ಆರ್​ಎಸ್​ಎಸ್​ನ್ನು ಅಣಕಿಸಿದ ಪಿಎಫ್​ಐ ವಿರುದ್ಧ ಬಿಜೆಪಿ ಆಕ್ರೋಶ; ಇದೊಂದು ಪಿತೂರಿ ಎಂದ ಸಿ ಟಿ ರವಿ

ಪಿಎಫ್​ಐ ಉದ್ದೇಶ ಮತ್ತೊಮ್ಮೆ ದೇಶವನ್ನು ಒಡೆಯುವುದೇ ಆಗಿದೆ. ಆದರೆ ಇದಕ್ಕೆ ಆರ್​​ಎಸ್​ಎಸ್​ ಅಡ್ಡಿಯಾಗಿದೆ. ಹಾಗಾಗಿ ಪಿಎಫ್​ಐ, ಸಂಘಪರಿವಾರದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಸಿ.ಟಿ.ರವಿ ಆರೋಪಿಸಿದರು.

  • TV9 Web Team
  • Published On - 14:55 PM, 21 Feb 2021
ಆರ್​ಎಸ್​ಎಸ್​ನ್ನು ಅಣಕಿಸಿದ ಪಿಎಫ್​ಐ ವಿರುದ್ಧ ಬಿಜೆಪಿ ಆಕ್ರೋಶ; ಇದೊಂದು ಪಿತೂರಿ ಎಂದ ಸಿ ಟಿ ರವಿ
ಆರ್​ಎಸ್​ಎಸ್​ ಸ್ವಯಂ ಸೇವಕರಿಗೆ ಕೋಳ ತೊಡಿಸಿ ಅಣಕಿಸಿದ್ದನ್ನು ವಿರೋಧಿಸಿದ ಸಿ.ಟಿ.ರವಿ

ದೆಹಲಿ: ಕೇರಳದಲ್ಲಿ ಪಾಪ್ಯುಲರ್​ ಫ್ರಂಟ್ ಆಫ್ ಇಂಡಿಯಾದ ಮೆರವಣಿಗೆಯಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರಿಗೆ ಕೋಳ ತೊಡಿಸಿ ಅಣುಕು ಸನ್ನಿವೇಶ ಸೃಷ್ಟಿಸಿದ್ದರ ಬಗ್ಗೆ ಬಿ ಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ಆಕ್ಷೇಪಾರ್ಹ ಚಿಂತನೆಯುಳ್ಳ ಸಂಘಟನೆ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದೂ ಹೇಳಿದೆ. ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇಂಥ ಪ್ರಸಂಗಗಳು ನಮ್ಮ ದೇಶದಲ್ಲಿ ಇದೇ ಮೊದಲಲ್ಲ ಎಂದು ಹೇಳಿದರು.

7ನೇ ಶತಮಾನದಿಂದಲೂ ಆಕ್ರಮಣಕಾರಿ ಮನಸ್ಥಿತಿಯುಳ್ಳವರು ಈ ರೀತಿಯ ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ಘಜನಿ, ಘೋರಿ, ಬಾಬರ್ ಸಹಿತ ಅನೇಕರು ಹಾಗೂ ಅವರ ಅನುಯಾಯಿಗಳು ಈ ರೀತಿಯಲ್ಲೇ ನಡೆದುಕೊಂಡಿದ್ದರು. ಅವರನ್ನೇ ಅನುಸರಿಸುತ್ತಿರುವವರು ಈಗಲೂ ಅದೇ ರೀತಿ ಅಮಾನವೀಯ ಹಾದಿಯಲ್ಲಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.

ಆರ್​ಎಸ್​ಎಸ್​ ಸಂಘಟನೆ ಯಾವತ್ತೂ ಧರ್ಮ ವಿರೋಧಿಯಾಗಿ ನಡೆದುಕೊಂಡಿಲ್ಲ. ದೇಶ ಭಕ್ತಿಯ ಶಿಕ್ಷಣ ನೀಡುತ್ತ, ನಗುನಗುತ್ತಲೇ ಜನರಲ್ಲಿ ಒಗ್ಗಟ್ಟು ಮೂಡಿಸಿ ದೇಶವನ್ನು ಕಟ್ಟುತ್ತಿದೆ. ಇದನ್ನು ಸಹಿಸಲಾಗದವರು ಹೀಗೆ ದೇಶವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಕ್ರಮ ಕೈಗೊಳ್ಳಲಿ
ದೇಶ ಕಟ್ಟುವ ಕೆಲಸಕ್ಕೆ ಅಡ್ಡಿಪಡಿಸುವುದನ್ನು ಸಹಿಸಲಾಗದು ಎಂದಿರುವ ಸಿ.ಟಿ.ರವಿ, ಪಿಎಫ್​ಐ ಉದ್ದೇಶ ಮತ್ತೊಮ್ಮೆ ದೇಶವನ್ನು ಒಡೆಯುವುದೇ ಆಗಿದೆ. ಆದರೆ ಇದಕ್ಕೆ ಆರ್​​ಎಸ್​ಎಸ್​ ಅಡ್ಡಿಯಾಗಿದೆ. ಹಾಗಾಗಿ ಪಿಎಫ್​ಐ, ಸಂಘಪರಿವಾರದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು. ಮಂಗಳೂರು ಘಟನೆಯನ್ನಾಧರಿಸಿ ಕರ್ನಾಟಕ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಿರುವುದು ಸರಿಯಾಗಿದೆ. ಅದೇ ರೀತಿ ಕೇರಳ ಸರ್ಕಾರವೂ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ವಿಶ್ಲೇಷಣೆ | ರಾಮಭಕ್ತರ ಮೇಲೆ ಕುಮಾರಸ್ವಾಮಿಗೆ ಯಾಕೆ ಈ ರೀತಿ ಕೋಪ?