಗಳೂರು ಜೈನ್ ವಿವಿಯಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ-2022 ಕ್ರೀಡಾಕೂಟ; ಯಡಿಯೂರಪ್ಪ ಘೋಷಣೆ
ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಖೇಲೋ ಇಂಡಿಯಾ ಯುನಿವರ್ಸಿಟಿ-2022 ಕ್ರೀಡಾಕೂಟ ಬೆಂಗಳೂರಿನ ಜೈನ್ ವಿವಿಯಲ್ಲಿ ನಡೆಯಲಿದೆ. 17 ಕ್ರೀಡೆಗಳಲ್ಲಿ 6 ಸಾವಿರ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಹಾಗೂ ಯಡಿಯೂರಪ್ಪ ಇಂದು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ ಖೇಲೋ 2ನೇ ಆವೃತ್ತಿ ಘೋಷಣೆ ಆಗಿದೆ. ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಈ ಬಗ್ಗೆ ಚರ್ಚಿಸಲು ಕ್ರೀಡಾ ಸಚಿವ ಕಿರಣ್ ರಿಜಿಜು ಬೆಂಗಳೂರಿಗೆ ಬಂದಿದ್ದರು. ಅವರನ್ನು ಬಹಳ ಸಂತೋಷದಿಂದ ಸ್ವಾಗತಿಸುತ್ತೇನೆ. ಜೈನ್ ವಿವಿಯಲ್ಲಿ ಖೇಲೋ ಇಂಡಿಯಾದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ಊಟೋಪಚಾರ, ಆತಿಥ್ಯ, ಇತರೆ ಸೌಕರ್ಯಗಳ ಹೊಣೆ ರಾಜ್ಯ ಸರ್ಕಾರ ಮತ್ತು ವಿವಿಗಳು ನೋಡಿಕೊಳ್ಳಲಿವೆ ಎಂದರು.

ಕ್ರೀಡೆಯಲ್ಲಿ ಕರ್ನಾಟಕ ಬೆಳವಣಿಗೆ ಕಾಣುತ್ತಿದೆ; ಕಿರಣ್​ ರಿಜಿಜು
ಕರ್ನಾಟಕ ಕ್ರೀಡೆಯಲ್ಲಿ ಸಮರ್ಥವಾಗಿ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ಕ್ರೀಡೆಗೆ ಇರುವ ವ್ಯವಸ್ಥೆ ಉಳಿದ ಜಿಲ್ಲೆಗಳಲ್ಲೂ ಆಗಬೇಕಿದೆ. ಕ್ರೀಡೆಯಲ್ಲಿ ಭಾರತ ಸೂಪರ್ ಪವರ್ ಆಗಿರಬೇಕು ಅನ್ನೋದೇ ನನ್ನ ಆಸೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಖೇಲೋ ಇಂಡಿಯಾ ಎರಡನೇ ಆವೃತ್ತಿಯನ್ನು ನಾವು ಘೋಷಣೆ ಮಾಡುತ್ತಿದ್ದೇವೆ. ದೂರದೃಷ್ಟಿ ಇಟ್ಟುಕೊಂಡು ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಗೇಮ್ಸ್ ತಂದಿದೆ. ಖೇಲೋ ಇಂಡಿಯಾ ಎರಡನೇ ಆವೃತ್ತಿಯನ್ನು ಕರ್ನಾಟಕಕ್ಕೆ ನೀಡುತ್ತಿದ್ದೇವೆ. ಜೈನ್ ಯುನಿವರ್ಸಿಟಿಯಲ್ಲಿ ಖೆಲೋ ಇಂಡಿಯಾ ನಡೆಯಲಿದೆ. ಕರ್ನಾಟಕ ಹಾಗೂ ಜೈನ್ ಯುನಿವರ್ಸಿಟಿ ಅತ್ಯಂತ ಸಮರ್ಥವಾಗಿ ಖೇಲೋ ಇಂಡಿಯಾ ನಿಭಾಯಿಸಲಿದೆ ಎನ್ನುವ ವಿಶ್ವಾಸವಿದೆ ಎಂದರು.

ಕರ್ನಾಟಕದಲ್ಲಿ ಅತ್ಯಂತ ಒಳ್ಳೆಯ ದಿನವನ್ನು ನಾನು ಕಳೆದಿದ್ದೇನೆ. ಯಡಿಯೂರಪ್ಪ ಅತ್ಯಂತ ಸಮರ್ಥ ಕ್ರಿಯಾಶೀಲ ಮುಖ್ಯಮಂತ್ರಿ ಆಗಿದ್ದಾರೆ. ಕ್ರೀಡೆಗೆ ಸಂಬಂಧಿಸಿ ಶಿವಮೊಗ್ಗದಲ್ಲಿ ₹ 50 ಕೋಟಿ ಯೋಜನೆ ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದು ಕಿರಣ್​ ರಿಜಿಜು ಹೇಳಿದ್ದಾರೆ.

ಖೇಲೋ ಇಂಡಿಯಾ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ ಕಿರಣ್​, ಭಾರತ ದೊಡ್ಡ ದೇಶ. ಇಲ್ಲಿ ಹೆಚ್ಚಿನ ಯುವಕರನ್ನು ಹೊಂದಿದ್ದೇವೆ. ಕನಿಷ್ಠ ಒಲಂಪಿಕ್ಸ್​​ನಲ್ಲಿತೃಪ್ತಿಕರವಾಗುವ ಮಟ್ಟಕ್ಕೆ ನಾವು ಬೆಳೆಯಬೇಕಿದೆ. ಆದರೆ ಅದಕ್ಕೆ ನಾವು ಹೆಚ್ಚಿನ ಗಮನ ಹರಿಸಿರಲಿಲ್ಲ. ಅದಕ್ಕಾಗಿಯೇ ಖೇಲೋ‌ ಇಂಡಿಯಾ ಪ್ರಾರಂಭಿಸಿದ್ದೇವೆ. ಮಲಕಂ, ಕಳರಿಯಪಟ್ಟು, ಯೋಗಾಸನ ಕೂಡ ನಾವು ಕ್ರೀಡೆ ಅಡಿಯಲ್ಲಿ ತಂದಿದ್ದೇವೆ ಎಂದರು.

ಇದನ್ನೂ ಓದಿ: ಶಿವಮೊಗ್ಗ: ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರ ಸಚಿವ ಕಿರಣ್​ ರಿಜಿಜು ಶಂಕುಸ್ಥಾಪನೆ