ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿದು, ಬಳಿಕ ಉಂಟಾದ ಹಿಂಸಾಚಾರ (Lakhimpur Kheri violence)ಕ್ಕೆ ಸಂಬಂಧಪಟ್ಟಂತೆ ನಾಳೆಯೊಳಗೆ (ಅಕ್ಟೋಬರ್ 8) ಘಟನೆಯ ಸ್ಥಿತಿ ವರದಿ (Status Report) ಸಲ್ಲಿಸುವಂತೆ ಸುಪ್ರೀಂಕೋರ್ಟ್ ಇಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಈ ಹಿಂಸಾಚಾರದಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದು, ಅದರಲ್ಲಿ ನಾಲ್ವರು ರೈತರೇ ಆಗಿದ್ದಾರೆ. ಪ್ರಕರಣದ ವಿಚಾರಣೆ ಇಂದು ನಡೆಸಿರುವ ಸುಪ್ರೀಂಕೋರ್ಟ್, ನಾಳೆಯೊಳಗೆ ಕೋರ್ಟ್ಗೆ ಘಟನೆಯ ಸ್ಥಿತಿ ವರದಿ ಸಲ್ಲಿಸಬೇಕು. ಅದರಲ್ಲಿ ಪ್ರಕರಣದ ಆರೋಪಿಗಳ ಬಗ್ಗೆ ವಿವರ ಇರಬೇಕು. ಒಂದೊಮ್ಮೆ ಆರೋಪಿಗಳನ್ನು ಬಂಧಿಸಿದ್ದರೆ ಅದರ ಉಲ್ಲೇಖವೂ ಇರಬೇಕು. ಅದರ ಜತೆ, ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿರುವ ಮೃತ ರೈತ ಲವಪ್ರೀತ್ ಸಿಂಗ್ರ ತಾಯಿಗೆ ನೀಡಲಾಗಿರುವ ವೈದ್ಯಕೀಯ ನೆರವಿನ ಬಗ್ಗೆಯೂ ಸಮಗ್ರ ಮಾಹಿತಿ ಇರಬೇಕು ಎಂದು ಹೇಳಿದೆ. ಹಾಗೇ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಪ್ರಕರಣವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಚಣೆಗೆ ಕೈಗೆತ್ತಿಕೊಂಡಿತ್ತು. ಇಂದು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾ.ಸೂರ್ಯಕಾಂತ್, ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು. ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆದ ಪ್ರಕರಣದ ಬಗ್ಗೆ ಸುಮೊಟೊ ದಾಖಲಿಸಿಕೊಳ್ಳಬೇಕು ಎಂದು ಇಬ್ಬರು ವಕೀಲರು ಸಿಜೆಐ ಎನ್. ವಿ.ರಮಣ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಒಬ್ಬರಾದ ಶಿವಕುಮಾರ್ ತ್ರಿಪಾಠಿ ಅವರಿಗೆ ವಾದ ಮಂಡಿಸಲು ಸುಪ್ರೀಂಕೋರ್ಟ್ ಇಂದು ಅವಕಾಶ ಮಾಡಿಕೊಟ್ಟಿತ್ತು.
ತಮ್ಮ ವಾದವನ್ನು ನ್ಯಾಯಾಲಯದ ಎದುರು ಮಂಡಿಸಿದ ತ್ರಿಪಾಠಿ, ಲಖಿಂಪುರ ಖೇರಿಯ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಪ್ರಜಾಪ್ರಭುತ್ವದ ಹಕ್ಕು ರಕ್ಷಣೆ ಮಾಡಲಿಲ್ಲ. ಆರೋಪಿಗಳ ವಿರುದ್ಧ ಕೂಡಲೇ ಎಫ್ಐಆರ್ ದಾಖಲು ಮಾಡಬೇಕು ಎಂದು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್ ಪೀಠ, ಈಗಾಗಲೇ ಎಫ್ಐಆರ್ ದಾಖಲಾಗಿದ್ದು ನಮ್ಮ ಗಮನಕ್ಕೆ ಬಂದಿದೆ ಎಂದೂ ಹೇಳಿದೆ. ಇನ್ನು ಉತ್ತರಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಶಾದ್, ಲಖಿಂಪುರದಲ್ಲಿ ಏನು ನಡೆಯಿತೋ ಅದು ನಿಜಕ್ಕೂ ದುರ್ದೈವ. ಈ ಸಂಬಂಧ ತನಿಖೆ ನಡೆಸಲು ಎಸ್ಐಟಿ ರಚನೆಯಾಗಿದೆ. ಅಷ್ಟೇ ಅಲ್ಲ, ನಿವೃತ್ತ ನ್ಯಾಯಾಧೀಶರೊಬ್ಬರು ತನಿಖೆ ನಡೆಸಲಿದ್ದಾರೆ. ಇನ್ನುಳಿದಂತೆ ಎಲ್ಲ ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಕೋರ್ಟ್ಗೆ ಹೇಳಿದ್ದಾರೆ.
ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಸೂರ್ಯಕಾಂತ್, ನಮಗೆ ಬಂದ ಮಾಹಿತಿಯ ಪ್ರಕಾರ ಲೆಖಿಂಪುರ ಖೇರಿಯಲ್ಲಿ ಮೃತಪಟ್ಟ 8 ಮಂದಿಯಲ್ಲಿ ನಾಲ್ವರು ರೈತರು, ಒಬ್ಬ ಪತ್ರಕರ್ತ ಎಂದು ಹೇಳಲಾಗಿದೆ. ಆದರೆ ನಮಗೆ ಆರೋಪಿ ಯಾರು? ಯಾರ್ಯಾರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾದವರನ್ನು ಬಂಧಿಸಲಾಗಿದೆಯಾ? ಎಂಬಿತ್ಯಾದಿ ಸಮಗ್ರ ವಿವರಗಳು ನಮಗೆ ಗೊತ್ತಾಗಬೇಕು. ಈ ಎಲ್ಲ ಅಂಶಗಳನ್ನೂ ಸ್ಥಿತಿ ವರದಿಯಲ್ಲಿ ಸಲ್ಲಿಸಿ ಎಂದು ಹೇಳಿದ್ದಾರೆ. ಇನ್ನು ಮೃತ ರೈತ ಲವಪ್ರೀತ್ ಸಿಂಗ್ ತಾಯಿಯ ಬಗೆಗಿನ ಉಲ್ಲೇಖವನ್ನು ಸಿಜೆಐ ಎನ್.ವಿ.ರಮಣ ಮಾಡಿದ್ದಾರೆ. ಲವಪ್ರೀತ್ ಸಿಂಗ್ ಸಾವಿನ ಸುದ್ದಿಯಿಂದ ಅವರು ತೀವ್ರವಾಗಿ ಶಾಕ್ಗೆ ಒಳಗಾಗಿದ್ದಾರೆ ಎಂದು ಕೇಳಲ್ಪಟ್ಟಿದ್ದೇವೆ. ಅಸ್ವಸ್ಥರಾದ ಅವರಿಗೆ ಸೂಕ್ತ ವೈದ್ಯಕೀಯ ನೆರವು ಸಿಕ್ಕಿದೆಯಾ ಎಂದು ಪ್ರಶ್ನಿಸಿದ್ದಾರೆ.
Published On - 12:53 pm, Thu, 7 October 21