ಕೊರೊನಾ 2ನೇ ಅಲೆ ಅಬ್ಬರಕ್ಕೆ ತತ್ತರಿಸುತ್ತಿದೆ ಮಹಾರಾಷ್ಟ್ರ.. 3 ಜಿಲ್ಲೆಗಳಲ್ಲಿ ಲಾಕ್‌ಡೌನ್, ಪುಣೆಯಲ್ಲಿ ಶಾಲಾ-ಕಾಲೇಜುಗಳು ಬಂದ್

Maharashtra Announced Lockdown | ಮಹಾರಾಷ್ಟ್ರದ 3 ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಲಾಗಿದೆ. ಅಮರಾವತಿಯಲ್ಲಿ ಇಂದು ರಾತ್ರಿ(ಫೆ.22) 8 ಗಂಟೆಯಿಂದ ಫೆ.28ರವರೆಗೆ ಅಂದ್ರೆ ಒಂದು ವಾರ ಲಾಕ್​ಡೌನ್​ಗೆ ಆದೇಶ ಹೊರಡಿಸಲಾಗಿದೆ. ಅಲ್ಲದೆ ಅಕೋಲಾ, ಬುಲ್ದಾನಾ ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್‌ಡೌನ್ ಆದೇಶ ಅನ್ವಯವಾಗಲಿದೆ.

  • TV9 Web Team
  • Published On - 9:01 AM, 22 Feb 2021
ಕೊರೊನಾ 2ನೇ ಅಲೆ ಅಬ್ಬರಕ್ಕೆ ತತ್ತರಿಸುತ್ತಿದೆ ಮಹಾರಾಷ್ಟ್ರ.. 3 ಜಿಲ್ಲೆಗಳಲ್ಲಿ ಲಾಕ್‌ಡೌನ್, ಪುಣೆಯಲ್ಲಿ ಶಾಲಾ-ಕಾಲೇಜುಗಳು ಬಂದ್
ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ

ಕೊರೊನಾ ಎರಡನೇ ಅಲೆ ಅಬ್ಬರಕ್ಕೆ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ಜನರಿಗೆ ಎಷ್ಟೇ ತಿಳಿವಳಿಕೆ ನೀಡಿದ್ರೂ.. ಮಾಸ್ಕ್ ಧರಿಸುತ್ತಿಲ್ಲ.. ದೈಹಿಕ ಅಂತರ ಕಾಪಾಡುತ್ತಿಲ್ಲ. ಇದ್ರಿಂದ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಜನರು ಸರ್ಕಾರದ ಮಾತು ಕೇಳದಿದ್ರೆ ಲಾಕ್​ಡೌನ್ ಎಚ್ಚರಿಕೆಯನ್ನ ಸಿಎಂ ಉದ್ಧವ್​ ಠಾಕ್ರೆ ನೀಡಿದ್ದರು. ಅದರಂತೆ ಈಗ ಮಹಾರಾಷ್ಟ್ರದ 3 ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಲಾಗಿದೆ. ಅಮರಾವತಿಯಲ್ಲಿ ಇಂದು ರಾತ್ರಿ(ಫೆ.22) 8 ಗಂಟೆಯಿಂದ ಫೆ.28ರವರೆಗೆ ಅಂದ್ರೆ ಒಂದು ವಾರ ಲಾಕ್​ಡೌನ್​ಗೆ ಆದೇಶ ಹೊರಡಿಸಲಾಗಿದೆ. ಅಲ್ಲದೆ ಅಕೋಲಾ, ಬುಲ್ದಾನಾ ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್‌ಡೌನ್ ಆದೇಶ ಅನ್ವಯವಾಗಲಿದೆ.

