ಕೆ.ಆರ್.ಪೇಟೆ: ದೇಗುಲದ ಸಮೀಪ ಮೂಕವೇದನೆ ಅನುಭವಿಸುತ್ತಿರುವ ಕರುಗಳು; ಯಾರು ಹೊಣೆ?
ಕರುಗಳ್ಳರ ಹಾವಳಿ ಸಹ ಇಲ್ಲಿದೆ. ಇಲ್ಲಿದ್ದ ಹಲವು ಕರುಗಳನ್ನ ಕಳ್ಳರು ರಾತ್ರೊರಾತ್ರಿ ಹೊತ್ತೊಯ್ದಿದ್ದಾರೆ. ಇನ್ನೂ ಹಲವು ಕರುಗಳು ಆರೈಕೆ ಇಲ್ಲದೆ ಸಾವಿಗೀಡಾಗಿವೆ.

ಮಂಡ್ಯ: ಜಾನುವಾರುಗಳ ಸಮಸ್ಯೆ ನೀಗಿಸುವ ಖ್ಯಾತಿ ಹೊಂದಿರುವ ಕೆ.ಆರ್.ಪೇಟೆ ತಾಲ್ಲೂಕು ಬಿಲ್ಲೇನಹಳ್ಳಿಯ ಗವಿರಂಗನಾಥ ಸ್ವಾಮಿ ದೇವಾಲಯ ಆಸುಪಾಸಿನಲ್ಲೇ ಅನಾಥ ಕರುಗಳು ಹಿಂಸೆ ಅನುಭವಿಸುತ್ತಿವೆ. ತಮ್ಮ ಮನೆಗಳಲ್ಲಿನ ದನಕರುಗಳಿಗೆ ಯಾವುದೇ ರೀತಿಯ ತೊಂದರೆ ಎದುರಾದರೂ ಸ್ವಾಮಿ ದೇವಾಲಯ ಆವರಣಕ್ಕೆ ಕರೆತಂದು ಬಿಟ್ಟರೆ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಈಗಲೂ ಇದೆ. ಅಲ್ಲದೆ ರೈತರು ತಮ್ಮ ಮನೆಯಲ್ಲಿ ಹೊಸದಾಗಿ ಕರು ಜನಿಸಿದ ವೇಳೆ ಮಾಡುವ ಗಿಣ್ಣನ್ನು ಇಲ್ಲಿಗೆ ತಂದು ದೇವರಿಗೆ ಮೊದಲು ಅರ್ಪಿಸುವ ವಾಡಿಕೆ ಇದೆ. ಇಷ್ಟೊಂದು ಮಹತ್ವ ಪಡೆದುಕೊಂಡಿರುವ ಗವಿರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಮುಗ್ಧ ಕರುಗಳು ಸಾಯುತ್ತಿವೆ. ಹಲವು ಕರುಗಳು ತಿನ್ನಲು ಮೇವು ಇಲ್ಲದೆ ಕುಡಿಯಲು ನೀರಿಲ್ಲದೆ ಮೂಕವೇದನೆ ಅನುಭವಿಸುತ್ತಿವೆ.
ಇಲ್ಲಿನ ಗವಿರಂಗನಾಥ ಸ್ವಾಮಿ ದೇವರು ಗೋವುಗಳ ರಕ್ಷಕ ಎಂದೇ ಹೆಸರು ವಾಸಿಯಾಗಿದ್ದಾನೆ. ಹೀಗಾಗಿಯೇ ರೈತರು ತಮ್ಮ ತಮ್ಮ ದನಕರುಗಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಆ ಕ್ಷೇತ್ರಕ್ಕೆ ತಂದು ಬಿಟ್ಟರೆ ದನಕರುಗಳು ಸಮಸ್ಯೆಯಿಂದ ಹೊರ ಬರುತ್ತವೆ ಎನ್ನುವ ನಂಬಿಕೆ ಜನರಿಗೆ ಇದೆ.
