ಹಿಸಾರ್: ಈ ತಿಂಗಳ ಆರಂಭದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಕ್ಕಾಗಿ 300 ಕ್ಕೂ ಹೆಚ್ಚು ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿದನ್ನು ವಿರೋಧಿಸಿ ಹರ್ಯಾಣದ ಹಿಸಾರ್‌ನ ರೈತರು ಇಂದು ಪ್ರತಿಭಟಿಸಲಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ 40 ಕ್ಕೂ ಹೆಚ್ಚು ಕೃಷಿ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಈ ಪ್ರತಿಭಟನೆಯನ್ನು ಮೇ 26 ರಿಂದ ಚಳವಳಿಯನ್ನು ತೀವ್ರಗೊಳಿಸಲು ಕರೆ ನೀಡಿದೆ. ಕೃಷಿ ಕಾನೂನು ವಿರುದ್ಧದ ರೈತರ ಪ್ರತಿಭಟನೆ ಆರು ತಿಂಗಳು ಪೂರ್ಣಗೊಂಡಿದೆ.
ಸೋಮವಾರದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಡಳಿತವು ಹಿಸಾರ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.ವಿಶೇಷವಾಗಿ ಪೊಲೀಸ್ ಕಮಿಷನರೇಟ್‌ನ್ನು ಬಲಪಡಿಸಿದೆ. ಮೇ 16 ರ ಸಂಘರ್ಷಕ್ಕೆ ಸಂಬಂಧಿಸಿ 350 ಅಪರಿಚಿತ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿ ಪೊಲೀಸರ ನಿರ್ಧಾರವನ್ನು ವಿರೋಧಿಸಿ ರೈತರು “ಘೆರಾವ್” ಮಾಡಲಿದ್ದು ಲಾಠಿ ಚಾರ್ಜ್ ಮಾಡಿದ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಿದ್ದಾರೆ.
ಮೇ 16 ರಂದು ಕೃಷಿ ಕಾನೂನುಗಳನ್ನು ವಿರೋಧಿಸಿ ಒಂದು ಭಾಗದ ರೈತರು, ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕೋವಿಡ್ -19 ಆಸ್ಪತ್ರೆಯನ್ನು ಉದ್ಘಾಟಿಸುವ ಸ್ಥಳದತ್ತ ಮೆರವಣಿಗೆ ನಡೆಸಲು ಪ್ರಯತ್ನಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತು. ಅಶ್ರುವಾಯು ಶೆಲ್ ಹಾರಿಸಿದ್ದರಿಂದ ಮತ್ತು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಆದಾಗ್ಯೂ, ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಖಟ್ಟರ್ ಆಸ್ಪತ್ರೆಯನ್ನು ಉದ್ಘಾಟಿಸಿದ ನಂತರ ಪೊಲೀಸ್ ಕ್ರಮದಿಂದ ಕೋಪಗೊಂಡ ರೈತರು ಹರ್ಯಾಣದ ಹಲವಾರು ಪ್ರಮುಖ ಹೆದ್ದಾರಿಗಳನ್ನು ತಡೆದಿದ್ದರು. ಪ್ರತಿಭಟನಾ ನಿರತ ಕೆಲವು ರೈತರ ಬಂಧನದ ವಿರುದ್ಧ ಹಿಸಾರ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಅವರ ನಿವಾಸವನ್ನು ರೈತರು ಘೆರಾವ್ ಮಾಡಿದ್ದರು. ಬಂಧಿತರನ್ನು ಬಿಡುಗಡೆ ಮಾಡಿದ ನಂತರವೇ ರೈತರು ಅಲ್ಲಿಂದ ಚದುರಿದ್ದು.
ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕೇಂದ್ರ ಬಿಂದುವಾಗಿ ಹರ್ಯಾಣ ಮತ್ತು ಅದರ ನೆರೆಯ ರಾಜ್ಯವಾದ ಪಂಜಾಬ್ ಹೊರಹೊಮ್ಮಿವೆ. ಈ ರಾಜ್ಯಗಳಲ್ಲಿ ರೈತರು ದೆಹಲಿಯ ಮೂರು ಗಡಿಗಳಲ್ಲಿ ಪ್ರತಿಭಟನಾ ನಿರತರಾಗಿದ್ದು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂಗೀಕಾರಗೊಂಡ ಕಾನೂನು ಬಗ್ಗೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆಗಳು ನಡೆದು ವಿಫಲವಾಗಿತ್ತು . 11 ಸುತ್ತಿನ ಮಾತುಕತೆಗಳು ನಡೆದಿದ್ದರೂ ಪ್ರಯೋಜನವಾಗಲಿಲ್ಲ. ಜನವರಿ 22 ರಂದು ಕೇಂದ್ರ ಸರ್ಕಾರ ಮತ್ತು ರೈತರು ಕೊನೆಯದಾಗಿ ಮಾತುಕತೆ ನಡೆಸಿದ್ದರು.
ಮೇ 26ರಂದು ಕರಾಳ ದಿನ ಆಚರಿಸಲಿರುವ ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆಗೆ 12 ಪ್ರತಿಪಕ್ಷಗಳ ಬೆಂಬಲ
ಕೊರೊನಾ ವೈರಸ್ ಉಲ್ಬಣದ ಮಧ್ಯೆಯೂ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ರೈತರಿಗೆ ದೇಶದ 12 ಪ್ರಮುಖ ಪ್ರತಿಪಕ್ಷಗಳು ಬೆಂಬಲ ಸೂಚಿಸಿ ಹೇಳಿಕೆ ಬಿಡುಗಡೆ ಮಾಡಿವೆ. ಹಾಗೆ ಮೇ 26ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರಾಳ ದಿನ ಆಚರಿಸಲು ನಿರ್ಧಾರ ಮಾಡಿರುವುದಕ್ಕೂ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಈ 12 ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೊವಿಡ್ 19 ನಿಯಂತ್ರಣಕ್ಕಾಗಿ 9 ಸಲಹೆಗಳನ್ನು ನೀಡಿದ್ದವು. ಇದೀಗ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲ ನೀಡುವುದಾಗಿ ತಿಳಿಸಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಮ್ಮ ದೇಶದ ಲಕ್ಷಾಂತರ ಅನ್ನದಾತರು ಕಳೆದ ಆರು ತಿಂಗಳುಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ನಾವು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಲಿಖಿತ ಹೇಳಿಕೆಯಲ್ಲಿ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಎಂ.ಕೆ.ಸ್ಟಾಲಿನ್ ಸೇರಿ ಹಲವು ಪ್ರಮುಖ ನಾಯಕರ ಸಹಿ ಇದೆ.
ಇದನ್ನೂ ಓದಿ: ಹರ್ಯಾಣದ ಹಿಸಾರ್‌ನಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