ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು 72 ದಿನಗಳನ್ನು ಪೂರೈಸಿದೆ. ಗಣರಾಜ್ಯೋತ್ಸವ ದಿನದಂದು ನಡೆದ ಅನುಚಿತ ಘಟನಾವಳಿಗಳ ಬಳಿಕ, ರೈತ ಮುಖಂಡರು ಮತ್ತೆ ಚಳುವಳಿ ಸಂಘಟಿಸಲು ಮುಂದಾಗಿದ್ದಾರೆ.
ಪ್ರತಿಭಟನಾ ನಿರತ ರೈತರು ಇಂದು (ಫೆ.7) ಹರ್ಯಾಣದ ಚರ್ಖಿ ದಾದ್ರಿಯಲ್ಲಿ ಮಹಾಪಂಚಾಯತ್ ಸಭೆ ನಡೆಸಿದ್ದಾರೆ. ರೈತ ಮುಖಂಡ, ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್ ಸಿಂಗ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಾವಿರಾರು ಸಂಖ್ಯೆಯ ರೈತರು ಮಹಾಪಂಚಾಯತ್ಗೆ ಸಾಕ್ಷಿಯಾಗಿದ್ದಾರೆ.
ಸರ್ಕಾರ ಪ್ರತಿಭಟನಾ ನಿರತ ರೈತರನ್ನು ಹರ್ಯಾಣ ಮತ್ತು ಪಂಜಾಬ್ ಎಂಬ ನೆಲೆಯಲ್ಲಿ ಒಡೆಯಲು ಪ್ರಯತ್ನಿಸಿದೆ. ನಾವು ಇಂತಹ ಕ್ರಮಗಳ ವಿರುದ್ಧ ದೃಢ ನಿರ್ಧಾರ ಕೈಗೊಳ್ಳಬೇಕು. ಇಬ್ಬರು ಸರ್ಕಾರಿ ಅಧಿಕಾರಿಗಳು ನಿನ್ನೆ ನನ್ನನ್ನು ಭೇಟಿಯಾಗಲು ಬಂದರು. ಆದರೆ, ಪ್ರತಿ ಸಭೆ ಕೂಡ ಕಿಸಾನ್ ಮೋರ್ಚಾದ 40 ಸದಸ್ಯರ ಸಮ್ಮುಖದಲ್ಲಿ ನಡೆಯಬೇಕು. ಹಾಗಾಗಿ, ನನ್ನೊಬ್ಬನ ಜೊತೆಯ ಮಾತುಕತೆಗೆ ನಾನು ಒಪ್ಪಲಿಲ್ಲ ಎಂದು BKU ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಹರ್ಯಾಣದ ಬಿಜೆಪಿ ಸರ್ಕಾರ ಜನರ ಕೈ ಬಿಟ್ಟಿದೆ. ಅಂತಹಾ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ. ರೈತರು ಸರ್ಲಾರದ ವಿರುದ್ಧ ನಡೆಸುತ್ತಿರುವ ಆಂದೋಲನವನ್ನು ಬಿಗುಗೊಳಿಸಬೇಕು. ಯುವಕರು ರೈತ ಹೋರಾಟ ನಡೆಸಲು ಮುಂದೆ ಬರಬೇಕು ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.
ಸರ್ವ್ ಖಾಪ್ ಪಂಚಾಯತ್ಗೆ ಚಳುವಳಿಯನ್ನು ಮುಂದುವರಿಸುವ ಶಕ್ತಿ ಇದೆ. ಒಗ್ಗಟ್ಟಿನ ಹೋರಾಟವು ರೈತ ಸಮುದಾಯಕ್ಕೆ ಜಯ ಒದಗಿಸಿಕೊಡುತ್ತದೆ ಎಂಬ ನಂಬಿಕೆ ಇದೆ ಎಂದು ದರ್ಶನ್ ಪಾಲ್ ಸಿಂಗ್ ಪುನರುಚ್ಚರಿಸಿದ್ದಾರೆ.
ಜಿಂದ್ ಮಹಾಪಂಚಾಯತ್ನಲ್ಲಿ ವೇದಿಕೆ ಕುಸಿದ ಘಟನೆ ನಡೆದಿತ್ತು. ಹಾಗಾಗಿ, ಈ ಬಾರಿ ಮಹಾಪಂಚಾಯತ್ ಆಯೋಜಕರು ಕಲ್ಲಿನ ಇಟ್ಟಿಗೆಯ ವೇದಿಕೆ ನಿರ್ಮಿಸಿದ್ದರು.
ದೆಹಲಿ ಗಡಿಭಾಗಗಳಾದ ಟಿಕ್ರಿ, ಸಿಂಘು ಪ್ರದೇಶದಲ್ಲಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ರೈತರ ಪ್ರತಿಭಟನೆ
ನಿವೃತ್ತ ಹಿರಿಯ ಸೈನಿಕರೊಬ್ಬರು ಸಿಂಘು ಗಡಿಭಾಗದಲ್ಲಿ ರೈತರ ಪ್ರತಿಭಟನೆಯಲ್ಲಿ ತೊಡಗಿರುವುದು ಕಂಡುಬಂತು. ಅವರು ತಮ್ಮ ಮೆಡಲ್ಗಳನ್ನು ಕೂಡ ಧರಿಸಿರುವುದನ್ನು ನಾವು ಕಾಣಬಹುದು. ಬಲಭುಜದ ಭಾಗದಲ್ಲಿ I love Punjab ಎಂಬ ಚಿಹ್ನೆಯೂ ಇದೆ.
ಸಿಂಘು ಗಡಿಯಲ್ಲಿ ಪೊಲೀಸ್ ಬಿಗಿಭದ್ರತೆ ಮುಂದುವರಿದಿದೆ.
ಪೊಲೀಸ್ ಭದ್ರತೆ, ಸರ್ಕಾರ ರಸ್ತೆಗಳನ್ನು ಬೇಲಿ, ಬ್ಯಾರಿಕೇಡ್ಗಳ ಮೂಲಕ ಬಂದ್ ಮಾಡಿರುವ ದೃಶ್ಯಗಳನ್ನು ನೋಡುತ್ತಿರುವ ಹೋರಾಟಗಾರರು. (ಸಂಗ್ರಹ ಚಿತ್ರ)
Published On - 5:28 pm, Sun, 7 February 21