ಶಿವಮೊಗ್ಗ: ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಶಂಕುಸ್ಥಾಪನೆ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನೆಹರೂ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಶಿವಮೊಗ್ಗ: ಜಿಲ್ಲೆಯ ಸಹ್ಯಾದ್ರಿ ಕಾಲೇಜಿನಲ್ಲಿ ನೆಹರೂ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯದ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕ್ರೀಡಾ ಸಚಿವ ನಾರಾಯಣ್ ಗೌಡ ಮಾತನಾಡಿ, ಅಧ್ಯಕ್ಷತೆ ವಹಿಸಿರುವ ಈಶ್ವರಪ್ಪ ಹೆಸರು ಹೇಳುವ ಬದಲಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದರು. ಭಾಷಣದ ಉದ್ದಕ್ಕೂ ಬಿಎಸ್ವೈ ಅವರ ಇಬ್ಬರು ಪುತ್ರರಾದ ಬಿ.ವೈ.ರಾಘವೇಂದ್ರ ಮತ್ತು ವಿಜಯೇಂದ್ರ ಅವರನ್ನು ಹೊಗಳಿದರು.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿ, ನೆಹರೂ ಕ್ರೀಡಾಂಗಣದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹ 22 ಕೋಟಿ ನೀಡಿದೆ. ನಾನು ಕೇಂದ್ರ ಕ್ರೀಡಾ ಇಲಾಖೆಯಿಂದ ₹ 50 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದೇನೆ. ಒಳ ಕ್ರೀಡಾಂಗಣವು ವಿವಿಧ ಕ್ರೀಡೆಗಳಿಗೆ ಉಪಯೋಗ ಆಗಬೇಕು. ಕರ್ನಾಟಕದಲ್ಲಿ ಬಿಎಸ್ವೈ ನೇತೃತ್ವದ ಉತ್ತಮ ರಾಜ್ಯ ಸರ್ಕಾರವಿದೆ. ಸದಾ ಅಭಿವೃದ್ಧಿಗೆ ಬಿಎಸ್ವೈ ಗಮನ ನೀಡುತ್ತಾರೆ. ಒಲಂಪಿಕ್ಸ್ನಲ್ಲಿ ದೇಶವು ಹೆಚ್ಚು ಹೆಚ್ಚು ಗೋಲ್ಡ್ ಮೆಡಲ್ ಗೆಲ್ಲಬೇಕು. ಬರುವ ದಿನದಲ್ಲಿ ಒಲಂಪಿಕ್ಸ್ ಕ್ರೀಡೆಯ ಆತಿಥ್ಯದ ಹೊಣೆ ಭಾರತಕ್ಕೆ ಸಿಗಲಿದೆ. ಈಗಾಗಲೇ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಜೊತೆ ಚರ್ಚಿಸಲಾಗಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಕೆ. ಎಸ್ ಈಶ್ವರಪ್ಪ ಮಾತನಾಡಿ, ಕ್ರೀಡೆಗೆ ಏನು ಬೇಕು ಎಂದು ಈವರೆಗೂ ಕಾಲೇಜು ಆಡಳಿತ ಮಂಡಳಿ ಕೇಳಿಲ್ಲ. ಸದ್ಯ, ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ಹಾಳಾಗಿರುವ ಕ್ರೀಡಾಂಗಣ ಅಸ್ಥಿಪಂಜರವಾಗಿ ಸತ್ತ ಹೆಣದಂತಾಗಿದೆ. ಕೂಡಲೇ ಟೆಂಡರ್ ಕರೆದು ಕ್ರೀಡಾಂಗಣ ಅಭಿವೃದ್ಧಿ ಮಾಡಿಸಿ ಎಂದು ಖಡಕ್ ಸೂಚನೆ ನೀಡಿದರು.
ಇದನ್ನೂ ಓದಿ: ಕ್ರೀಡಾ ಸಾಧಕರ ಕಥನ India’s Sporting Victories ಲೋಕಾರ್ಪಣೆ