Mumbai 26/11 ಮುಂಬೈ ಮೇಲೆ ಉಗ್ರರ ದಾಳಿಗೆ 12 ವರ್ಷ: ದೇಶಕ್ಕಾಗಿ ಜೀವ ತೆತ್ತ ಹುತಾತ್ಮರಿಗೆ ಗೌರವ
ನವೆಂಬರ್ 26, 2008ರಂದು ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರರು ಸಮುದ್ರ ಮಾರ್ಗದಲ್ಲಿ ಬಂದು ಮುಂಬೈನಲ್ಲಿ ದಾಳಿ ನಡೆಸಿದ್ದರು. ಈ ಭಯಾನಕ ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿ 166 ಮಂದಿ ಮೃತಪಟ್ಟಿದ್ದರು.
ಮುಂಬೈ: ನಗರದ ಮೇಲೆ ನಡೆದ ಭೀಕರ ಉಗ್ರರ ದಾಳಿಗೆ ಇಂದಿಗೆ 12 ವರ್ಷ. ಅದೆಷ್ಟೇ ವರ್ಷಗಳು ಸರಿದು ಹೋದರೂ ಮರೆಯಲಾಗದ ಕರಾಳತೆ ಸೃಷ್ಟಿಸಿದೆ ನವೆಂಬರ್ 26, 2008ರ ದಾಳಿ. ಅಂದು ನರರೂಪದ ರಾಕ್ಷಸರೊಂದಿಗೆ ಹೋರಾಡಿ ಮಡಿದ ಯೋಧರು, ಪೊಲೀಸರಿಗೆ ಇಂದು ದೇಶಾದ್ಯಂತ ಗೌರವ ಸಲ್ಲಿಸಲಾಯಿತು.
ಅಂದಿನ ದಾಳಿಯನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ ಮುಂಬೈ ಪೊಲೀಸರು, ಅಂದು ಮುಂಬೈನಲ್ಲಿ ಹೋರಾಡಿ ಹುತಾತ್ಮರಾದವರ ತ್ಯಾಗ ಎಂದಿಗೂ ನೆನಪು ಮತ್ತು ಇತಿಹಾಸದಿಂದ ಅಳಿಸಿಹೋಗಲಾರದು. ನಮ್ಮೆಲ್ಲರ ರಕ್ಷಣೆಗಾಗಿ ಪ್ರಾಣ ತೆತ್ತವರಿಗೆ ನಮ್ಮ ಗೌರವ ನಮನಗಳು ಎಂದು ಹೇಳಿದ್ದಾರೆ. #2611Attack #2611Martyrs ಎಂಬ ಹ್ಯಾಷ್ಟ್ಯಾಗ್ ಬಳಸಿದ್ದಾರೆ.
ದಕ್ಷಿಣ ಮುಂಬೈನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ನಿರ್ಮಿಸಲಾದ ಹುತಾತ್ಮರ ಸ್ಮಾರಕದ ಬಳಿ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶ್ಮುಖ್, ಅರಣ್ಯ ಸಚಿವ ಆದಿತ್ಯ ಠಾಕ್ರೆ ಇತರರು ಭಾಗವಹಿಸಿದ್ದರು.
ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ರಕ್ಷಣಾ ಪಡೆಗಳು ನಡೆಸಿದ ಹೋರಾಟವನ್ನು ನೆನಪಿಸಿಕೊಂಡರು. ಹುತಾತ್ಮರ ಸ್ಮಾರಕಕ್ಕೆ ಹೂವಿನ ಹಾರ ಹಾಕಿ, ನಮನ ಸಲ್ಲಿಸಿದರು.
ಭಯೋತ್ಪಾದನೆ ವಿರುದ್ಧ ಹೋರಾಟ ತೀವ್ರಗೊಳ್ಳಲಿ ಕೊವಿಡ್-19 ಕಾರಣದಿಂದ ಸಮಾರಂಭದಲ್ಲಿ ಭಾಗವಹಿಸಲು ಕಡಿಮೆ ಜನರಿಗೆ ಅವಕಾಶ ಮಾಡಿಕೊಡಲಾಗಿತ್ತು. ಹುತಾತ್ಮರ ಕುಟುಂಬದವರೂ ಬಂದು ಗೌರವ ಸಲ್ಲಿಸಿದರು. ಇದೇ ಸಂದರ್ಭ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯಪಾಲರನ್ನು ಭೇಟಿಯಾದರು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಟ್ವೀಟ್ ಮಾಡಿ, 2008ರ ದಾಳಿಯಲ್ಲಿ ಮಡಿದ ಪೊಲೀಸರು, ಯೋಧರಿಗೆ ನಮನ. ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ ತೀವ್ರಗೊಳ್ಳಬೇಕು ಎಂದಿದ್ದಾರೆ.
ಘಟನೆಯ ಮೆಲುಕು ನವೆಂಬರ್ 26, 2008ರಂದು ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರರು ಸಮುದ್ರ ಮಾರ್ಗದಲ್ಲಿ ಬಂದು ಮುಂಬೈನಲ್ಲಿ ದಾಳಿ ನಡೆಸಿದ್ದರು. ಈ ಭಯಾನಕ ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿ 166 ಮಂದಿ ಮೃತಪಟ್ಟಿದ್ದರು.
ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನೆಯ ವಿಶೇಷ ಕಾರ್ಯಪಡೆಯ ಕಮಾಂಡೊ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈನ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಲಸ್ಕರ್ ಮತ್ತು ಸಹಾಯಕ ಸಬ್ಇನ್ಸ್ಪೆಕ್ಟರ್ ತುಕಾರಾಂ ಓಂಬಲ್ ಹುತಾತ್ಮರಾಗಿದ್ದರು.
ಪ್ರತಿವರ್ಷವೂ ನ.26ರಂದು ಹುತಾತ್ಮರನ್ನು ನೆನೆದು, ಗೌರವ ಸಮರ್ಪಿಸಲಾಗುತ್ತಿದೆ.
Saluting the bravehearts whose sacrifice still ignites the spirits of millions #2611Attack #2611Martyrs #SalutingMartyrs pic.twitter.com/IsKmARz27j
— CP Mumbai Police (@CPMumbaiPolice) November 25, 2020
— Mumbai Police (@MumbaiPolice) November 26, 2020
Published On - 11:38 am, Thu, 26 November 20