ಕೊರೊನಾ ಅನ್ನೋ ಮಹಾಮಾರಿಗೆ ವ್ಯಾಕ್ಸಿನ್ ಬಂದಿದೆ. ಇನ್ನೇನು ನಾವೆಲ್ಲಾ ನಿಶ್ಚಿಂತೆಯಿಂದ ಇರಬಹುದು ಅಂತಾ ನಾವೆಲ್ಲ ಅಂದುಕೊಂಡಿದ್ವಿ. ಆದ್ರೆ, ತಿಂಗಳಿಗೊಂದು ಬಾರಿ ಬಣ್ಣ ಬದಲಿಸಿ. ಹೋದ್ಯಾ ಪಿಶಾಚಿ ಅಂದ್ರೆ.. ಬಂದೆ ಗವಾಕ್ಷೀಲಿ ಅನ್ನೋ ರೀತಿ ವೇಷ ಬದಲಿಸಿ ಬರ್ತಿರೋ ಕೊರೊನಾ ಅನ್ನೋ ಹೆಮ್ಮಾರಿ ಮಹಾರಾಷ್ಟ್ರದಲ್ಲಿ ತನ್ನ ಅಬ್ಬರವನ್ನ ಮತ್ತೆ ಶುರು ಮಾಡಿದೆ. ಕೆಲವೇ ದಿನಗಳ ಹಿಂದೆ ಪ್ರತಿದಿನ ಕೇವಲ 2 ಸಾವಿರದಿಂದ ಎರಡೂವರೆ ಸೋಂಕಿತರು ಪತ್ತೆಯಾಗ್ತಿದ್ದ ಮಹಾರಾಷ್ಟ್ರದಲ್ಲಿ ಈಗ ಪ್ರತಿದಿನ 7 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗ್ತಿದ್ದಾರೆ. ಇದ್ರಿಂದ ಮಹಾರಾಷ್ಟ್ರ ಸರ್ಕಾರ ಕಂಗೆಟ್ಟು ಹೋಗಿದ್ದು. ಸೋಂಕು ತಡೆಯಲು ಮತ್ತೆ ಲಾಕ್​ಡೌನ್​, ನೈಟ್​ಕರ್ಫ್ಯೂ, ಮೈಕ್ರೋ ಕಂಟೇನ್​ಮೆಂಟ್​ ಜೋನ್​ಗಳ ಮೊರೆ ಹೋಗಿದೆ.

