Lakhimpur Kheri Violence: ಲಖಿಂಪುರ ಖೇರಿ ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದುದು ನಿಜವಾದರೆ ರಾಜೀನಾಮೆ ನೀಡುತ್ತೇನೆ; ಸಚಿವ ಅಜಯ್ ಮಿಶ್ರಾ

TV9 Digital Desk

| Edited By: Sushma Chakre

Updated on:Oct 05, 2021 | 1:30 PM

Ajay Kumar Mishra : ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆ ನಡೆದ ಸ್ಥಳದಲ್ಲಿ ನನ್ನ ಮಗ ಇದ್ದುದಕ್ಕೆ ಸಾಕ್ಷಿ ಸಿಕ್ಕಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ.

Lakhimpur Kheri Violence: ಲಖಿಂಪುರ ಖೇರಿ ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದುದು ನಿಜವಾದರೆ ರಾಜೀನಾಮೆ ನೀಡುತ್ತೇನೆ; ಸಚಿವ ಅಜಯ್ ಮಿಶ್ರಾ
ಅಜಯ್ ಕುಮಾರ್ ಮಿಶ್ರಾ
Follow us

ಲಕ್ನೋ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ 8 ಮಂದಿ ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್​ ಮಿಶ್ರಾ ಅವರ ಮಗ ಆಶಿಶ್ ಸೇರಿದಂತೆ ಇನ್ನಿತರರ ವಿರುದ್ಧ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು, ಅವರ ಮಗನನ್ನು ಬಂಧಿಸಬೇಕೆಂಬ ಒತ್ತಾಯಗಳು ಹೆಚ್ಚಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ರಾಜ್ಯ ಸಚಿವ ಅಜಯ್ ಮಿಶ್ರಾ, ‘ಲಖಿಂಪುರ ಹಿಂಸಾಚಾರದ ಸ್ಥಳದಲ್ಲಿ ನನ್ನ ಮಗ ಇದ್ದುದು ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದಿದ್ದಾರೆ.

ಲಖಿಂಪುರ ಖೇರಿಯ ಹಿಂಸಾಚಾರದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಲು ಬಂದಿದ್ದ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೇಶವ ಪ್ರಸಾದ್​ ಇದ್ದ ಕಾರನ್ನು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಅದರಲ್ಲಿ ಒಂದು ಖಾರು ಚಲಾಯಿಸಿದ್ದು ಅಜಯ್ ಮಿಶ್ರಾ ಅವರ ಮಗ ಆಶಿಶ್ ಎಂದು ಎಫ್​ಐಆರ್ ದಾಖಲಿಸಲಾಗಿತ್ತು.

ಇಬ್ಬರು ರೈತರು ಸಾವನ್ನಪ್ಪಿದ ನಂತರ ಹಿಂಸಾಚಾರ ಹೆಚ್ಚಾಗಿ ನಿಷೇಧಾಜ್ಞೆ ಘೋಷಿಸಲಾಗಿತ್ತು. ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮೃತರ ಕುಟುಂಬಗಳಿಗೆ 45 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡುವ ಭರವಸೆ ನೀಡಿದೆ. ಹಾಗೇ ಗಾಯಾಳುಗಳಿಗೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದೆ.

ಇಂದು ಪ್ರತಿಕ್ರಿಯೆ ನೀಡಿರುವ ಅಜಯ್ ಮಿಶ್ರಾ, ರೈತರ ಹತ್ಯೆ ನಡೆದ ಸ್ಥಳದಲ್ಲಿ ನನ್ನ ಮಗ ಇದ್ದುದಕ್ಕೆ ಸಾಕ್ಷಿ ಸಿಕ್ಕಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಭಾನುವಾರ ರಾತ್ರಿ ಆ ಸ್ಥಳದಲ್ಲಿ ನನ್ನ ಮಗ ಆಶಿಶ್ ಇರಲೇ ಇಲ್ಲ. ಅವನು ಅಲ್ಲಿದ್ದ ಎಂಬುದಕ್ಕೆ ಯಾವುದೇ ಫೋಟೋ, ವಿಡಿಯೋಗಳ ಸಾಕ್ಷಿಯಿಲ್ಲ. ಆದರೆ, ಆತ ಅಲ್ಲಿರಲಿಲ್ಲ ಎಂಬುದಕ್ಕೆ ನನ್ನ ಬಳಿ ವಿಡಿಯೋ ಸಾಕ್ಷಿಗಳಿವೆ. ವಿನಾಕಾರಣ ಅವನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆಶಿಶ್ ಭಾನುವಾರ ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂದು ಹಿಂಸಾಚಾರ ನಡೆದ ದಿನ ಅಜಯ್ ಮಿಶ್ರಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Priyanka Gandhi: ಬಂಧನದ ಬಳಿಕ ಪೊರಕೆ ಹಿಡಿದು ಕಸ ಗುಡಿಸಿದ ಪ್ರಿಯಾಂಕಾ ಗಾಂಧಿ; ವೈರಲ್ ವಿಡಿಯೋ ಇಲ್ಲಿದೆ

Lakhimpur Kheri Violence: ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತಲಾ 45 ಲಕ್ಷ ರೂ.ಪರಿಹಾರ; ಯುಪಿ ಸರ್ಕಾರ ಘೋಷಣೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada