ದೆಹಲಿ: ‘ಇನ್ನೊಂದು ಟ್ರ್ಯಾಕ್ಟರ್ ರ‍್ಯಾಲಿಗೆ ನಾವು ಸಜ್ಜಾಗಿದ್ದೇವೆ.. ಅದು ಈ ಬಾರಿ ದೆಹಲಿಯಲ್ಲಿ ಅಲ್ಲ, ಬದಲಿಗೆ ಪಶ್ಚಿಮ ಬಂಗಾಳದಲ್ಲಿ..’ ಹೀಗೆಂದು ಹೇಳಿದ್ದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್. ಸದ್ಯ ಚುನಾವಣೆ ನಡೆಯಲಿರುವ ಯಾವುದೇ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಕಿಡಿಕಾರಿರುವ ರಾಕೇಶ್ ಟಿಕಾಯಿತ್, ಮಹಾ ಪಂಚಾಯತ್ಗಾಗಿ ಈಗಾಗಲೇ ಕೋಲ್ಕತ್ತಕ್ಕೆ ತೆರಳಿದ್ದಾರೆ. ಹಾಗೇ, ನಾನು ಯಾವ ರಾಜಕೀಯ ಪಕ್ಷದ ಪರವಾಗಿ ಮತ ಯಾಚನೆ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ರಾಕೇಶ್ ಟಿಕಾಯತ್ ಕೋಲ್ಕತ್ತಕ್ಕೆ ತೆರಳುವುದಕ್ಕೂ ಮೊದಲು ಜೋಧಪುರದಲ್ಲಿ ಮಾತನಾಡಿ, ಮತ್ತೊಮ್ಮೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವ ಬಗ್ಗೆ ತಿಳಿಸಿದ್ದಾರೆ. ಏಪ್ರಿಲ್ 5ರಂದು ನಮ್ಮ ರೈತರ ಟ್ರ್ಯಾಕ್ಟರ್ಗಳು ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಬೆಳೆಸಲಿವೆ. ಒಂದೊಮ್ಮೆ ಅಂದು ಪ್ರಧಾನಿ ನರೇಂದ್ರ ಮೋದಿಯವರು ಹೆಲಿಕಾಪ್ಟರ್ನಲ್ಲಿ ಅಲ್ಲಿ ಬಂದರೆ, ಮೇಲಿಂದ ಕೆಳಗೆ ನೋಡಲಿ. ನಾವು ಅವರನ್ನು ಟ್ರ್ಯಾಕ್ಟರ್ನಲ್ಲಿ ಹಿಂಬಾಲಿಸುತ್ತೇವೆ. ದೆಹಲಿಯಲ್ಲಿ ಏನಾಯಿತು ಎಂಬುದನ್ನು ಅವರು ನೋಡದರೆ ಇದ್ದರೆ, ಪಶ್ಚಿಮ ಬಂಗಾಳಕ್ಕೆ ಬರಲಿ ಎಂದು ಹೇಳಿದ್ದಾರೆ.
ಬಿಜೆಪಿ ರೈತರಿಗೆ ನೋವುಂಟು ಮಾಡಿದೆ. ಕೇಂದ್ರ ಸರ್ಕಾರದ ವಿರುದ್ಧದ ಹೋರಾಟವನ್ನು ಪಶ್ಚಿಮ ಬಂಗಾಳದಲ್ಲಿ ಮುಂದುವರಿಸಲಾಗುವುದು. ಹಾಗಾಗಿ ಅಲ್ಲೇ ಉಳಿಯಬೇಕಾಗುತ್ತದೆ. ಅಲ್ಲಿನ ಜನರು ಬಿಜೆಪಿ ಪರವಾಗಿ ಇಲ್ಲ, ಆ ಪಕ್ಷವನ್ನು ಸೋಲಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ರೈತರೊಂದಿಗೆ ಟ್ರ್ಯಾಕ್ಟರ್ನಲ್ಲಿ ಏಪ್ರಿಲ್ 5ರಂದು ಪಶ್ಚಿಮ ಬಂಗಾಳಕ್ಕೆ ತಲುಪುತ್ತೇನೆ ಎಂದಿದ್ದಾರೆ.
ಕೇಂದ್ರದ ವಿರುದ್ಧ ಕಿಡಿಕಾರುತ್ತಿರುವ ರೈತ ಮುಖಂಡರು
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಭಾರತೀಯ ಕಿಸಾನ್ ಯೂನಿಯನ್ ಸೇರಿ ಹಲವು ರೈತ ಸಂಘಟನೆಗಳು ತಿರುಗಿಬಿದ್ದಿವೆ. ಅದನ್ನ ಸಂಪೂರ್ಣವಾಗಿ ರದ್ದುಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದಿವೆ. ಈ ಮಧ್ಯೆ ಜನವರಿ 26ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ‍್ಯಾಲಿ ಅದೆಷ್ಟು ಹಿಂಸಾತ್ಮಕ ತೂಪ ತಾಳಿತ್ತು ಎಂಬುದನ್ನು ಇಡೀ ದೇಶ ನೋಡಿದೆ. ಅದಾದ ಬಳಿಕ ಕೂಡ ರೈತರ ಪ್ರತಿಭಟನೆ ನಿಂತಿಲ್ಲ. ಇದೀಗ ಇನ್ನೊಂದು ಸ್ವರೂಪದ ಹೋರಾಟಕ್ಕೆ ಮುಂದಾಗಿರುವ ರೈತ ಒಕ್ಕೂಟಗಳು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರಕ್ಕೆ ನಿಂತಿವೆ. ಮೊದಲ ಭಾಗವಾಗಿ ರೈತ ಮುಖಂಡ ರಾಕೇಶ್ ಟಿಕಾಯತ್, ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲೇ ಮೊದಲ ಮಹಾಪಂಚಾಯತ್ ನಡೆಸಿದ್ದಾರೆ. ಈ ನಂದಿಗ್ರಾಮದಲ್ಲಿ ಬಿಜೆಪಿಯಿಂದ ಸುವೇಂದು ಅಧಿಕಾರಿ ಕಣಕ್ಕಿಳಿದಿದ್ದರೆ ಅವರ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿಯವರೇ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಮಹಿಳೆಯರ ಬೆಂಬಲ; ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ
ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಮಹಿಳೆಯರ ಬೆಂಬಲ; ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ
Published On - 6:59 pm, Sat, 13 March 21