ಅಮರಾವತಿ ಜಿಲ್ಲೆಯಲ್ಲಿ ಇಂದಿನಿಂದ 1ವಾರ ಲಾಕ್​ಡೌನ್
ಕೊರೊನಾ.. ಬ್ರಿಟನ್​ ಕೊರೊನಾ ಬಳಿಕ.. ಈಗ ದೇಶದಲ್ಲಿ ಬ್ರೆಜಿಲ್, ಆಫ್ರಿಕಾ ಕೊರೊನಾ ಅಬ್ಬರಿಸೋಕೆ ಶುರು ಮಾಡಿದೆ. ಇದು ಅತಿ ಹೆಚ್ಚು ಪರಿಣಾಮ ಬೀರಿರೋದು ಮಹಾರಾಷ್ಟ್ರದಲ್ಲಿ. ಹೀಗಾಗಿ ಮಹಾರಾಷ್ಟ್ರದಲ್ಲಿ ಮತ್ತೆ ಕೊವಿಡ್ ನಿಯಮಗಳನ್ನ ಕಠಿಣವಾಗಿ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಜನ ಕೊವಿಡ್ ನಿಯಮಗಳನ್ನ ಪಾಲಿಸದೇ ಇದ್ರೆ. ರಾಜ್ಯಾದ್ಯಂತ ಲಾಕ್​ಡೌನ್ ಮಾಡೋದಾಗಿ ಸಿಎಂ ಉದ್ಧವ್​ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಹೆಮ್ಮಾರಿ ತಡೆಗೆ ಜನ ಸಹಕರಿಸಲೇಬೇಕು. ಈ ಮೂಲಕ ಮಾರಕ ರೋಗದ ವಿರುದ್ಧದ ಹೋರಾಟದಲ್ಲಿ ನಾವು ಗೆಲ್ಲಲು ನೆರವಾಗಬೇಕು. ಹೀಗಾಗಿ ಮಹಾರಾಷ್ಟ್ರದಲ್ಲಿ ಇಂದಿನಿಂದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಭೆ-ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಇಂದಿನಿಂದ 1 ವಾರ ಅಥವಾ 15 ದಿನ ಪರಿಸ್ಥಿತಿಯನ್ನ ಅವಲೋಕಿಸಿ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಬಗ್ಗೆ ಡಿಸೈಡ್ ಮಾಡೋದಾಗಿ ಹೇಳಿದ್ದಾರೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿರೋ ಅಮರಾವತಿ ಜಿಲ್ಲೆಯಲ್ಲಿ ಇಂದು ರಾತ್ರಿ 8 ಗಂಟೆಯಿಂದ ಮಾರ್ಚ್ 1ರ ಬೆಳಗ್ಗೆ 8 ಗಂಟೆಯವರೆಗೆ ಲಾಕ್​ಡೌನ್ ಮಾಡಲಾಗುತ್ತೆ ಅಂತಾ ಸಚಿವೆ ಯಶೋಮತಿ ಠಾಕೂರ್ ಹೇಳಿದ್ದಾರೆ. ಅಮರಾವತಿ ಜಿಲ್ಲೆಯಲ್ಲಿ ಕೊರೊನಾ ಹಿಡಿತಕ್ಕೆ ಸಿಗ್ತಿಲ್ಲ. ಹೀಗಾಗಿ ಲಾಕ್​ಡೌನ್ ಅನಿವಾರ್ಯವಾಗಿದೆ ಅಂತಾ ಯಶೋಮತಿ ಹೇಳಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಅವಶ್ಯಕ ಸೇವೆಗಳ ಲಭ್ಯವಿರುತ್ತವೆ. ಅದರ ಹೊರತಾಗಿ ಬೇರಾವುದೇ ಕೆಲಸಕ್ಕೆ ಹೋಗಲು ಅನುಮತಿ ಇಲ್ಲ ಅಂತಾ ಅವರು ಹೇಳಿದ್ದಾರೆ. ಅಮರಾವತಿ ವಿಭಾಗದ ಇತರ ನಾಲ್ಕು ಜಿಲ್ಲೆಗಳಾದ ಅಕೋಲ, ವಾಷಿಂ, ಬುಲ್ಧಾನಾ ಮತ್ತು ಯಾವತ್ಮಲ್​ನಲ್ಲಿ ಕೆಲವು ನಿರ್ಬಂಧಗಳನ್ನ ಹೇರೋ ಮೂಲಕ ಕೊರೊನಾ ಕಂಟ್ರೋಲ್​ಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಪುಣೆಯಲ್ಲಿ ಇಂದಿನಿಂದ ಶಾಲಾ-ಕಾಲೇಜುಗಳು ಬಂದ್
ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಒಂದಾದ ಪುಣೆಯಲ್ಲಿ ಇಂದಿನಿಂದ ಶಾಲಾ-ಕಾಲೇಜುಗಳು ಮತ್ತು ಕೋಚಿಂಗ್ ಸೆಂಟರ್​ಗಳನ್ನ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಅಮರಾವತಿಯಂತೆ ಪುಣೆಯಲ್ಲೂ ಕೊರೊನಾ ಸೋಂಕಿತರು ಹೆಚ್ಚಾಗ್ತಿದ್ದಾರೆ. ಇದೇ ಕಾರಣಕ್ಕೆ ಇಂದಿನಿಂದ ಪುಣೆಯಲ್ಲಿ ಒಂದು ವಾರ ನೈಟ್​ಕರ್ಫ್ಯೂ ಜಾರಿ ಮಾಡಲು ತೀರ್ಮಾನಿಸಲಾಗಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್​ಕರ್ಫ್ಯೂ ಜಾರಿಯಾಗಲಿದೆ. ಹೋಟೆಲ್-ರೆಸ್ಟೋರೆಂಟ್​ಗಳನ್ನ 11 ಗಂಟೆಗೆ ಮುಚ್ಚಲು ಜಿಲ್ಲಾಡಳಿತ ಆದೇಶಿಸಿದೆ.

ಒಟ್ನಲ್ಲಿ ಕೊರೊನಾ 2ನೇ ಅಲೆಗೆ ಮಹಾರಾಷ್ಟ್ರ ಕಂಗೆಟ್ಟು ಹೋಗಿದ್ದು.. ಇನ್ನೊಂದು ವಾರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇದ್ರೆ ಮತ್ತೆ ಇಡೀ ಮಹಾರಾಷ್ಟ್ರಕ್ಕೆ ಲಾಕ್​ ಬೀಳೋದು ಪಕ್ಕಾ ಆಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಾದರೆ ಲಾಕ್​ಡೌನ್​ ಅನಿವಾರ್ಯ; ಸಿಎಂ ಉದ್ಧವ್​ ಠಾಕ್ರೆ