ಗೋಹತ್ಯೆ ಕಾಯ್ದೆಗೆ ಜನರ ಆಕ್ಷೇಪ ಸುತ್ತಮುತ್ತಲ ಹಳ್ಳಿಗಳ ಜನರು ಗಂಡು ಕರುಗಳನ್ನು ಇಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇಲ್ಲಿಗೆ ತಂದು ಗಂಡು ಕರುಗಳನ್ನ ಬಿಟ್ಟು ಹೋದರೆ ಯಾರು ಕೇಳಲ್ಲ ಎನ್ನುವ ವಿಚಾರ ಜನರಿಗೆ ಗೊತ್ತಿರುವುದರಿಂದ ರಾತ್ರೋ ರಾತ್ರಿ ಕರುಗಳನ್ನ ದೇವಾಲಯದ ಬಳಿ ತಂದು ಬಿಟ್ಟು ಹೋಗುತ್ತಾರೆ. ಅದರಲ್ಲೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಇದು ಹೆಚ್ಚಾಗಿದ್ದು, ಮೂರ್ನಾಲ್ಕು ತಿಂಗಳಲ್ಲಿ ದೇವಾಲಯದ ಆವರಣದಲ್ಲಿ 50 ರಿಂದ 60 ಕರುಗಳು ಇಲ್ಲಿದ್ದವು ಎನ್ನಲಾಗುತ್ತಿದೆ.
ಇಲ್ಲೂ ಸಹ ಕರುಗಳ್ಳರ ಹಾವಳಿ ಇದ್ದು ಇಲ್ಲಿದ್ದ ಹಲವು ಕರುಗಳನ್ನ ಕಳ್ಳರು ರಾತ್ರೊ ರಾತ್ರಿ ಹೊತ್ತೊಯ್ದಿದ್ದಾರೆ. ಇನ್ನೂ ಹಲವು ಕರುಗಳು ಆರೈಕೆ ಇಲ್ಲದೆ ಸಾವಿಗೀಡಾಗಿವೆ. ಕರುಗಳ ಕಳೇಬರ ದೇವಾಲಯದ ಆವರಣದಲ್ಲೇ ಬಿದ್ದಿದ್ದು, ಇದು ನಾಯಿ ನರಿಗಳಿಗೆ ಆಹಾರವಾಗುತ್ತಿವೆ. ಜೊತೆಗೆ ಕೆಲವು ಕರುಗಳು ಆಹಾರ ನೀರು ಇಲ್ಲದೆ ಸೊರಗುತ್ತಿವೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಎಳೆ ಕರುಗಳಿಗೆ ಸೌಲಭ್ಯ ಕಲ್ಪಿಸದೆ ಕಾಯ್ದೆ ತಂದಿದ್ದಾರೆಂದು ಜನರು ಆಕ್ಷೇಪ ವ್ಯಕ್ತಪಡಿಸ್ತಿದ್ದಾರೆ.

ಗವಿರಂಗನಾಥ ಸ್ವಾಮಿ ದೇವಾಲಯದ ದ್ವಾರ
ಮೇವು ಹುಡುಕುತ್ತಿರುವ ಕರು
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ಸ್ವ ಕ್ಷೇತ್ರದಲ್ಲೇ ದಾರುಣ ಘಟನೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಆರ್.ಪೇಟೆ ತಹಶೀಲ್ದಾರ್ ಶಿವಮೂರ್ತಿ, ಕರುಗಳ ಮೂಕವೇದನೆ ಕುರಿತು ಮಾಹಿತಿ ಲಭ್ಯವಾಗಿದೆ. ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳುವುದಲ್ಲದೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Anti cow slaughter bill ವಿಧಾನಪರಿಷತ್ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ
ಇದನ್ನೂ ಓದಿ: ಆರ್ಎಸ್ಎಸ್ನ್ನು ಅಣಕಿಸಿದ ಪಿಎಫ್ಐ ವಿರುದ್ಧ ಬಿಜೆಪಿ ಆಕ್ರೋಶ; ಇದೊಂದು ಪಿತೂರಿ ಎಂದ ಸಿ ಟಿ ರವಿ