75 Years of India’s Independence: ಸ್ವಾತಂತ್ರ್ಯದ ಪಯಣ ನೆನಪಿಸುವ ವಸ್ತುಪ್ರದರ್ಶನ ಉದ್ಘಾಟಿಸಿದ ಪ್ರಕಾಶ್ ಜಾವಡೇಕರ್
ಇದೇ ರೀತಿಯ ವಸ್ತು ಪ್ರದರ್ಶನ ಭಾರತದ ಇತರ ಐದು ನಗರಗಳಲ್ಲಿಯೂ ಉದ್ಘಾಟನೆಗೊಂಡಿದೆ. ಬೆಂಗಳೂರು, ಭುವನೇಶ್ವರ್, ಪಾಟ್ನಾ, ಸಂಬಾ (ಜಮ್ಮು & ಕಾಶ್ಮೀರ) ಹಾಗೂ ಮೊಯ್ರಂಗ್ನಲ್ಲೂ (ಮಣಿಪುರ) ವಸ್ತುಪ್ರದರ್ಶನ ಉದ್ಘಾಟನೆಗೊಂಡಿದೆ.
ಪುಣೆ: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು (Azadi ka Amrit Mohotsav) ಈ ಬಾರಿ ದೇಶಾದ್ಯಂತ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಿದ್ದಾರೆ. ಇದರ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದೂ ಮೋದಿ ಹೇಳಿದ್ದಾರೆ. ಅದರಂತೆ ಇಂದು (ಮಾರ್ಚ್ 13) ಪುಣೆಯಲ್ಲಿ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ.
ಪುಣೆಯ ಆಗಾ ಖಾನ್ ಅರಮನೆಯಲ್ಲಿ ಉದ್ಘಾಟನೆಗೊಂಡಿರುವ ವಸ್ತು ಪ್ರದರ್ಶನವು ಮಾರ್ಚ್ 15ರ ತನಕ ನಡೆಯಲಿದೆ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ವಸ್ತು ಪ್ರದರ್ಶನ ಗೌರವ ಸೂಚಿಸಲಿದೆ. ನಮ್ಮ ದೇಶದ ಸ್ವಾತಂತ್ರ್ಯ ಬಹಳ ಕಷ್ಟಪಟ್ಟು ಪಡೆದಂಥದ್ದು. ತ್ಯಾಗ-ಬಲಿದಾನಗಳ ಮೂಲಕ ಸಿಕ್ಕಿದ್ದು. ಹಾಗಾಗಿ, ಎಲ್ಲರಿಗೂ ಸ್ವಾತಂತ್ರ್ಯದ ಪಯಣ, ಅದರ ಕಷ್ಟಗಳು ಅರ್ಥವಾಗಬೇಕು ಎಂದು ಜಾವಡೇಕರ್ ಹೇಳಿದ್ದಾರೆ.
ಸ್ವಾತಂತ್ರ್ಯ ಭಾರತದ ವಿವಿಧ ಸಾಧನೆಗಳನ್ನು ಪ್ರದರ್ಶನ ಮಾಡುವುದು ಕೂಡ 75ನೇ ಸ್ವಾತಂತ್ರ್ಯ ವರ್ಷದ ಉದ್ದೇಶವಾಗಿದೆ. ಜತೆಗೆ, ಮುಂದಿನ 25 ವರ್ಷಗಳ ಭಾರತದ ಅಭಿವೃದ್ಧಿಯನ್ನು ತೋರಿಸುವುದು. ವಿಶ್ವದ ಮುಂದುವರಿದ ದೇಶವಾಗಿ ಕಾಣಿಸಿಕೊಳ್ಳುವುದು. ಸ್ವರಾಜ್ಯವಾಗಿ ಬೆಳೆಯುವುದು ನಮ್ಮ ಉದ್ದೇಶ ಎಂದು ಈ ಅಂಶಗಳನ್ನು ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಇದೇ ರೀತಿಯ ವಸ್ತು ಪ್ರದರ್ಶನ ಭಾರತದ ಇತರ ಐದು ನಗರಗಳಲ್ಲಿಯೂ ಉದ್ಘಾಟನೆಗೊಂಡಿದೆ. ಬೆಂಗಳೂರು, ಭುವನೇಶ್ವರ್, ಪಾಟ್ನಾ, ಸಂಬಾ (ಜಮ್ಮು & ಕಾಶ್ಮೀರ) ಹಾಗೂ ಮೊಯ್ರಂಗ್ನಲ್ಲೂ (ಮಣಿಪುರ) ವಸ್ತುಪ್ರದರ್ಶನ ಉದ್ಘಾಟನೆಗೊಂಡಿದೆ.
Inauguration of #AmritMahotsav at 6 cities https://t.co/3RmHSnQFwk
— Prakash Javadekar (@PrakashJavdekar) March 13, 2021
ಆಗಾ ಖಾನ್ ಅರಮನೆ ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕ್ವಿಟ್ ಇಂಡಿಯಾ ಚಳುವಳಿ ಪರಿಣಾಮ, 1942ರಲ್ಲಿ ಮಹಾತ್ಮ ಗಾಂಧಿ 21 ತಿಂಗಳುಗಳ ಕಾಲ ಇಲ್ಲಿ ಬಂಧನವನ್ನೂ ಅನುಭವಿಸಿದ್ದಾರೆ. ಅಂಥಾ ಅರಮನೆ ಈಗ ವಸ್ತು ಸಂಗ್ರಹಾಲಯವಾಗಿದೆ.
ಪತ್ರಿಕಾ ಪ್ರಕಟಣೆಯ ಮಾಹಿತಿಯಂತೆ ಕ್ವಿಟ್ ಇಂಡಿಯಾ ಚಳುವಳಿ ಶುರುವಾದ ಸೇವಾಗ್ರಾಮ್, ವಾರ್ಧಾ ಮತ್ತು ಮುಂಬೈ ನಗರಗಳಲ್ಲೂ ಇಂಥಾ ವಸ್ತು ಪ್ರದರ್ಶನ ಆಯೋಜನೆಗೊಳ್ಳಲಿದೆ. ರಾಜ್ಯ ಸರ್ಕಾರಗಳು ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ವಾರಗಳ ಕಾಲ ಈ ಸಮಾರಂಭಗಳು ನಡೆಯಲಿದೆ.
ಇದನ್ನೂ ಓದಿ: 75 Years 0f Indias Independence: ಕಿತ್ತೂರು ಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ
75 years of Indias Independence: ಆತ್ಮನಿರ್ಭರ ಭಾರತದ ಮೂಲಕ ಗಾಂಧೀಜಿಯವರ ಕನಸು ನನಸಾಗಿಸೋಣ: ಪ್ರಧಾನಿ ಕರೆ
Published On - 8:28 pm, Sat, 13 March 21