‘ದೆಹಲಿ ಚಲೋ’ ಪ್ರತಿಭಟನಾಕಾರರ ರೌದ್ರಾವತಾರ; ಪೊಲೀಸರತ್ತ ಇಟ್ಟಿಗೆ ಎಸೆದ ರೈತರು

| Updated By: ganapathi bhat

Updated on: Nov 26, 2020 | 1:12 PM

ಕೈಯಲ್ಲಿ ಖಡ್ಗ, ಕೋಲುಗಳನ್ನು ಹಿಡಿದು ಮೆರವಣಿಗೆ ಹೊರಟಿರುವ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ಗಡಿಭಾಗಗಳನ್ನು ಮುಚ್ಚಲಾಗಿದೆ. ಹೆಚ್ಚಿನ ಪೊಲೀಸ್​ ಭದ್ರತೆ ನಿಯೋಜಿಸಲಾಗಿದೆ.

‘ದೆಹಲಿ ಚಲೋ ಪ್ರತಿಭಟನಾಕಾರರ ರೌದ್ರಾವತಾರ; ಪೊಲೀಸರತ್ತ ಇಟ್ಟಿಗೆ ಎಸೆದ ರೈತರು
‘ದೆಹಲಿ ಚಲೋ‘ ಚಳವಳಿಗೆಂದು ಧಾವಿಸುತ್ತಿರುವ ರೈತರು
Follow us on

ದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಪಂಜಾಬ್​ ಮತ್ತು ಹರ್ಯಾಣದ ರೈತರು ದೆಹಲಿ ಚಲೋ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಫತೇಹಾಬಾದ್​​ನಿಂದ ಪ್ರತಿಭಟನಾ ಮೆರವಣಿಗೆ ಶುರು ಮಾಡಿದ್ದು, ಟ್ರ್ಯಾಕ್ಟರ್​ ಸೇರಿ ಹಲವು ವಾಹನಗಳಲ್ಲಿ ರಾಷ್ಟ್ರ ರಾಜಧಾನಿಯತ್ತ ದಂಡುದಂಡಾಗಿ ಸಾಗುತ್ತಿದ್ದಾರೆ.

ಕೈಯಲ್ಲಿ ಖಡ್ಗ, ಕೋಲುಗಳನ್ನು ಹಿಡಿದು ಮೆರವಣಿಗೆ ಹೊರಟಿರುವ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ಗಡಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹೆಚ್ಚಿನ ಪೊಲೀಸ್​ ಭದ್ರತೆ ನಿಯೋಜಿಸಲಾಗಿದೆ.

ಈ ಮಧ್ಯ ಪ್ರತಿಭಟನಾಕಾರರು ಪುಂಡಾಟ ಮೆರೆದಿದ್ದು, ಅಂಬಾಲಾದ ಶಂಭು ಗಡಿ ಸಮೀಪ ಸೇತುವೆ ಬಳಿ ಹಾಕಲಾದ ಬ್ಯಾರಿಕೇಡ್​ಗಳನ್ನು ಕಿತ್ತು ನದಿಗೆ ಎಸೆದಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಕಡೆಗೆ ಇಟ್ಟಿಗೆ, ಕಲ್ಲುಗಳನ್ನೂ ಎಸೆದಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಅಶ್ರುವಾಯು, ಜಲಫಿರಂಗಿಗಳನ್ನು ಪ್ರಯೋಗ ಮಾಡಿದ್ದಾರೆ. ಸೇತುವೆ ಮೇಲೆ ಸುಮಾರು ಎರಡು ತಾಸು, ಪ್ರತಿಭಟನಾಕಾರರು-ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ಗಡಿ ಬಂದ್ ಮಾಡಿದ್ರೂ ಜಗ್ಗಲಿಲ್ಲ
ಹರ್ಯಾಣ ಬಿಜೆಪಿ ಸರ್ಕಾರ ಪ್ರತಿಭಟನಾಕಾರರು ತಡೆಯಲು ತುಂಬ ಪ್ರಯತ್ನ ಮಾಡಿತ್ತು. ಗಡಿ ಬಂದ್ ಮಾಡಿ, ಪೊಲೀಸರ ಭದ್ರತೆ ಹೆಚ್ಚಿಸಿದ್ದರೂ ಜಗ್ಗದ ರೈತರು ಹರ್ಯಾಣ ಪ್ರವೇಶಿಸಿದ್ದಾರೆ. ಪಂಜಾಬ್​ನ ಪಟಿಯಾಲಾದಲ್ಲಿ ಬಸ್​ಸ್ಟ್ಯಾಂಡ್​ಗಳನ್ನು ಕ್ಲೋಸ್ ಮಾಡಲಾಗಿದೆ. ಸಾರ್ವಜನಿಕ ವಾಹನ ಸಂಚಾರ ಇಂದು ಮತ್ತು ನಾಳೆ ಸ್ಥಗಿತಗೊಳ್ಳಲಿದೆ.

ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ತರುವುದಕ್ಕೂ ಮೊದಲೇ ಶುರುವಾದ ಪ್ರತಿಭಟನೆ ಇನ್ನೂ ಮುಂದುವರಿಯುತ್ತಲೇ ಇದೆ. ಇದೀಗ ಉತ್ತರ ಪ್ರದೇಶ, ಹರ್ಯಾಣ, ಉತ್ತರಾಖಂಡ, ರಾಜಸ್ಥಾನ, ಕೇರಳ, ಪಂಜಾಬ್​ಗಳ ಸಾವಿರಕ್ಕೂ ಹೆಚ್ಚು ರೈತರು ದೆಹಲಿ ಚಲೋ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ.

Published On - 1:09 pm, Thu, 26 November 20